ಭಾನುವಾರ, ಆಗಸ್ಟ್ 25, 2019
24 °C

ನೆರೆ; ಅರಸು ಜನ್ಮದಿನ ಸಾಂಕೇತಿಕ ಆಚರಣೆ

Published:
Updated:
Prajavani

ತುಮಕೂರು: ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆರೆಹಾವಳಿ ಹೆಚ್ಚಿದೆ. ಜನರು ಪ್ರವಾಹದಿಂದ ತತ್ತರಿಸಿದ್ದಾರೆ. ಈ ಕಾರಣದಿಂದ ಆ.20ರಂದು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 104ನೇ ಜನ್ಮದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐದಾರು ವರ್ಷಗಳಿಂದ ಅರಸು ಅವರ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿಯೂ ಅದೇ ರೀತಿ ಆಚರಿಸಬೇಕು ಎನ್ನುವ ಆಶಯ ಇತ್ತು. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆ ಇರುವುದರಿಂದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಾಂಕೇತಿಕವಾಗಿ ಆಚರಿಸಿ ಗೌರವ ಸಲ್ಲಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದರು.

ಧೀಮಂತ ನಾಯಕ ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಇಂದಿನ ಯುವಜನಾಂಗಕ್ಕೆ ತಲುಪಿಸಲು ಕಿರುಹೊತ್ತಿಗೆಗಳನ್ನು ಪ್ರಕಟಿಸಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂದು ಮಧ್ಯಾಹ್ನ 3ಕ್ಕೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅರಸು ಕುರಿತ ನಾಟಕ ಪ್ರದರ್ಶನ ಏರ್ಪಡಿಸಲು ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳಿಗೆ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಸುಬ್ರಾನಾಯ್ಕ, ಬಲಿಜ, ದೇವಾಂಗ, ಸವಿತಾ ಸಮಾಜ, ಅಗ್ನಿವಂಶ, ಮಡಿವಾಳ, ಕುರುಬ ಮತ್ತಿತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Post Comments (+)