ಶುಕ್ರವಾರ, ಅಕ್ಟೋಬರ್ 29, 2021
20 °C

ತುಮಕೂರು: ಪಾವಗಡದಲ್ಲೇ ಹಾಸ್ಟೆಲ್‌ ನಿರ್ಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪರಿಶಿಷ್ಟ ಜಾತಿ, ಪಂಗಡದ ಕಾಲೇಜು ಹಾಸ್ಟಲ್‍ ಕಟ್ಟಡಗಳನ್ನು ಪಾವಗಡದಲ್ಲಿ ವಿದ್ಯಾ ಸಂಸ್ಥೆಗಳ ಹತ್ತಿರ ನಿರ್ಮಿಸಬೇಕು ಎಂದು ಆಗ್ರಹಿಸಿ ಪಾವಗಡ ತಾಲ್ಲೂಕು ವಿದ್ಯಾರ್ಥಿ– ಯುವಜನ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಾವಗಡ ತಾಲ್ಲೂಕಿನಲ್ಲಿ ಪರಿಶಿಷ್ಟರ ಕಾಲೇಜು ಹಾಸ್ಟೆಲ್‌ಗಳಿಗೆ ನಿವೇಶನವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಕಳೆದ ಐದು ವರ್ಷಗಳಿಂದಲೂ ಅನುದಾನ ಬಿಡುಗಡೆಯಾಗಿದ್ದರೂ ನಿವೇಶನ ಕೊರತೆಯಿಂದ ಕಟ್ಟಡಗಳು ನಿರ್ಮಾಣವಾಗಿಲ್ಲ. ಆದರೆ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕಾಲೇಜಿಗೆ 5 ಕಿ.ಮೀ ದೂರದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ಸೇರಿದಂತೆ ಐದು ಹಾಸ್ಟೆಲ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರತಿ ದಿನ ಮೂರು ಬಾರಿ ಮಕ್ಕಳು 5 ಕಿ.ಮೀ ನಡೆದುಕೊಂಡು ಬಂದು ಹೋಗಬೇಕಾಗಿದೆ ಎಂದು ಹೇಳಿದರು.

ಬೇಸಿಗೆ ಕಾಲದಲ್ಲಿ ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟಕರವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ದಿನಕ್ಕೆ ಮೂರು ಬಾರಿ 5 ಕಿ.ಮೀ ನಡೆದುಕೊಂಡು ಬಂದು ಪಾಠ ಕೇಳಿ ಮತ್ತೆ ವಾಪಸ್ ಹೋಗಲು ಸಾಧ್ಯವೆ? ಮಕ್ಕಳಿಗೆ ಅನುಕೂಲವಾಗುವಂತೆ ಕಾಲೇಜು ಸಮೀಪವೇ ಜಾಗ ಗುರುತಿಸಿ ಹಾಸ್ಟೆಲ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಮುಖಂಡ ಕುಣಿಹಳ್ಳಿ ಮಂಜುನಾಥ್, ‘ಸರ್ಕಾರ ಯೋಜನೆಗಳನ್ನು ತರುವುದು ಸಾರ್ವಜನಿಕರ ಅನುಕೂಲಕ್ಕಾಗಿ. ಆದರೆ ಜನಪ್ರತಿನಿಧಿಗಳು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದಾಗಿ ಉಪಯೋಗಕ್ಕೆ ಬಾರದಂತಾಗುತ್ತವೆ. ಕಾಲೇಜು ಸಮೀಪವೇ ಹಾಸ್ಟೆಲ್ ನಿರ್ಮಿಸುವಂತೆ ಕೋರಿ ಮನವಿ ಸಲ್ಲಿಸಲಾಗಿದೆ. ಮನವಿಗೆ ಜಿಲ್ಲಾಧಿಕಾರಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟ ಅವಧಿಗೆ ಹೋರಾಟ ಮಾಡಲಾಗುವುದು’ ಎಂದರು.

ಸಮಿತಿ ಪದಾಧಿಕಾರಿಗಳಾದ ಎಂ.ವಿ.ಕಲ್ಯಾಣಿ, ಜಾಲೋಡು ಹೊನ್ನೂರಪ್ಪ, ಭಾನುಪ್ರಕಾಶ್, ಎಚ್‌.ವಿ. ರಮೇಶ್, ರಾಮಾಂಜಿ ವಿರೂಪಸಂದ್ರ, ಶಿವಪ್ಪ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.