ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು: ಜಲ ಸಾಹಸ ತರಬೇತಿ ತಾಣವಾದೀತೆ ಬೋರನಕಣಿವೆ

Published 27 ಮೇ 2024, 5:43 IST
Last Updated 27 ಮೇ 2024, 5:43 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿಯ ಬೋರನಕಣಿವೆ ಜಲಾಶಯ ಜಲ ಸಾಹಸ ಕ್ರೀಡಾಸಕ್ತರಿಗೆ ಹೇಳಿ ಮಾಡಿಸಿದ ಜಾಗವಾಗಿದ್ದು ಬಹು ವರ್ಷಗಳ ಕನಸು ನನಸಾಗದೆ ಉಳಿದಿದೆ. ಸಂಬಂಧಪಟ್ಟ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೇಡಿಕೆಯನ್ನು ಈಡೇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಮಾರ್ಕೋನಹಳ್ಳಿ ಜಲಾಶಯ ಬಿಟ್ಟರೆ ಬೋರನಕಣಿವೆ ಎರಡನೇ ದೊಡ್ಡ ಜಲಾಶಯ. 30 ಅಡಿ ಆಳ ಹಾಗೂ ವಿಶಾಲವಾದ ಹಿನ್ನೀರಿನ ಪ್ರದೇಶವನ್ನು ಹೊಂದಿದೆ. ಹಿನ್ನೀರಿನ ಪ್ರದೇಶದಲ್ಲಿ ಕಾರೇಹಳ್ಳಿ ರಂಗನಾಥಸ್ವಾಮಿ ದೇಗುಲದ ವಿಶಾಲ ಆವರಣವಿದೆ. ಅಲ್ಲದೆ ಜಲಾಶಯ ಏರಿ ಮತ್ತು ಕೋಡಿ ನೀರು ಒಂದೇ ಕಡೆ ಹರಿಯುತ್ತದೆ. ಜಲಾಶಯದ ಮುಂಭಾಗ ಕೂಡ ಸುಂದರ ಸ್ಥಳವಾಗಿದೆ.

ಬಾವಿಗಳಲ್ಲಿ ನೀರಿಲ್ಲ: 20 ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿತದಿಂದ ಬಾವಿಗಳಲ್ಲಿ ನೀರು ಇಂಗಿ ಹೋಗಿದೆ. ಮೊದಲೆಲ್ಲಾ ಕೆರೆ, ಕಟ್ಟೆ, ಬಾವಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಈಜು ಕಲಿಯಲು ಅವಕಾಶವಿತ್ತು. ಆದರೆ ಬಾವಿಗಳಲ್ಲಿ ನೀರಿಲ್ಲ. ಇನ್ನೂ ಕೆರೆ ಕಟ್ಟೆಗಳಲ್ಲಿ ಬಹು ವರ್ಷ ನೀರು ತುಂಬದೆ ಗಿಡ-ಗಂಟಿಗಳು ಬೆಳೆದು ತುಂಬಿದಾಗಲೂ ಅವುಗಳಲ್ಲಿ ಈಜಾಡುವುದು ದುಸ್ಸಾಹಸವಾಗಿದೆ. ಇದರಿಂದ ಇಂದಿನ ಯುವಕರಿಗೆ ಈಜು ಕಲಿಯುವುದು ಕನಸಿನ ಮಾತಾಗಿದೆ.

ಅನುಕೂಲ ಏನು: ತುಮಕೂರು ಜಿಲ್ಲೆಯಲ್ಲಿ ಎಲ್ಲಿಯೂ ಜಲ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿಲ್ಲ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳು, ಸ್ವಯಂ ಸೇವಕರು ಸಾಹಸ ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಬೋರನಕಣಿವೆ ಜಲಾಶಯದಲ್ಲಿ ಜಲ ಸಾಹಸ ತರಬೇತಿ ಆರಂಭಿಸುವುದರಿಂದ ಯುವಕರಲ್ಲಿ ಸಾಹಸ ಮನೋಭಾವನೆ ತುಂಬುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಅನುಕೂಲವಾಗುತ್ತದೆ. ಅಲ್ಲದೆ ಜಲ ಕ್ರೀಡೆಗಳ ತರಬೇತಿ ನೀಡುವುದರಿಂದ ಜಲ ಕಂಟಕಗಳು ಎದುರಾದಾಗ ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸಿದಂತಾಗುತ್ತದೆ ಎನ್ನುವುದು ಅನೇಕರ ಅಭಿಪ್ರಾಯ.

ಎಲ್ಲೆಲ್ಲಿ ತರಬೇತಿ: ಈಗಾಗಲೇ ಚಿತ್ರದುರ್ಗ ಜಿಲ್ಲೆಯ ವಿ.ವಿ.ಸಾಗರ ಜಲಾಶಯದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯಿಂದ ಜಲ ಸಾಹಸ ಕ್ರೀಡಾ ತರಬೇತಿ ನಿರಂತರವಾಗಿ ನಡೆಯುತ್ತಿದೆ. ತರಬೇತಿಯಲ್ಲಿ ಈಜು ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತಿದೆ. ಚಿತ್ರದುರ್ಗ ಮಾತ್ರವಲ್ಲದೆ ದಾಂಡೇಲಿ, ರಾಮನಗರ, ಬಾದಾಮಿ, ಕಾರವಾರ, ಕೊಡಗು ಪ್ರದೇಶಗಳಲ್ಲಿಯೂ ತರಬೇತಿ ನೀಡಲಾಗುತ್ತಿದೆ.

ಬೋರನಕಣಿವೆ ಜಲಾಶಯದಲ್ಲಿ ಜಲ ಸಾಹಸ ತರಬೇತಿ ಆರಂಭಿಸಿದರೆ ಪ್ರಮುಖವಾಗಿ ಈಜು ತರಬೇತಿ ನೀಡುವ ತಾಣವಾಗುತ್ತದೆ. ಇದರ ಜತೆ ತರಬೇತಿಗೆ ಬರುವ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆ ಪರಿಸರ ಅಧ್ಯಯನಕ್ಕೂ ಸಹಕಾರಿ
ಮಹಮದ್‌ ಹುಸೇನ್‌ ನೆರಳು ಸಂಘಟನೆ ಚಿಕ್ಕನಾಯಕನಹಳ್ಳಿ
40 ವರ್ಷದ ಹಿಂದಿನವರಿಗೆ ಬಿಟ್ಟರೆ ಇಂದಿನ ಯುವಕರಿಗೆ ಶೇ 80ರಷ್ಟು ಮಂದಿಗೆ ಈಜು ಗೊತ್ತಿಲ್ಲ. ಬಾವಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಈಜು ಕಲಿಯಲು ಆಗುತ್ತಿಲ್ಲ. ಇನ್ನೂ ಬೋರನಕಣಿವೆ ಜಲಾಶಯದಲ್ಲಿ ನೀರಿದ್ದರೂ ಸುತ್ತಮುತ್ತಲ ಜನರಿಗೆ ಈಜು ಕಲಿಯಲು ಆಗಿಲ್ಲ. ಸುರಕ್ಷಿತವಾಗಿ ಈಜು ಕಲಿಯಲು ಅವಕಾಶವಿಲ್ಲದ ಕಾರಣ ಸ್ಥಳೀಯರು ಜಲಾಶಯದಲ್ಲಿ ಈಜು ಕಲಿಯಲು ಭಯ ಪಡುತ್ತಾರೆ. ಜಲ ಸಾಹಸ ತರಬೇತಿ ಆರಂಭಿಸಿದರೆ ಎಷ್ಟೋ ಜಲ ಕಂಟಕ ನಿವಾರಣೆ ಜತೆ ಅವರ ರಕ್ಷಣೆಗೂ ಒತ್ತು ನೀಡಿದಂತಾಗುತ್ತದೆ.
ಎಚ್.ಆರ್.ಯುವರಾಜು ಹೊಯ್ಸಳಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT