ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಪಂಚಮಿ ಆಚರಣೆ

ಮಾನವ ಬಂಧುತ್ವ ವೇದಿಕೆಯಿಂದ ಜಾಗೃತಿ
Last Updated 14 ಆಗಸ್ಟ್ 2021, 4:42 IST
ಅಕ್ಷರ ಗಾತ್ರ

ಪಾವಗಡ: ಹಾಲು, ತುಪ್ಪವನ್ನು ಮೌಢ್ಯದ ಹೆಸರಲ್ಲಿ ವ್ಯರ್ಥಮಾಡದೆ, ಅಗತ್ಯವಿರುವವರಿಗೆ ನೀಡಿದರೆ ಹಬ್ಬಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ತಾಲ್ಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ಲೋಕೇಶ್ ಪಾಳೆಗಾರ ತಿಳಿಸಿದರು.

ತಾಲ್ಲೂಕಿನ ಕರಿಯಮ್ಮನ ಪಾಳ್ಯದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಬಸವ ಪಂಚಮಿ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವೃದ್ಧರು, ಅಂಗವಿಕಲರು, ಮಕ್ಕಳಿಗೆ ಹಾಲು, ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಹಲ ವರ್ಷಗಳಿಂದ ಆಚರಿಸಲಾಗುತ್ತಿದೆ. ಜನರು ಲಕ್ಷಾಂತರ ಲೀಟರ್ ಹಾಲು, ತುಪ್ಪ, ಹಣ್ಣನ್ನು ಹುತ್ತ, ನಾಗರ ಕಲ್ಲುಗಳ ಮೇಲೆ ಸುರಿಯುತ್ತಾರೆ. ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ ಎಂದರು.

ನಾಗರ ಹಾವು ನಾವು ಇಡುವ ಹಾಲು ಕುಡಿಯುತ್ತದೆ, ಹಣ್ಣು ಸೇವಿಸುತ್ತದೆ. ಇದರಿಂದ ಪೂಜಿಸುವ ನಮಗೆ ಶುಭವಾಗುತ್ತದೆ ಎನ್ನುವ ಮೂಢನಂಬಿಕೆಯಿಂದ ಪೌಷ್ಟಿಕ ಆಹಾರವಾದ ಹಾಲು, ತುಪ್ಪ ಮಣ್ಣು ಪಾಲಾಗುತ್ತಿದೆ. ಇಂತಹ ಕಂದಾಚಾರ ಹೋಗಲಾಡಿಸಲು ಶಿಕ್ಷಣದಿಂದ ಸಾಧ್ಯ ಎಂದು ತಿಳಿಸಿದರು.

ವಾಲ್ಮೀಕಿ ಜಾಗೃತಿ ವೇದಿಕೆ ನೀಡಗಲ್ಲು ಹೋಬಳಿ ಘಟಕದ ಅಧ್ಯಕ್ಷ ಓಂಕಾರ ನಾಯಕ, ತಳ ಸಮುದಾಯದ ಯುವಜನರಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೌಢ್ಯ ಹೋಗಲಾಡಿಸಲು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸ್ಥಾಪನೆಯಾಗಿದೆ. ಜನರಿಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆದರ್ಶ ಸಾರಲು ವೇದಿಕೆ ಶ್ರಮಿಸುತ್ತಿದೆ ಎಂದರು.

ಮೌಢ್ಯದಿಂದ ಜ್ಞಾನದತ್ತ, ಕತ್ತಲಿಂದ ಬೆಳಕಿನೆಡೆಗೆ ಎನ್ನುವ ಮಹತ್ತರ ಯೋಜನೆಗಳು ವೇದಿಕೆಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಯುವ ಪೀಳಿಗೆ ಶಿಕ್ಷಣ ಪಡೆದು ಮೌಢ್ಯ ಧಿಕ್ಕರಿಸಿ ಪ್ರಜ್ಞಾವಂತ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.

ಮುಗದಾಳಬೆಟ್ಟ ಭಾಸ್ಕರ್ ನಾಯಕ, ನಿವೃತ್ತ ಸೈನಿಕ ಅನಂತಯ್ಯ, ಕೆ.ಟಿ.ಹಳ್ಳಿ ರಾಜೇಶ್, ಗೋವಿಂದಮ್ಮ, ತಿಪ್ಪಮ್ಮ, ರಂಗಪ್ಪ, ತಿಮ್ಮರಾಜು, ಹನುಮಂತರಾಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT