ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಮನವಿ

ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ನಿರ್ಣಯ
Last Updated 8 ಆಗಸ್ಟ್ 2021, 3:45 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ದೊಡ್ಡಕೆರೆ, ಮಂಗಳ ಮತ್ತು ಮಾರ್ಕೋನಹಳ್ಳಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳನ್ನು ಸಂರಕ್ಷಿಸಿ, ಸಕಾಲದಲ್ಲಿ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಚ್ಚುಕಟ್ಟುದಾರರ ಸಭೆಯಲ್ಲಿ ತೀವ್ರ ಚರ್ಚೆಯ ನಂತರ ಮಾತನಾಡಿದ ಜೆಡಿಎಸ್ ಮುಖಂಡ ಬಿ.ಎನ್.ಜಗದೀಶ್, ದೊಡ್ಡಕೆರೆ ವ್ಯಾಪ್ತಿಯಲ್ಲಿ 13 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಕೆರೆಗೆ ಹೇಮಾವತಿ ನೀರು ಹರಿದು ಬರುತ್ತಿದ್ದರೂ, ಕುಡಿಯುವ ನೀರಿನ ನೆಪವೂಡ್ಡಿ 14 ವರ್ಷಗಳಿಂದ ನೀರು ನೀಡಿಲ್ಲ. ಸಂಗ್ರಹವಾಗಿರುವ ನೀರು ಮಲೀನವಾಗುತ್ತಿದ್ದರೂ, ಸಂಪೂರ್ಣವಾಗಿ ಖಾಲಿ ಮಾಡಿ, ಹೇಮಾವತಿ ನೀರಿನಿಂದ ತುಂಬಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಕೆರೆಗಳು ಆಧಾರವಾಗಿದ್ದು, ಕುಡಿಯುವ ನೀರಿನ ನೆಪದಲ್ಲಿ ಅಚ್ಚುಕಟ್ಟುದಾರರಿಗೆ ಅನ್ಯಾಯವಾಗುತ್ತಿದೆ ಎಂದರು.

ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ರೈತರಲ್ಲಿ ಹೋರಾಟದ ಕೆಚ್ಚು ಕಡಿಮೆಯಾಗುತ್ತಿರುವುದರಿಂದ ನೀರಾವರಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡದಿದ್ದರೆ, ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಕಣ್ಮರೆಯಾಗುತ್ತದೆ. ಪ್ರಥಮ ಹಂತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು, ಸ್ಪಂದನೆ ಸಿಗದ್ದಿದ್ದರೆ ವ್ಯವಸ್ಥಿತ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಲಾಗುವುದು ಎಂದರು.

ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ಅಡಿ ನೀರು ಹಂಚಿಕೆ ಮಾಡಿರುವ ವಿಚಾರದಲ್ಲಿ, ಶಾಸಕ ಡಾ.ರಂಗನಾಥ್ ಮತ್ತು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್‌ ಅವರು ತಾಲ್ಲೂಕಿನ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚುವರಿ ನೀರು ಬಂದಾಗ ಮಾತ್ರ ಒಂದು ಟಿಎಂಸಿ ಅಡಿ ನೀರು ಹಂಚಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ತಾಲ್ಲೂಕಿಗೆ ವಂಚನೆಯಾಗಿದೆ ಎಂದರು.

ತರಿಕೆರೆ ಪ್ರಕಾಶ್ ಮಾತನಾಡಿ, ಮಾರ್ಕೋನಹಳ್ಳಿ ಜಲಾಶಯಕ್ಕೆ ಒಂದು ಟಿಎಂಸಿ ಅಡಿ ನೀರು ಹಂಚಿಕೆಯಲ್ಲಿ ಶಾಸಕರಾಗಲಿ, ಸಂಸದರಾಗಲಿ ಮತ್ತು ಬಿಜೆಪಿ ಸರ್ಕಾರದ ಪಾತ್ರವಿಲ್ಲ. ಮಠಾಧಿಪತಿಗಳ ಪಾತ್ರ ಹೆಚ್ಚಾಗಿರುವುದರಿಂದಲೇ, ನಾಗಮಂಗಲ ತಾಲ್ಲೂಕಿಗೆ ಕುಡಿಯುವ ನೀರು ಹರಿಸಿಕೊಳ್ಳುವ ಉದ್ದೇಶವಿದೆ. ನೀರು ಹಂಚಿಕೆಯಾಗಿದೆ ಎಂದು ಬೀಗುತ್ತಿರುವ ಮುಖಂಡರು ಮುಂದಿನ ದಿನಗಳಲ್ಲಿ ಉತ್ತರ ನೀಡಬೇಕಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಮುಖಂಡರಾದ ಶೇಷಣ್ಣ, ವರದರಾಜು, ರಂಗಸ್ವಾಮಿ, ಎಡೆಯೂರು ದೀಪೂ, ಈ.ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT