ತುಮಕೂರು: ನಗರದ ಪ್ರವಾಸಿ ಮಂದಿರದ ಆವರಣದಲ್ಲಿದ್ದ ಸರ್ಕೂಟ್ ಹೌಸ್ಅನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಸಂಸದ ವಿ.ಸೋಮಣ್ಣ ಅವರ ಕಚೇರಿ ಉಪಯೋಗಕ್ಕಾಗಿ ನೀಡಲಾಗಿತ್ತು. ಆದರೆ ಈಗ ಏಕಾಏಕಿ ರದ್ದುಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ಸರ್ಕೂಟ್ ಹೌಸ್ ನವೀಕರಿಸಿ, ಸಿದ್ಧಪಡಿಸಲಾಗಿದ್ದು, ಆ. 18ರಂದು ಉದ್ಘಾಟಿಸಿ, ಅಂದಿನಿಂದ ಕಚೇರಿ ಕೆಲಸ ಆರಂಭಿಸಲು ಸೋಮಣ್ಣ ಸಿದ್ಧತೆ ಮಾಡಿಕೊಂಡಿದ್ದರು. ದುರಸ್ತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಈಗ ಲೋಕೋಪಯೋಗಿ ಇಲಾಖೆ ನೀಡಿದ್ದ ಆದೇಶ ವಾಪಸ್ ಪಡೆದುಕೊಂಡಿದೆ. ಪ್ರವಾಸಿ ಮಂದಿರದಲ್ಲಿ ಜಾಗ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಬಿಜೆಪಿ, ಜೆಡಿಎಸ್ ನಾಯಕರನ್ನು ಕೆರಳಿಸಿದೆ.
ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಹಾಗೂ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‌ಬಾಬು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
‘ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಾರಣ, ಅವರೇ ನೇರ ಹೊಣೆ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ದಬ್ಬಾಳಿಕೆಯಿಂದ ಆಡಳಿತ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ತರವು ಜಿಲ್ಲೆ ಮೈಸೂರಿನ ಪ್ರವಾಸಿ ಮಂದಿರದಲ್ಲಿ ಜಿ.ಟಿ.ದೇವೇಗೌಡ, ಇತರೆ ಶಾಸಕರಿಗೆ ಸ್ಥಳಾವಕಾಶ ನೀಡಲಾಗಿದೆ. ಆದರೆ ಇಲ್ಲಿ ನೀಡಿದ್ದ ಜಾಗವನ್ನು ರದ್ದುಪಡಿಸಲಾಗಿದೆ. ಅಲ್ಲಿಗೊಂದು ಕಾನೂನು, ಇಲ್ಲಿಗೊಂದು ಕಾನೂನು ಇದೆಯೇ’ ಎಂದು ಸುರೇಶ್‌ಗೌಡ ಪ್ರಶ್ನಿಸಿದರು.
ಸೋಮಣ್ಣ ಹಿರಿಯ ರಾಜಕಾರಣಿ. ಉದ್ದೇಶ ಪೂರಕವಾಗಿ ಅವಮಾನ ಮಾಡಲಾಗುತ್ತಿದೆ. ಅವರನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ರೈಲ್ವೆ, ನೀರಾವರಿ ಯೋಜನೆ, ಮೆಟ್ರೋ, ಚೆನ್ನೈ– ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸಬೇಕಿದೆ. ಸೋಮಣ್ಣ ಆಯ್ಕೆಯಾಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಲೋಕಸಭೆ ಸೋಲನ್ನು ದ್ವೇಷಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕಾದರೆ ಮೊದಲು ಕಚೇರಿ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಕ್ಷುಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ’ ಎಂದು ಗುಡುಗಿದರು.
ಸುರೇಶ್‌ಬಾಬು, ‘ಕಚೇರಿಗೆ ಸ್ಥಳಾವಕಾಶ ನೀಡಿ, ನವೀಕರಣ ಕೆಲಸ ಮುಗಿದು ಕೆಲಸ ಆರಂಭಿಸುವ ಹೊತ್ತಿನಲ್ಲಿ ರದ್ದುಪಡಿಸಿರುವುದು ಸರಿಯಲ್ಲ. ಇಲ್ಲಿ ಏನಾದರೂ ದಂಧೆ ನಡೆಸಲು ಬಳಸುತ್ತಿದ್ದರೆ? ಭಾಗ್ಯಗಳನ್ನು ಕೊಟ್ಟು ವಾಪಸ್ ಪಡೆಯಲು ಮುಂದಾಗಿರುವಂತೆ ಕಚೇರಿ ಕೊಟ್ಟು ಕಿತ್ತುಕೊಳ್ಳಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲೇ ಜನರ ಭೇಟಿ
ಪ್ರವಾಸಿ ಮಂದಿರದಲ್ಲಿ ಕಚೇರಿಗಾಗಿ ನೀಡಿದ್ದ ಕಟ್ಟಡವನ್ನು ವಾಪಸ್ ಪಡೆದಿದ್ದು ಅದೇ ಸ್ಥಳದಲ್ಲಿ ಆ. 18ರಂದು ಸೋಮಣ್ಣ ಅವರು ಸಾರ್ವಜನಿಕರನ್ನು ಭೇಟಿಯಾಗಲು ಮುಂದಾಗಿದ್ದು ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ. ಸೋಮಣ್ಣ ಭಾನುವಾರ ಕಚೇರಿಯಲ್ಲಿ ಹಾಜರು ಇರುತ್ತಾರೆ. ಸಾರ್ವಜನಿಕರು ಬೆಳಗ್ಗೆ 8ರಿಂದ 2 ಗಂಟೆ ವರೆಗೆ ಭೇಟಿಮಾಡಿ ಅಹವಾಲು ಸಲ್ಲಿಸಬಹುದಾಗಿದೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.