ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಬೆಂಬಲಕ್ಕೆ ಮಠಾಧೀಶರು

ಹಾಡಿ ಹೊಗಳಿದ ಲಿಂಗಾಯತ ಶ್ರೀಗಳು l ‘ಪೇಸಿಎಂ’ ಅಭಿಯಾನ ನಿಲ್ಲಿಸಲು ತಾಕೀತು
Last Updated 28 ಸೆಪ್ಟೆಂಬರ್ 2022, 5:07 IST
ಅಕ್ಷರ ಗಾತ್ರ

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜಿಲ್ಲೆಯ ವೀರಶೈವ, ಲಿಂಗಾಯತ ಮಠಾಧೀಶರು ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದಾರೆ.

ತಿಪಟೂರಿನ ಷಡಕ್ಷರ ಮಠದ ರುದ್ರಮುನಿಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದಜಿಲ್ಲೆಯ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹಾಡು ಹೊಗಳಿದರಲ್ಲದೇ, ಅವರ ಪರ ನಿಲ್ಲುವುದಾಗಿ ಘೋಷಿಸಿದರು.

‘ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ, ಅಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಅವರಿಗೆ ಅಡ್ಡಗಾಲು ಹಾಕುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.

‘ಇತ್ತೀಚಿನ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚ್ಚರಿ ಮೂಡಿಸುತ್ತವೆ. ರಾಜ್ಯದ ಸಂಸ್ಕೃತಿ ಹರಾಜು ಹಾಕುವ, ಪರಂಪರೆ ಹಾಳು ಮಾಡುವ, ಕೆಟ್ಟ ಹೆಸರು ತರುವ ಕೆಲಸ ನಡೆಯುತ್ತಿದೆ. ಜಗತ್ತಿನ ಜ‌ನರು ರಾಜ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ವೈಯಕ್ತಿಕ ಹಿತಕ್ಕಾಗಿ ರಾಜ್ಯದ ಜನರ ಮರ್ಯಾದೆ ಹಾಳು ಮಾಡುವ, ಗೌರವಕ್ಕೆ ಧಕ್ಕೆ ತರುವ ಕೆಲಸವಾಗುತ್ತಿದೆ’ ಎಂದು ರುದ್ರಮುನಿ ಸ್ವಾಮೀಜಿ ಆರೋಪಿಸಿದರು.

ರಾಜಕೀಯ ವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ವ್ಯಕ್ತಿಯ ತೇಜೋವಧೆ ಮಾಡುವುದು ನಿರಂತರವಾಗಿ ಸಾಗಿದೆ. ಜನರಿಂದ ಆಯ್ಕೆಯಾದವರು ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ ನಡವಳಿಕೆಗಳು ಸಮಾಜಕ್ಕೆ ಶೋಭೆ ತರುವಂತಹದಲ್ಲಎಂದರು.

‘ಪೇಸಿಎಂ’ ನಿಲ್ಲಿಸಿ: ಜನಪ್ರತಿನಿಧಿಗಳು ಜನರ ನಾಡಿಮಿಡಿತ ಅರಿತು ಕೆಲಸ ಮಾಡಬೇಕು. ಒಬ್ಬರ ಮೇಲೆ ಮತ್ತೊಬ್ಬರು ಕೆಸರು ಎರಚುವ ಕೆಲಸ ನಿಲ್ಲಬೇಕು. ಮುಖ್ಯಮಂತ್ರಿಗೆ ತಮ್ಮದೇ ಆದ ಗೌರವ, ಘನತೆ ಇರುತ್ತದೆ. ಅವರ ವ್ಯಕ್ತಿತ್ವ ಹಾಳು ಮಾಡುವ, ಗೌರವಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದರು.

‘ಪೇಸಿಎಂ’ ಎಂಬ ಟೀಕೆಯನ್ನು ತುಂಬಾ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ಮುಂದೆ ಬಹಳಷ್ಟು ಜನ ಮುಖ್ಯಮಂತ್ರಿ ಆಗಬೇಕು ಎಂಬ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅವರ ಕಾಲದಲ್ಲೂ ಇಂತಹ ಘಟನೆಗಳು ಆಗುವುದು ಬೇಡ ಎಂದು ಮನವಿ ಮಾಡಿದರು.

‘ಕೇವಲ ದೊಡ್ಡ ಮಠಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳದೆ, ಸಣ್ಣ ಮಠಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಬೇಕು’ ಎಂದು ಸೇವಾಲಾಲ್‌ಸ್ವಾಮೀಜಿ ಒತ್ತಾಯಿಸಿದರು.

ತಮ್ಮಡಿಹಳ್ಳಿ ಮಠದ ಸಿದ್ಧಲಿಂಗ ದೇಶಿಕೇಂದ್ರ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತಂಗನಹಳ್ಳಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ಡಿ. ಕಲ್ಕೆರೆ ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT