ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯಿಂದ ಕಲಿಯುವುದು ಅಗತ್ಯ: ಬರಗೂರು ರಾಮಚಂದ್ರಪ್ಪ

ರಾಜ್ಯಮಟ್ಟದ ಕವಿಗೋಷ್ಠಿ– ವೆಬಿನಾರ್‌ನಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಮತ
Last Updated 26 ಆಗಸ್ಟ್ 2020, 15:47 IST
ಅಕ್ಷರ ಗಾತ್ರ

ತುಮಕೂರು: ಚಲನಶೀಲ, ಚಿಂತನಶೀಲತೆಯನ್ನು ವಿಸ್ತರಿಸುವುದೇ ಪರಂಪರೆ. ನಾವು ಇಂತಹ ಪರಂಪರೆಯಿಂದ ಕಲಿಯಬೇಕು. ಸ್ಥಗಿತ ಸಂಪ್ರದಾಯಗಳು ಪರಂಪರೆ ಎನಿಸಿಕೊಳ್ಳುವುದಿಲ್ಲ. ಕನ್ನಡದಲ್ಲಿ 500ಕ್ಕೂ ಹೆಚ್ಚು ಜನರು ಬರೆದಿದ್ದಾರೆ. ಆದರೆ ನಾವು ನೆನಪಿಸಿಕೊಳ್ಳುವುದು ಕೆಲವೇ ಕೆಲವರನ್ನು ಮಾತ್ರ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ– ವೆಬಿನಾರ್‌ ಉದ್ಘಾಟಿಸಿ ಮಾತನಾಡಿದರು.

‘ಬಸವಣ್ಣ ರಾಜನ ಆಸ್ಥಾನದಲ್ಲಿ ಇದ್ದು ಚಳವಳಿ ಕಟ್ಟಿದ್ದು ದೊಡ್ಡ ಪಲ್ಲಟ. ಇಲ್ಲಿಯೇ ಅಲ್ಲಮ ಒಳವಿಮರ್ಶಕನಾಗಿದ್ದ. ಅಕ್ಕಮಹಾದೇವಿ ಪುರುಷ ಪ್ರಧಾನ ಸಮಾಜದ ವಿರುದ್ಧ ಕಟ್ಟಿದ ಪ್ರತಿರೋಧವನ್ನು ಇಲ್ಲಿ ಕಾಣುತ್ತೇವೆ. ಹೀಗೆ ಇಂತಹ ಪರಂಪರೆಗಳನ್ನು ನೆನ‍ಪಿಸಿಕೊಳ್ಳಬೇಕು’ ಎಂದರು.

‘ಚಲನಶೀಲ ಪರಂಪರೆಯಲ್ಲಿ ಅನೇಕರನ್ನು ಉದಾಹರಿಸಬಹುದು. ಕನಕದಾಸರು ಎಷ್ಟು ಪ್ರಸ್ತುತ ಎನ್ನುವುದನ್ನು ನಮ್ಮ ಮನಸ್ಸಿಗೆ ತೆಗೆದುಕೊಳ್ಳಬೇಕು. ಸಮಕಾಲೀನ ಸಂದರ್ಭದಲ್ಲಿ ಕನ್ನಡ ಸಂವೇದನೆಯನ್ನು ಬೆಳೆಸುವುದು ಹೇಗೆ ಎನ್ನುವ ಬಗ್ಗೆ ಆಳವಾಗಿ ಚಿಂತಿಸಬೇಕಿದೆ. ನಮ್ಮ ಸಾಹಿತ್ಯ ಅಂತಹ ಕೆಲಸವನ್ನು ಮಾಡಬೇಕಾಗಿದೆ’ ಎಂದು ಹೇಳಿದರು.

ಕಾವ್ಯದ ನಡಿಗೆ ಕಣ್ಣಿನ ನಡಿಗೆ ಇದ್ದಂತೆ. ಅದು ಕಾಲಿನ ನಡಿಗೆ ಅಲ್ಲ. ಕಾಲಿನ ನಡಿಗೆ ಲೆಕ್ಕ ಹಾಕುತ್ತದೆ. ಆದರೆ ಕಣ್ಣಿನ ನಡಿಗೆ ಕುಳಿತಲ್ಲಿಯೇ ಎಲ್ಲವನ್ನೂ ನೋಡಬಹುದು ಎಂದರು.

ವಿಶೇಷವಾಗಿ ಚಳವಳಿಯಲ್ಲಿ ಇದ್ದವರಿಗೆ ಸೃಜನಶೀಲತೆಯ ಸಮಸ್ಯೆ ಇರುತ್ತದೆ. ಚಿಂತನಶೀಲತೆ ಮತ್ತು ಸೃಜನಶೀಲತೆ ಈ ಎರಡನ್ನೂ ಬೆರೆಸುವ ಕೆಲಸ ಸವಾಲಿನದ್ದು. ಒಂದನ್ನೊಂದು ಸೇರಿಸಿ ಕುಲುಮೆಯಲ್ಲಿ ಆಕೃತಿಯನ್ನು ತೆಗೆಯಬೇಕಿದೆ ಎಂದು ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯದಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸೈದ್ಧಾಂತಿಕ ಬದ್ಧತೆ, ಸೈದ್ಧಾಂತಿಕ ಒಳನೋಟ, ಸಾಮಾಜಿಕ ಬದ್ಧತೆಯನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು, ಯುವಕರನ್ನು ಒಳಗೊಳ್ಳುವ ಆಶಯವನ್ನು ಹೊಂದಿದೆ ಎಂದು ವಿವರಿಸಿದರು.

‘ನಮ್ಮ ಸಂಘಟನೆ ಪ್ರಗತಿಪರವಾದ ಪ್ರಜಾಸತ್ತಾತ್ಮಕ ಆಶಯಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಕಳಕಳಿ ಮತ್ತು ಪ್ರಜ್ಞೆ ಸಾಹಿತ್ಯದ ಅಂತಃಸತ್ವ ಆಗಬೇಕು ಎನ್ನುವುದೇ ಸಂಘಟನೆಯ ಆಶಯ. ಇದರ ಮುಂದುವರಿದ ಭಾಗವಾಗಿ ಈ ಕವಿಗೋಷ್ಠಿ ನಡೆದಿದೆ’ ಎಂದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕರಾದ ಡಾ.ಓ.ನಾಗಾರಾಜು, ಡಾ.ನಾಗಭೂಷಣ ಬಗ್ಗನಡು ಗೋಷ್ಠಿ ಸಂಘಟಿಸಿದ್ದರು.

ಜನ ಸಂಬಂಧ; ಸಾಹಿತಿ ಜೀವಂತ

‘ಜನ ಸಮಾಜ, ಜನ ಸಂಸ್ಕೃತಿಯ ಜತೆ ಒಂದು ಸಂಬಂಧ ಏರ್ಪಡಿಸಿಕೊಳ್ಳುವುಕ್ಕೆ ಯಾವ ಸಾಹಿತಿಗೆ ಸಾಧ್ಯವಾಗುತ್ತದೆಯೋ ಆತ ದೈಹಿಕವಾಗಿ ಇಲ್ಲದಿದ್ದರೂ ಜೀವಂತವಾಗಿ ಇರುತ್ತಾನೆ. ಪಂಪ, ಕುಮಾರವ್ಯಾಸ, ಬಸವಣ್ಣ, ಅಲ್ಲಮ, ಸೂಳೆ ಸಂಕವ್ವೆ– ಹೀಗೆ ಹಲವರನ್ನು ಈ ವಿಚಾರದಲ್ಲಿ ಉದಾಹರಿಸಬಹುದು’ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT