ಸೋಮವಾರ, ಜೂನ್ 14, 2021
28 °C
ದಕ್ಷಿಣ ಕನ್ನಡ ಮಿತ್ರ ವೃಂದದಿಂದ ಪ್ರತಿಭಾ ಪುರಸ್ಕಾರ

ಉತ್ತಮ ಸಾಧನೆ ಮಾಡಲು ಮಕ್ಕಳಿಗೆ ಸಲಹೆ: ಜಯಪ್ರಕಾಶ್ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಮತ್ತಷ್ಟು ಸಾಧನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಮಿತ್ರ ವೃಂದದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ಪೋಷಕರ ಆಶಯದಂತೆ ಸಾಧನೆ ಮಾಡಿ ತೋರಿಸಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸಮಾಜದಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮಟ್ಟಕ್ಕೆ ಬೆಳೆಯಬೇಕು. ಹೆಣ್ಣುಮಕ್ಕಳಂತೆ ಗಂಡು ಮಕ್ಕಳು ಸಹ ಉತ್ತಮ ಅಂಕಗಳನ್ನು ಪಡೆಯಬೇಕು. ಶ್ರದ್ಧೆ, ಶ್ರಮವಹಿಸಿದರೆ ಗುರಿ ತಲುಪಲು ಸಾಧ್ಯ’ ಎಂದು ಸಲಹೆ ನೀಡಿದರು.

ದಕ್ಷಿಣ ಕನ್ನಡ ಮಿತ್ರ ವೃಂದದ ಅಧ್ಯಕ್ಷ ಅಮರನಾಥಶೆಟ್ಟಿ, ‘ಕಳೆದ 34 ವರ್ಷಗಳಿಂದ ಜಿಲ್ಲೆಯಲ್ಲಿ ಸಂಘವು ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ನಗರದಲ್ಲಿ ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸಂಘದ ಸದಸ್ಯರು ಸಹಕಾರ ನೀಡಿದರೆ ಒಂದೆರಡು ವರ್ಷಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಬಹುದು’ ಎಂದು ಹೇಳಿದರು.

ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ‘ದಕ್ಷಿಣ ಕನ್ನಡದವರು ಇಂದು ವಿಶ್ವದಾದ್ಯಂತ ಇದ್ದಾರೆ. ಉದ್ಯೋಗ ಅರಸಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮ ಸ್ಥಾಪನೆಯಲ್ಲೂ ಮುಂಚೂಣಿಯಲ್ಲಿ ಇದ್ದಾರೆ. ಅದಕ್ಕೆ ಅವರಲ್ಲಿರುವ ಧೈರ್ಯವೇ ಕಾರಣ’ ಎಂದು ಬಣ್ಣಿಸಿದರು.

ದಕ್ಷಿಣ ಕನ್ನಡ ಮಿತ್ರ ವೃಂದದ ಕಾರ್ಯದರ್ಶಿ ಎಂ.ಎಸ್‌. ವೆಂಕಟೇಶ್, ಉಪಾಧ್ಯಕ್ಷ ಎಂ. ಶೇಖರ್, ಮುಖಂಡರಾದ ಶ್ರೀಧರ್, ನವೀನ್‍ ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.