ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯ; ಚಿನ್ನದತ್ತ ಮೋಹ

ಮುಂಗಡ ಕಾಯ್ದಿರಿಸಿದ ಗ್ರಾಹಕರು: ಭರ್ಜರಿ ವ್ಯಾ‍ಪಾರದ ನಿರೀಕ್ಷೆ
Last Updated 2 ಮೇ 2022, 16:33 IST
ಅಕ್ಷರ ಗಾತ್ರ

ತುಮಕೂರು: ಅಕ್ಷಯ ತೃತೀಯ ಪ್ರಯುಕ್ತ ಚಿನ್ನ, ಬೆಳ್ಳಿ ಆಭರಣಗಳ ಖರೀದಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದ್ದು, ಕೆಲವರು ಈಗಾಗಲೇ ಮುಂಗಡ ಕಾಯ್ದಿರಿಸಿದ್ದಾರೆ.

ಸಾಮಾನ್ಯವಾಗಿ ಮಂಗಳವಾರ ಲಕ್ಷ್ಮಿಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವುದು ಕಡಿಮೆ. ಇನ್ನೂ ಯಾರಾದರೂ ಹಣ ಕೊಟ್ಟರಷ್ಟೇ ಪಡೆದುಕೊಳ್ಳುತ್ತಾರೆ. ಸಾಮಾನ್ಯ ಜನರು ಅಲ್ಪಸ್ವಲ್ಪ ಇಂತಹ ನಂಬಿಕೆ ಇಟ್ಟುಕೊಂಡಿದ್ದರೆ, ವ್ಯವಹಾರಸ್ಥರು ಮಾತ್ರ ಸಾಕಷ್ಟು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ.

ಆದರೆ, ಈ ಬಾರಿ ಮಂಗಳವಾರವೇ ಅಕ್ಷಯತೃತೀಯ ಬಂದಿದ್ದು, ಇದೂ ಸಹ ಶುಭ ದಿನವಾಗಿದೆ. ಮಂಗಳವಾರ ಎನ್ನುವುದಕ್ಕಿಂತ ಶುಭ ದಿನವಾಗಿದೆ ಎಂದುಕೊಂಡೇ ಜನರು ಚಿನ್ನ ಖರೀದಿಸಲಿದ್ದಾರೆ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಾರೆ.

ಈ ದಿನ ಬಂಗಾರ ಖರೀದಿ ಮಾಡಿ ದವರ ಮನೆ ಸಮೃದ್ಧವಾಗಿ ಬೆಳೆಯು ತ್ತದೆ. ಅವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ, ಎಲ್ಲಾ ಕಡೆ ವ್ಯಾಪಾರ ಜೋರಾಗಿಯೇ ನಡೆಯುತ್ತದೆ‌‌. ಹಿಂದಿನ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಹೆಚ್ಚಳವಾಗಿದ್ದರೂ ಮಳಿಗೆಗೆ ಭೇಟಿ ನೀಡಿ ಆಭರಣ ಖರೀದಿಸಲು ಮುಂದಾಗಿದ್ದಾರೆ.

ನಿರಂತರವಾಗಿ ಏರುತ್ತಲೇ ಬಂದಿದ್ದ ಚಿನ್ನದ ಬೆಲೆ ಕೆಲವು ದಿನಗಳಿಂದ ಕಡಿಮೆಯಾಗುತ್ತಿದ್ದು, ಬಂಗಾರ ಖರೀದಿಯತ್ತ ಜನರನ್ನು ಸೆಳೆಯುತ್ತಿದೆ. ಮಹಿಳೆಯರು ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೊಸದಾಗಿ ಮದುವೆಯಾದವರು, ಮದುವೆಗೆ ಸಿದ್ಧತೆ ಮಾಡಿಕೊಳ್ಳುವವರು ಅಕ್ಷಯ ತೃತೀಯ ದಿನದಂದೇ ಆಭರಣ ಖರೀದಿಗೆ ಮುಂದಾಗುತ್ತಾರೆ.

ಮಳಿಗೆಗಳಲ್ಲಿ ಗ್ರಾಹಕರಿಗೆ ಇಷ್ಟವಾಗುವ ಆಭರಣಗಳನ್ನು ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್‌ನಿಂದ ಕಳೆದ ಎರಡು ವರ್ಷಗಳಿಂದ ವ್ಯಾಪಾರ ವಹಿವಾಟು ಕುಸಿದಿತ್ತು. ಕೋವಿಡ್ ಲಾಕ್‌ಡೌನ್‌ ಕಾಲದಲ್ಲಿ ಮಳಿಗೆ ಮುಚ್ಚಿದ್ದರು. ಮದುವೆ, ಹಬ್ಬಗಳ ಸಮಯದಲ್ಲೂ ವ್ಯಾಪಾರ ಮಂಕಾಗಿತ್ತು. ಈ ವರ್ಷ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಅಕ್ಷಯ ತೃತೀಯ ಬರಮಾಡಿಕೊಳ್ಳುತ್ತಿದ್ದು, ಮಾಲೀಕರು ಸಾಕಷ್ಟು ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ನಗರದಲ್ಲಿ ಒಂದು ಗ್ರಾಂ ಚಿನ್ನದದರ ₹4,720 (24 ಕ್ಯಾರೇಟ್), ಬೆಳ್ಳಿ ಕೆ.ಜಿ ₹65 ಸಾವಿರ ಇದೆ. ಈ ದಿನ ಚಿನ್ನ, ಬೆಳ್ಳಿ ಆಭರಣಗಳ ಜೊತೆಗೆ ವಾಹನ, ಆಸ್ತಿ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯ ಪ್ರಯುಕ್ತ ಮನೆಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುತ್ತಾರೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ. ಹಾಗಾಗಿ ನಮ್ಮ ಕೈಲಾದಷ್ಟು ಬಂಗಾರ ಖರೀದಿಸುತ್ತೇವೆ. ಶುಭಗಳಿಗೆಯಲ್ಲಿ ಆಭರಣ ಖರೀದಿಸುವುದರಿಂದ ನಮ್ಮಲ್ಲಿ ಯಾವುದೇ ಕೌಟುಂಬಿಕ ಕಲಹಗಳು ಹಾಗೂ ಇತರೆ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ ಎಂದು ನಗರ ನಿವಾಸಿ ನಳಿನಾ ಹೇಳಿದರು.

ರಂಜಾನ್‌, ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಸೇರಿದಂತೆ ಮೂರು ಹಬ್ಬಗಳು ಒಂದೇ ದಿನ ಬಂದಿವೆ. ಇದರಿಂದ ಅಕ್ಷಯ ತೃತೀಯದ ಮೆರುಗು ಹೆಚ್ಚಿಸಿದೆ ಎಂದು ವರ್ತಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT