ಶುಕ್ರವಾರ, ಏಪ್ರಿಲ್ 16, 2021
23 °C
ನಿರೀಕ್ಷೆ ಅಪಾರ, ಸಿಗುವುದು ಅತ್ಯಲ್ಪ ಅನುದಾನ

ಬಜೆಟ್: ನೀರಾವರಿಗೆ ಸಿಗುವುದೆ ಆದ್ಯತೆ?

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರತಿ ಬಜೆಟ್ ಸಮಯದಲ್ಲೂ ಜಿಲ್ಲೆಯನ್ನು ‘ಕಲ್ಪತರು ನಾಡು’, ‘ಶಿಕ್ಷಣ ಕಾಶಿ’ ಮೊದಲಾದ ವಿಶೇಷಗಳಿಂದ ಸಂಬೋಧಿಸಿ ಅಭಿವೃದ್ಧಿಯ ಮಾತುಗಳು ಪುಂಕಾನುಪುಂಕವಾಗಿ ಹರಿದು ಬರುತ್ತವೆ.

ಇಂತಹ ಮಾತು ಕೇಳಿದವರಿಗೆ ಅನುದಾನದ ಹೊಳೆಯೇ ಹರಿದು ಬರಲಿದೆ ಎಂಬ ಭಾವನೆ ಮೂಡುತ್ತದೆ. ಬಜೆಟ್‌ನಲ್ಲೂ ಭರವಸೆಗಳು ಸಿಗುತ್ತವೆ. ಕೊನೆಗೆ ಅನುದಾನವೂ ಬರುವುದಿಲ್ಲ, ಅಭಿವೃದ್ಧಿ ಕೆಲಸವೂ ಮುಂದೆ ಸಾಗುವುದಿಲ್ಲ ಎಂಬುದು ಜಿಲ್ಲೆಯ ಜನರ ಪ್ರಮುಖ ಆರೋಪ.‌

ಇದಕ್ಕೆ ತಾಜಾ ಉದಾಹರಣೆ ‘ತೆಂಗು ಪಾರ್ಕ್’. ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಬಜೆಟ್ ಮಂಡಿಸಿದ ಸಮಯದಲ್ಲಿ ಈ ವಿಚಾರ ಪ್ರಸ್ತಾಪ
ವಾಗುತ್ತದೆ. ಇಷ್ಟು ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಲಾಗುತ್ತಿದೆ. ನಂತರ ಎಲ್ಲವೂ ಮರೆತು ಹೋಗುತ್ತದೆ. ಮತ್ತೆ ಬಜೆಟ್‌ನಲ್ಲಿ ದಾಖಲಾಗುತ್ತದೆ. ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿಯಾದರೂ ಅನುಷ್ಠಾನಕ್ಕೆ ಬರುವುದೇ? ಎಂದು ಜನರು ಎದುರು ನೋಡುತ್ತಿದ್ದಾರೆ.

2012-13ರಲ್ಲಿ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ತೆಂಗು ಪಾರ್ಕ್ ಯೋಜನೆ ಮೊಳಕೆಯೊಡೆದಿತ್ತು. ನಂತರದ ದಿನಗಳಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆ ಮೂಲಕ ತಿಪಟೂರು, ಶಿರಾ ತಾಲ್ಲೂಕಿನ ಮಾನಂಗಿ ಹಾಗೂ ತುರುವೇಕೆರೆ ತಾಲ್ಲೂಕಿನ ಚಿಕ್ಕಪುರದಲ್ಲಿ ತೆಂಗು ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿತು.

ಮೊದಲ ಹಂತದಲ್ಲಿ ಮಾನಂಗಿ ಬಳಿ ಕಟ್ಟಡ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ₹ 1.75 ಕೋಟಿ ನೀಡಲಾಗಿತ್ತು. 2018ರ ಮಾರ್ಚ್‌ನಲ್ಲಿ ಈ ಹಣ ಮರಳಿಸುವಂತೆ ಸರ್ಕಾರ ಕೇಳಿತು. ಅದರಂತೆ ಹಣ ಸರ್ಕಾರಕ್ಕೆ ವಾಪಸಾಯಿತು.

ಜಿಲ್ಲೆಯಲ್ಲಿ ತೆಂಗು ಪಾರ್ಕ್ ಆರಂಭವಾಗುತ್ತದೆ. ಬೆಳೆಗಾರರ ಆರ್ಥಿಕ ಬದುಕಿನಲ್ಲಿ ಒಂದಿಷ್ಟು ಸುಧಾರಣೆಯಾಗುತ್ತದೆ ಎನ್ನುವ ಆಶಾವಾದ ಕಮರಿತು. ತಿಪಟೂರು, ತುರುವೇಕೆರೆಯಲ್ಲಿ ಗುರುತಿಸಿದ್ದ ಜಾಗಗಳು ಕೈಬಿಟ್ಟು ಹೋಗಿವೆ. ಕೊನೆಗೂ ತೆಂಗು ಪಾರ್ಕ್‌ ನಿರ್ಮಾಣ ಆಗಲಿಲ್ಲ.

ಜಿಲ್ಲೆಯ ಪ್ರಮುಖ ಬೆಳೆ ತೆಂಗು. ತೆಂಗಿನ ಮೌಲ್ಯವರ್ಧನೆ ಸಲುವಾಗಿ ಪಾರ್ಕ್‌ ನಿರ್ಮಾಣ ಮಾಡಬೇಕು ಎಂದು ಜಿಲ್ಲೆಯ ರೈತ ಮುಖಂಡರು, ಬೆಳೆ ಗಾರರು, ತೆಂಗು ಬೆಳೆಗಾರರ ಒಕ್ಕೂಟ ಗಳು ಆಗ್ರಹಿಸುತ್ತಾ ಬಂದಿವೆ. ಸರ್ಕಾರ ಮಾತ್ರ ಭರವಸೆ ನೀಡುವುದು ನಿಲ್ಲಿಸಿಲ್ಲ.

ತೋಟಗಾರಿಕೆ ಕಾಲೇಜು: ತೋಟಗಾರಿಕಾ ಕಾಲೇಜು ಸ್ಥಾಪನೆ, ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನೂತನ ಕೃಷಿ ಪದವಿ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಹೇಮೆ ನಾಲೆ ಆಧುನೀಕರಣ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಹೇಮಾವತಿ, ಭದ್ರಾ ಮೊದಲಾದ ನದಿ ಮೂಲಗಳಿಂದ ನೀರು ತಂದು ಜಿಲ್ಲೆ ಬರಡಾಗುವುದು ತಪ್ಪಿಸಲಾಗಿದೆ.

ಕೆಲ ಭಾಗಗಳಲ್ಲಿ ಹೇಮಾವತಿ ನಾಲೆ ನಿರ್ಮಿಸಿ ದಶಕಗಳೇ ಕಳೆದಿದ್ದು, ಹಾಳಾಗಿವೆ. ಹಲವೆಡೆ ಸರಾಗವಾಗಿ ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ. ನಾಲೆಗಳ ಆಧುನೀಕರಣ ಮಾಡಬೇಕು, ದುರಸ್ತಿಗೆ ಹಣ ನೀಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ.

ಜಿಲ್ಲೆಯ ಕಿ.ಮೀ 70ರಿಂದ 166 ಕಿ.ಮೀ ವರೆಗಿನ ಹೇಮಾವತಿ ನಾಲೆ ಆಧುನಿಕರಣ ಕಾಮಗಾರಿಗೆ ₹ 550 ಕೋಟಿ ನೀಡಬೇಕು. ಹಾಳಾಗಿರುವ ನಾಲೆಗಳ ಆಧುನೀಕರಣಕ್ಕೂ ಅನುದಾನದ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಅನುದಾನ ಒದಗಿಸಲಾಗಿದೆ. ಅದೇ ರೀತಿ ಹೇಮಾವತಿ ಯೋಜನೆಗೂ ಹಣ ನೀಡಬೇಕು ಎಂಬ ಬೇಡಿಕೆಯನ್ನು ಜಿಲ್ಲೆಯ ಶಾಸಕರು ಸಲ್ಲಿಸಿದ್ದಾರೆ.

ತೆವಳುತ್ತಿದೆ ಎತ್ತಿನಹೊಳೆ

ಎತ್ತಿನಹೊಳೆ ಯೋಜನೆಗೆ ಅನುದಾನ ಸಿಗದೆ ಜಿಲ್ಲೆಯಲ್ಲಿ ಕಾಮಗಾರಿ ತೆವಳುತ್ತಾ ಸಾಗಿದೆ. ಕಾಮಗಾರಿ ಮುಂದುವರಿಸಲು ಹಣ ಸಾಲದಾಗಿದ್ದು, ಮತ್ತೊಂದೆಡೆ ಭೂ ಸ್ವಾಧೀನ ಪೂರ್ಣಗೊಂಡಿಲ್ಲ. ಭೂ ಸ್ವಾಧೀನಕ್ಕೂ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಎತ್ತಿನಹೊಳೆ ಯೋಜನೆ ಜಪ ಮಾಡಲಾಗುತ್ತಿದೆ. ಇದೇ ರೀತಿ ಅನುದಾನಕೊಟ್ಟು, ಇದೇ ವೇಗದಲ್ಲಿ ಕಾಮಗಾರಿ ಮುಂದುವರಿದರೆ ಯೋಜನೆ ಮುಗಿಸಲು ಇನ್ನೂ ಕಾಲು ಶತಮಾನ ಬೇಕಾಗಬಹುದು.

ಜಿಲ್ಲೆಯಲ್ಲಿ 218 ಗ್ರಾಮಗಳಲ್ಲಿ 5,900 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲುವಿನಲ್ಲಿ ಬಫರ್ ಡ್ಯಾಂ ನಿರ್ಮಾಣಕ್ಕೆ 2 ಸಾವಿರ ಎಕರೆ ಜಮೀನು ಸ್ವಾಧೀನವಾಗಬೇಕಿದೆ. ಭೂಸ್ವಾಧೀನಕ್ಕೆ ₹ 2,400 ಕೋಟಿ ಅಗತ್ಯವಿದೆ. ಆದರೆ ಈವರೆಗೆ ₹ 120 ಕೋಟಿ ಮಾತ್ರ ಬಿಡುಗಡೆಯಾಗಿದೆ.

ಮಧುಗಿರಿ, ಕೊರಟಗೆರೆ, ಪಾವಗಡದಲ್ಲಿ ಭೂಸ್ವಾಧೀನವೇ ಆರಂಭವಾಗಿಲ್ಲ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₹ 1,500 ಕೋಟಿಯನ್ನು ಎತ್ತಿನಹೊಳೆ ಯೋಜನೆಗೆ ಮೀಸಲಿಟ್ಟಿತ್ತು. ಈ ಹಣವನ್ನು ಭೌತಿಕ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಆದ್ಯತೆ ಸಿಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು