ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯ ವಂಚಿತವಾಗಿರುವ ನಗರದ ರೈಲ್ವೆ ನಿಲ್ದಾಣ

ತೀವ್ರವಾಗಿರುವ ಶೌಚಾಲಯ, ಕುಡಿಯುವ ನೀರು ಸಮಸ್ಯೆ, ಆಗಬೇಕಿದೆ ಸಮಸ್ಯೆಯಿಂದ ಮುಕ್ತಿ, ಬಳಕೆ ಮಾಡಬೇಕಿದೆ ಮೇಲ್ಚಾವಣಿ
Last Updated 23 ಜೂನ್ 2018, 17:47 IST
ಅಕ್ಷರ ಗಾತ್ರ

ತುಮಕೂರು: ‘ತುಮಕೂರು ರೈಲ್ವೆ ನಿಲ್ದಾಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಪ್ರತಿದಿನ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆ ಆಗಿದೆ’.

ಮುಖ್ಯವಾಗಿ ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆ ಸುಮಾರು ಒಂದು ವರ್ಷದಿಂದ ಇದ್ದು, ಪ್ರಯಾಣಿಕರು ನಿತ್ಯ ಬವಣೆ ಪಡುವಂತಹ ಪರಿಸ್ಥಿತಿ ಇದೆ.

ಈ ಜಿಲ್ಲಾ ಕೇಂದ್ರದಿಂದ ದಿನದ 24 ಗಂಟೆಯು ರೈಲು ಸಂಚಾರ ಇದ್ದು, ಪ್ರತಿದಿನ ಸುಮಾರು 40ಕ್ಕೂ ಅಧಿಕ ರೈಲು ಸಂಚರಿಸುತ್ತವೆ. ಮುಖ್ಯವಾಗಿ ಬೆಂಗಳೂರು, ಹುಬ್ಬಳ್ಳಿ–ದಾರವಾಡ, ಅರಸೀಕೆರೆ, ಶಿವಮೊಗ್ಗ, ಮೈಸೂರು ಕಡೆ ಸಂಚರಿಸಲಿವೆ.

ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಬಹುದು ಎಂದು ರೈಲು ಸಂಚಾರ ಬೆಳೆಸುವ ಜನರಿಗೆ ಮೂಲ ಸೌಕರ್ಯ ಸಮಸ್ಯೆ ಕಾಡುತ್ತಿದೆ. ಇದರಿಂದ ಬೇಸತ್ತ ಪ್ರಯಾಣಿಕರು ಸಮಸ್ಯೆ ಬಗೆಹರಿಸಿದರೆ ಸಾಕು ಎಂಬಂತಾಗಿದೆ.

ಈ ಹಿಂದೆ ಶೌಚಾಲಯ ಇತ್ತು. ಆದರೆ ಒಂದು ವರ್ಷದ ಹಿಂದೆ ಕೆಲವು ಕಾರಣದಿಂದ ಶೌಚಾಲಯವನ್ನು ಮುಚ್ಚಲಾಗಿದೆ. ಕೆಲ ಮೂಲಕ ಪ್ರಕಾರ ರೈಲ್ವೆ ನಿಲ್ದಾಣ ಅಭಿವೃದ್ಧಿಗಾಗಿ, ಮೇಲ್ಚಾವಣಿ ಕಾಮಗಾರಿಗಾಗಿ, ಒಳಚರಂಡಿ ವ್ಯವಸ್ಥೆ ಸಮಸ್ಯೆ ಸ್ಥಗಿತಗೊಂಡಿರುವ ಕಾರಣವಾಗಿ ಶೌಚಾಲಯಕ್ಕೆ ಮುಚ್ಚಲಾಗಿದೆ.

ಶೌಚಾಲಯ ಕಾಮಗಾರಿ ಮಾಡಲು ಐದು ತಿಂಗಳ ಹಿಂದೆ ಟೆಂಟರ್‌ ಆಗಿತ್ತು. ತಮಿಳುನಾಡು ಮೂಲದವರಿಗೆ ಈ ಟೆಂಟರ್‌ ಕೆಲಸವನ್ನು ವಹಿಸಲಾಗಿತ್ತು. ಆದರೆ ಅವರು ಕೆಲವು ಸಮಸ್ಯೆಗಳಿಂದ ಕಾಮಗಾರಿ ಮಾಡದೆ ಬಿಟ್ಟು ಹೋಗಿದ್ದಾರೆ ಎಂದು ತುಮಕೂರು ರೈಲ್ವೆ ನಿಲ್ದಾಣ ನಿರ್ವಾಹಕ ರಮೇಶ್‌ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೆ ಈ ಕಾಮಗಾರಿಯನ್ನು ಬೇರೊಬ್ಬರಿಗೆ ವಹಿಸಲಾಗಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಜುಲೈ ತಿಂಗಳ ಒಳಗಾಗಿ ಮುಗಿಸಲಾಗುವುದು ಎಂದರು.

ಕುಡಿಯುವ ನೀರಿನ ಸಮಸ್ಯೆ: ನಿಲ್ದಾಣದಲ್ಲಿ ಸುಮಾರು ಮೂರ್ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಪ್ರಯಾಣಿಕರು ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಇದೆ. ನಿಲ್ದಾಣದ ಎಲ್ಲ ಪ್ಲಾಟ್‌ ಫಾರಂಗಳಲ್ಲಿ ಸುಮಾರು 18ಕ್ಕೂ ಹೆಚ್ಚು ನೀರಿನ ಕೋಳಾಯಿಗಳಿದ್ದು, ಕೇವಲ ನಾಲ್ಕೈದು ಕೋಳಾಯಿಗಳಲ್ಲಿ ಮಾತ್ರ ನೀರು ಬರುತ್ತಿದೆ. ಅವು ದುರಸ್ತಿಯಲ್ಲಿವೆ. ಇನ್ನೂಳಿದ ಕೋಳಾಯಿಗಳಲ್ಲಿ ನೀರು ಬರದೆ ಒಣಗಿವೆ.

ಇದರಿಂದ ನೀರು ಹಿಡಿಯಲು ಅಂತ ಬಾಟಿಲಿ ಹಿಡಿದು ಹೋಗುವ ಪ್ರಯಾಣಿಕರಿಗೆ ನೀರು ಸಿಗದೆ ಬೇಸರದಿಂದ ವಾಪಾಸ್ಸಾಗುವರು. ಹೀಗಿರುವ ಕಾರಣ ಹಲವಾರು ಜನರು ಮಳಿಗೆಯಲ್ಲಿ ಹಣ ಕೊಟ್ಟು ನೀರಿನ ಬಾಟಲ್‌ ಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕಡಿಮೆ ಬೆಲೆಯಲ್ಲಿ ಶುದ್ಧವಾದ ತಂಪು ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಎರಡು ನೀರಿನ ಘಟಕವನ್ನು ಆರು ತಿಂಗಳ ಹಿಂದೆ ಸ್ಥಾಪನೆ ಮಾಡಲಾಯಿತು. ಇದರಲ್ಲಿ 300 ಮಿಲಿ ಲೀಟರ್‌ ನೀರಿಗೆ ₹ 1–2, 500 ಮಿಲಿ ಲೀಟರ್‌ಗೆ ₹ 3–5, 1 ಲೀಟರ್‌ಗೆ ₹ 5–8, 2 ಲೀಟರ್‌ಗೆ ₹ 8–12, 5 ಲೀಟರ್‌ ನೀರಿಗೆ ₹ 20–25 ಹಣದಲ್ಲಿ ನೀಡಲಾಗುತ್ತಿತ್ತು.

ಈ ಶುದ್ಧ ಕುಡಿಯುವ ನೀರಿನ ಘಟಕಗಳು ಒಂದೇರಡು ತಿಂಗಳು ಮಾತ್ರ ಇದು ಕಾರ್ಯ ಮಾಡಿ ಅನಂತರ ಮುಚ್ಚಲಾಗಿದೆ. ಹಾಗಾಗಿ ಕುಡಿಯುವ ನೀರಿಗಾಗಿ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಪರದಾಡಬೇಕಾಗಿದೆ ಎಂದು ರೈಲ್ವೆ ಬಳಕೆದಾರರ ಸಂಪರ್ಕ ಸಮಿತಿಯ ಸದಸ್ಯ ಕರಣಂ ರಮೇಶ್‌ ತಿಳಿಸಿದರು.

ಪ್ರಸ್ತುತ ಒಂದೇ ಬೋರ್‌ವೆಲ್‌ ನೀರಿನಿಂದ ನಿಲ್ದಾಣಕ್ಕೆ ನೀರು ಒದಗಿಸಲಾಗುತ್ತಿದೆ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂದೆ ಇನ್ನೂ ಎರಡು ಬೋರ್‌ವೆಲ್‌ ಕೋರೆಸಲಾಗುವುದು ಎಂದು ರಮೇಶ್‌ಬಾಬು ತಿಳಿಸಿದರು.

ಪ್ರತಿದಿನವು ಪ್ರಯಾಣ ಮಾಡುತ್ತೇನೆ. ಇಲ್ಲಿ ಶೌಚಾಲಯ ಇಲ್ಲದೆ ಹೆಚ್ಚಿನ ಸಮಸ್ಯೆ ಆಗಿದೆ. ಪುರುಷರಗಿಂತ ಮಹಿಳೆಯರು ಹೆಚ್ಚಾಗಿ ಶೌಚದ ಸಮಸ್ಯೆಯ ಅನುಭವಿಸುತ್ತಿದ್ದಾರೆ. ತುಮಕೂರು ಸ್ಮಾರ್ಟ್‌ ಸಿಟಿ ಅಂತಾರೆ ಆಂದ್ರೆ ಅದೇನು ಸ್ಮಾರ್ಟ್‌ ಮಾಡ್ತಿದಾರೆ ಅಂತ ಗೊತ್ತಿಲ್ಲ. ಒಂದು ಶೌಚಾಲಯ ಸಮಸ್ಯೆಯನ್ನೇ ಬಗೆಹರಿಸಲು ಆಗಿಲ್ಲ ಅಂದ್ರೆ. ಇನ್ನೂ ತುಮಕೂರಿಗೆ ಹೇಗೆ ಸ್ಮಾರ್ಟ್‌ಸಿಟಿ ಮಾಡ್ತಾರೆ ಎಂದು ಪ್ರಯಾಣಿಕ ಕುಮಾರ್‌ ಹೇಳುವರು.

ಶೌಚಾಲಯ ಸಮಸ್ಯೆ ಇರುವುದರಿಂದ ನಾನು ಪ್ರತಿದಿನವು ಹೊರಗಡೆನೇ ಶೌಚ ಮುಗಿಸಿಕೊಂಡು ಬರುತ್ತೇನೆ. ಆದರೆ ಬೇರೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಅಂತಹವರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ ಎಂದು ತಿಳಿಸುತ್ತಾರೆ.

ಮೇಲ್ಚಾವಣಿ ಬಳಕೆ ಮಾಡದ ಪ್ರಯಾಣಿಕರು

ಈ ಹಿಂದೆ ಮೇಲ್ಚಾವಣಿ ಗುಣಮಟ್ಟದಲ್ಲಿ ಇರಲಿಲ್ಲ ಎಂಬ ಕಾರಣವಾಗಿ ಇತ್ತೀಚೆಗೆ ಒಂದು ಗುಣಮಟ್ಟದ ಮೇಲ್ಚಾವಣಿಯನ್ನು ಮಾಡಲಾಗಿದೆ. ಇದು ಸ್ವಲ್ಪ ದೂರದಲ್ಲಿದೆ. ಹಾಗಾಗಿ ಹತ್ತಿ ಇಳಿಯಬೇಕೆಂದರೆ ಆಗುವುದಿಲ್ಲ ಎಂದು ಪ್ರಯಾಣಿಕರು ರೈಲ್ವೆ ಅಲಿ ದಾಟಿ ಹೋಗುತ್ತಿದ್ದಾರೆ. ಪ್ಲಾಟ್‌ಫಾರಂನಿಂದ ಬೇರೆ ಪ್ಲಾಟ್‌ಫಾರಂಗೆ ಹೋಗಬೇಕಾದರೆ ಮೇಟ್ಟಿಲು ಈ ಹಿಂದೆ ಇತ್ತು. ಇದು ಈಗಿಲ್ಲ.

ಹಾಗಾಗಿ ಬಹುತೇಕ ಜನರು ಮೇಲ್ಚಾವಣಿ ಉಪಯೋಗಿಸದೆ ರೈಲ್ವೆ ಅಲಿಯ ಮೂಲಕ ದಾಟಿ ಬೇರೆ ಪ್ಲಾಟ್‌ಫಾರಂಗೆ ಹೋಗುತ್ತಾರೆ. ಅಂಗವಿಕಲರು, ವೃದ್ಧರು, ಗರ್ಭಿನಿಯರು ಮೇಲ್ಚಾವಣಿ ಹತ್ತಿ ಇಳಿಯುವುದು ಕಷ್ಟ. ಹಾಗಾಗಿ ಹಿಂದೆ ಇದ್ದಂತೆ ಕೆಳಗೆನೆ ಒಂದು ಕಡೆ ಮೆಟ್ಟಿಲು ವ್ಯವಸ್ಥೆ ಮಾಡಬೇಕು ಎಂದು ಭಾರತೀಯ ಕಮ್ಯೂನಿಷ್ಟ ಪಕ್ಷ (ಸಿಪಿಐ)ದ ಎನ್‌.ಕೆ.ಸುಬ್ರಹ್ಮಣ್ಯ ತಿಳಿಸಿದರು.

ಮುಂದೆ ಯಾವತ್ತೋ ಈ ನಿಲ್ದಾಣಕ್ಕೆ ಬರಲ್ಲ

ನಾವು ಹುಬ್ಬಳ್ಳಿಯಿಂದ ಬಂದಿದ್ದೇನೆ. ಇಲ್ಲಿ ಶೌಚಾಲಯ ಇಲ್ಲದ ಕಾರಣ ಪರದಾಟುವಂತಾಯಿತು. ಆದರೆ ಯಾರೋ ಟೌನ್‌ಹಾಲ್‌ ಬಳಿ ಇದೆ ಎಂದಾಗ ಹೋಗಿದ್ದಾಯಿತು. ಇದರಿಂದ ನಾವು ಹೋಗಬೇಕಿದ್ದ ರೈಲು ಸಿಗಲಿಲ್ಲ. ಮುಂದೆ ಯಾವಾಗನ್ನ ಬಂದರೆ ಈ ರೈಲ್ವೆ ನಿಲ್ದಾಣಕ್ಕೆ ಮಾತ್ರ ಬರುವುದಿಲ್ಲ ಎಂದು ಪ್ರಯಾಣಿಕ ನೇತಾಜಿ ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರ ಸ್ಥಾನದಲ್ಲಿದ್ದು ಸಮಸ್ಯೆ ಆಲಿಸಿ

ಹೈಟೆಕ್‌ ರೈಲ್ವೆ ನಿಲ್ದಾಣವನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಪ್ಲಾಟ್‌ಫಾರಂ ಮಾಡಿರುವುದು ಬಿಟ್ಟರೆ, ಯಾವುದೇ ಅಭಿವೃದ್ಧಿ ಕಂಡಿಲ್ಲ. ಅಧಿಕಾರಿಗಳು ಒನ್ಸಾರಿ ಸಾರ್ವಜನಿಕರ ಅಥವಾ ಪ್ರಯಾಣಿಕರ ಸ್ಥಾನದಲ್ಲಿ ಬಂದು ನೋಡಿದರೆ ಗೊತ್ತಾಗುತ್ತೆ ಏನು ಸಮಸ್ಯೆ ಇದೆ ಅಂತ ಎಂದು ಪ್ರಯಾಣಿಕ ರಮೇಶ್‌ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆಗಿಂತ ಹೆಚ್ಚು ಶೌಚಾಲಯ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಬಗೆಹರಿಸಬೇಕಾಗಿದೆ.
ಮಂಜುಳಾ, ಪ್ರಯಾಣಿಕರು.

ಯಾವ ಸಮಸ್ಯೆಯನ್ನಾದರೂ ಹೇಳಬಹುದು. ಆದರೆ ಶೌಚಾಲಯ ಸಮಸ್ಯೆಯನ್ನು ಪದೇ ಪದೇ ಬಗೆಹರಿಸಿ ಎಂದು ಹೇಳಲು ಆಗುವುದಿಲ್ಲ. ಅಧಿಕಾರಿಗಳೇ ಅರಿತುಕೊಳ್ಳಬೇಕು.
– ಮಹೇಶ್‌, ತುಮಕೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT