ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಬಿಎಸ್‌ಪಿ ಪ್ರತಿಭಟನೆ

Last Updated 3 ಫೆಬ್ರುವರಿ 2021, 2:07 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ, ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಬಹುಜನ ಸಮಾಜ ಪಾರ್ಟಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರ ಹಕ್ಕುಗಳನ್ನು ನಾಶಮಾಡಿ, ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ದಿನಕ್ಕೊಂದು ಹೊಸ ಕಾನೂನು ಜಾರಿಗೆ ತಂದು ದಮನಕಾರಿ ನೀತಿ ಅನುಸರಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಇತರ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಮೀಸಲಾತಿ ಕೊನೆಗಾಣಿಸಲು ಸರ್ಕಾರಿ ಉದ್ದಿಮೆಗಳು, ಬ್ಯಾಂಕ್, ತೈಲ ಕಂಪನಿಗಳು, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಕಾಯಂ ನೌಕರಿ ಬದಲು ಹೊರಗುತ್ತಿಗೆ, ದಿನಗೂಲಿ ನೌಕರಿ ನೀಡಿ ಆಧುನಿಕ ಜೀತಗಾರಿಕೆಗೆ ನಾಂದಿಹಾಡಿದೆ. ಇಂತಹ ಲೋಪಗಳನ್ನು ಮುಚ್ಚಿಕೊಳ್ಳಲು ದೇಶಭಕ್ತಿ, ರಾಮಮಂದಿರದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ದಾರಿ ತಪ್ಪಿಸಲಾಗುತ್ತಿದೆ ಎಂದು ದೂರಿದರು.

ದೇಶದಲ್ಲಿ 2018–19 ಹಾಗೂ 2019–20ನೇ ಸಾಲಿನಲ್ಲಿ 60 ಲಕ್ಷ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದ್ದು, ಕೂಡಲೇ ಬಿಡುಗಡೆ ಮಾಡಬೇಕು. ರೈತ ವಿರೋಧಿ ಕೃಷಿ ಕಾನೂನು ರದ್ದು ಮಾಡಬೇಕು. ನ್ಯಾ.ನಾಗಮೋಹನ್‌ದಾಸ್ ವರದಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮೀಸಲು ಪ್ರಮಾಣವನ್ನು ಶೇ 20, ಪರಿಶಿಷ್ಟ ವರ್ಗದವರಿಗೆ ಶೇ 10ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬೇಕು. ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆ ಬದಲಾಗಿ 12 ಗಂಟೆಗೆ ಹೆಚ್ಚುವ ತಿದ್ದುಪಡಿ ಕಾಯ್ದೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಮುಖಂಡರಾದ ಜೆ.ಎನ್.ರಾಜಸಿಂಹ, ಮಹಮದ್ ಆಸೀಮ್ ಇಕ್ಬಾಲ್, ಜೆ.ಸಿ.ರಂಗಧಾಮಯ್ಯ, ಮಂಜುನಾಥ್ ಗುಮ್ಮನಹಳ್ಳಿ, ಶಿವಕುಮಾರ, ಎ.ಎಸ್.ಗೋಪಾಲ್, ಅಂಜನ್, ಹನುಂತರಾಯ, ವೆಂಕಟರಮಣಪ್ಪ, ವೀರಕ್ಯಾತಯ್ಯ, ನಾಗೇಂದ್ರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT