ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೆ ಸಿದ್ಧತೆ; ತುಮಕೂರಿಗೆ ಕುಮಾರಸ್ವಾಮಿ ಕರೆತರುವ ಪ್ರಯತ್ನ

ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭ; ಅಭ್ಯರ್ಥಿಗಾಗಿ ‘ಹುಡುಕಾಟ’
Published 3 ಜನವರಿ 2024, 14:15 IST
Last Updated 3 ಜನವರಿ 2024, 14:15 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟದಲ್ಲಿ ಮೂರು ಪಕ್ಷಗಳು ತೊಡಗಿದ್ದು, ಜೆಡಿಎಸ್– ಬಿಜೆಪಿ ಒಟ್ಟಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತಂದು ಸ್ಪರ್ಧೆಗೆ ಇಳಿಸುವ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ.

ಈಗಾಗಲೇ ಜೆಡಿಎಸ್, ಎನ್‌ಡಿಎ ಮೈತ್ರಿ ಕೂಟ ಸೇರಿದ್ದು, ಸೀಟು ಹಂಚಿಕೆ ಸಂಬಂಧ ಎರಡು ಪಕ್ಷಗಳಲ್ಲಿ ಮಾತುಕತೆಗಳು ನಡೆದಿವೆ. ತುಮಕೂರು ಲೋಕಸಭೆ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಸ್ಪಷ್ಟತೆ ಮೂಡದಿದ್ದರೂ ಕೊನೆ ಹಂತದಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಅದಕ್ಕೆ ಬಿಜೆಪಿ ಮುಖಂಡರು ಕೆಲವು ಕಾರಣಗಳನ್ನು ಪಟ್ಟಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಜೆಡಿಎಸ್ ‘ಶಕ್ತಿ’ಯನ್ನು ಅಲ್ಲಗೆಳೆಯುವಂತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ 8 ಕ್ಷೇತ್ರಗಳಲ್ಲಿ ಜೆಡಿಎಸ್ 4.69 ಲಕ್ಷ ಮತಗಳನ್ನು ಪಡೆದಿದ್ದು, ಬಜೆಪಿ 4.13 ಲಕ್ಷ ಮತ ಗಳಿಸಿದೆ. ಎರಡೂ ಪಕ್ಷಗಳಿಗೂ ತಲಾ ಇಬ್ಬರು ಶಾಸಕರು ಇದ್ದರೂ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಸದೃಢವಾಗಿದೆ. ಆ ಕಾರಣಕ್ಕೆ ಜೆಡಿಎಸ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಸ್ಪರ್ಧೆಗೆ ಆಸಕ್ತಿ ತೋರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತುಮಕೂರು ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದರೆ ಅಕ್ಕಪಕ್ಕದ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ಕುಣಿಗಲ್, ಮಾಗಡಿ ಸುತ್ತಮುತ್ತಲಿನ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರ; ಜಿಲ್ಲೆಯ ಪಾವಗಡ, ಶಿರಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಚಿತ್ರದುರ್ಗ ಹಾಗೂ ಪಕ್ಕದ ಚಿಕ್ಕಬಳ್ಳಾಪುರ ಕ್ಷೇತ್ರದ ಗೆಲುವಿಗೂ ಸಹಕಾರಿಯಾಗಬಹುದು. ಇದರಿಂದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ನೆರವಾಗಬಹುದು ಎಂಬ ಲೆಕ್ಕಾಚಾರಗಳೂ ನಡೆದಿವೆ.

ರಾಜಣ್ಣ ಸ್ಪರ್ಧೆ?: ಜೆಡಿಎಸ್‌ನಿಂದ ಎಚ್.ಡಿ.ದೇವೇಗೌಡ ಅಥವಾ ಅವರ ಕುಟುಂಬದ ಯಾರೇ ಸ್ಪರ್ಧಿಸಿದ್ದರೂ ಕಣಕ್ಕೆ ಇಳಿಯುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪದೇಪದೇ ಹೇಳುತ್ತಿದ್ದಾರೆ. ಒಂದು ವೇಳೆ ಸ್ಪರ್ಧಿಸಿ ಗೆದ್ದರೆ ಲೋಕಸಭೆಗೆ ಹೋಗಬಹುದು. ಆಗ ತೆರವಾಗುವ ಮಧುಗಿರಿ ವಿಧಾನಸಭೆ ಕ್ಷೇತ್ರದಿಂದ ಪುತ್ರ, ವಿಧಾನಪರಿಷತ್ ಸದಸ್ಯ ಕೆ.ಆರ್.ರಾಜೇಂದ್ರ ಅವರಿಗೆ ಟಿಕೆಟ್ ಕೊಡಿಸಿ, ಅವರಿಗೂ ರಾಜಕೀಯ ನೆಲೆ ಕಲ್ಪಿಸಬಹುದು. ಈಗ ಟಿಕೆಟ್ ಕೊಡಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದುಕೊಳ್ಳುವುದು ಸುಲಭವಾಗುತ್ತದೆ. ಒಂದು ವೇಳೆ ಲೋಕಸಭೆಯಲ್ಲಿ ಸೋತರೆ ಈಗಿರುವ ಸ್ಥಾನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ದೇವೇಗೌಡರ ಕುಟುಂಬದವರು ಸ್ಪರ್ಧಿಸದಿದ್ದರೆ ರಾಜಣ್ಣ ಸ್ಪರ್ಧಿಸುವುದಿಲ್ಲ ಎಂದು ಹೇಳಲಾಗುತ್ತಿದ್ದು, ಆಗ ಪರ್ಯಾಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದರೆ ತುಮಕೂರಿನಿಂದ ಕಣಕ್ಕಿಳಿಸಲು ಪಕ್ಷದ ಮುಖಂಡರು ಒಲವು ತೋರಿದ್ದರು. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಸೋಮಣ್ಣ ಕಾಂಗ್ರೆಸ್‌ಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇತ್ತ ಕಾಂಗ್ರೆಸ್‌ನಲ್ಲೂ ಸಮರ್ಥ ಅಭ್ಯರ್ಥಿ ಇಲ್ಲವಾಗಿದ್ದು, ಪರ್ಯಾಯ ನಾಯಕನಿಗಾಗಿ ತಲಾಷೆ ನಡೆಸಬೇಕಾಗುತ್ತದೆ.

ಜಿಲ್ಲೆಯ ರಾಜಕೀಯ ಸನ್ನಿವೇಶ, ಪರಿಸ್ಥಿತಿಯನ್ನು ಗಮನಿಸಿದರೆ ತುಮಕೂರು ಕ್ಷೇತ್ರದ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ನಿರ್ಧಾರ ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬರುವವರೆಗೂ ಇಂತಹ ಗೊಂದಲಗಳು ಮುಂದುವರಿಯಲಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT