ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ದಾಸೋಹ ಸಿಬ್ಬಂದಿ ಧರಣಿ

ಬಿಸಿಯೂಟ ತಯಾರಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ‍್ರತಿಭಟನೆ
Last Updated 5 ಜನವರಿ 2021, 8:10 IST
ಅಕ್ಷರ ಗಾತ್ರ

ತುಮಕೂರು: ಸೇವಾ ಭದ್ರತೆ ಒದಗಿಸುವುದು, ಕನಿಷ್ಠ ವೇತನ ನಿಗದಿ, ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘಟನೆ ಕಾರ್ಯಕರ್ತೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಎಐಟಿಯುಸಿ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ಬಿಸಿಯೂಟ ತಯಾರಕರು, ನಮಗೆ ಸೇವಾ ಭದ್ರತೆ ಒದಗಿಸಬೇಕು. ಬಿಸಿಯೂಟ ತಯಾರಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ‘18 ವರ್ಷಗಳಿಂದ ಸರ್ಕಾರ ಅಕ್ಷರ ದಾಸೋಹ ಯೋಜನೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಕೀಳಾಗಿ ಕಾಣುತ್ತಿದೆ. ಅವರಿಗೆ ಕನಿಷ್ಠ ವೇತನ ಜಾರಿ ಮಾಡಿಲ್ಲ. ಕಡಿಮೆ ಕೂಲಿಗೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿದೆ’ ಎಂದು ದೂರಿದರು.

ಕೋವಿಡ್–19 ಲಾಕ್‍ಡೌನ್‍ ಪರಿಣಾಮ ಶಾಲೆಗಳು ಮುಚ್ಚಿವೆ. 8 ತಿಂಗಳಿನಿಂದ ವೇತನವಿಲ್ಲದೆ ಪರಿತಪಿಸುವಂತಾಗಿದೆ. ಎಐಟಿಯುಸಿ ನಿರಂತರ ಹೋರಾಟದ ಫಲವಾಗಿ ಸರ್ಕಾರ 2020ರ ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳ ವೇತನ ಬಿಡುಗಡೆ ಮಾಡಿದೆ. ಇದಕ್ಕಾಗಿ ಧನ್ಯವಾದ ತಿಳಿಸುತ್ತೇವೆ. ಆದರೆ, ಕೋವಿಡ್ ಹಾವಳಿ ಇಂದಿಗೂ ಮುಂದುವರಿದಿದೆ. ಶಾಲೆ ತೆರೆದಿದ್ದರೂ ಬಿಸಿಯೂಟ ತಯಾರಿಸಲು ಅವಕಾಶವಿಲ್ಲ ಎಂದರು.

ಸಂಘದ ಕಾನೂನು ಸಲಹೆಗಾರ ಶಿವಣ್ಣ ಮಾತನಾಡಿ, ಬಿಸಿಯೂಟ ತಯಾರಕರಿಗೆ ಕಾರ್ಮಿಕರ ಭವಿಷ್ಯ ನಿಧಿ, ಇಎಸ್‍ಐ ನೀಡಬೇಕು. ಇವರನ್ನು ಶಾಲಾ ಸಿಬ್ಬಂದಿ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಮತ್ತು ದಸರಾ ರಜಾ ದಿನಗಳನ್ನು ವೇತನ ರಹಿತಗೊಳಿಸದೆ, ವೇತನಸಹಿತ ರಜೆ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಸತ್ಯನಾರಾಯಣ, ಗುಬ್ಬಿ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಮ್ಮ, ತುಮಕೂರು ನಗರ ಅಧ್ಯಕ್ಷೆ ರಾಧಮ್ಮ, ಜಿಲ್ಲಾ ಸಂಚಾಲಕಿ ಉಮಾದೇವಿ, ಪುಷ್ಪಲತಾ, ನಾಗರತ್ನ, ಚಂದ್ರಕಲಾ, ನಳಿನಾ, ಗಂಗಮ್ಮ, ರಂಗತಾಯಮ್ಮ, ರಾಜಮ್ಮ, ಕಾಂತರಾಜು ಇದ್ದರು.

ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT