ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಬಸ್ ಸಮಸ್ಯೆ: ಸಹಾಯವಾಣಿ ಶುರು

Published 30 ಮೇ 2024, 14:37 IST
Last Updated 30 ಮೇ 2024, 14:37 IST
ಅಕ್ಷರ ಗಾತ್ರ

ತುಮಕೂರು: ಶಾಲೆಗಳು ಮೇ 31ರಿಂದ ಆರಂಭವಾಗಲಿದ್ದು, ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸಂಚಾರ ಹಾಗೂ ಬಸ್ ಸಮಸ್ಯೆಗೆ ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಲು ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ.

ಈಗಾಗಲೇ ಬರ ಪರಿಹಾರ, ಮಳೆ ಅನಾಹುತ, ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಹಾಯವಾಣಿ ತೆರೆದಿದ್ದು, ಈಗ ಮಕ್ಕಳ ನೆರವಿಗೆ ಸಹಾಯವಾಗಿ ಆರಂಭಿಸಲಾಗಿದೆ.

ಶಾಲೆ ಆರಂಭದ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಶಾಲಾ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಿ, ಬರಲು ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಅವರಿಗೆ ಸೂಚಿಸಿದರು.

ಎಲ್ಲೂ ಬಸ್ ಸಮಸ್ಯೆ ಎದುರಾಗಬಾರದು. ಬಸ್‍ಗಳಲ್ಲಿ ಮಕ್ಕಳು ಮೆಟ್ಟಿಲು ಮೇಲೆ ನಿಲ್ಲದಂತೆ, ಜನಸಂದಣಿ ಆಗದಂತೆ ನಿಗಾ ವಹಿಸಬೇಕು. ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ಬಸ್ ನಿಲುಗಡೆ ಮಾಡುವುದರಿಂದ ಮಕ್ಕಳಿಗೆ ಬಸ್ ಹತ್ತಲು, ಇಳಿಯಲು ತೊಂದರೆಯಾಗುತ್ತದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ವೃತ್ತಗಳ ಬಳಿ ಬಸ್ ನಿಲುಗಡೆ ಮಾಡದಂತೆ ಎಚ್ಚರ ವಹಿಸುವಂತೆ ನಿರ್ದೇಶಿಸಿದರು.

ವಿದ್ಯಾರ್ಥಿಗಳ ಬಸ್ ಪಾಸ್‌ಗಾಗಿ ಆನ್‍ಲೈನ್ ಮೂಲಕ ಜೂನ್ 1ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ತುಮಕೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.

ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರಂಗಧಾಮಯ್ಯ, ‘ಜಿಲ್ಲೆಯಲ್ಲಿ 2,112 ಸರ್ಕಾರಿ, 542 ಖಾಸಗಿ ಸೇರಿ ಒಟ್ಟು 2,654 ಶಾಲೆಗಳಿವೆ. 1ರಿಂದ 10ನೇ ತರಗತಿ ವರೆಗೆ ಒಟ್ಟು 2,29,315 ಮಕ್ಕಳು ದಾಖಲಾಗಿದ್ದಾರೆ. ಈಗಾಗಲೇ 1,622 ಶಾಲೆಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಉಳಿದ 1,032 ಶಾಲೆಗಳಲ್ಲಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪಯೋಜನಾ ಸಮನ್ವಯಾಧಿಕಾರಿ ಪುಷ್ಪವಲ್ಲಿ, ‘ಜಿಲ್ಲೆಯಲ್ಲಿ 1,331 ಸರ್ಕಾರಿ, 229 ಖಾಸಗಿ ಸೇರಿ ಒಟ್ಟು 1,560 ಶಾಲೆಗಳಿವೆ. 1ರಿಂದ 10ನೇ ತರಗತಿ ವರೆಗೆ ಒಟ್ಟು 1,27,000 ಮಕ್ಕಳು ದಾಖಲಾಗಿದ್ದಾರೆ. ಈಗಾಗಲೇ 1,537 ಶಾಲೆಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ’ ಎಂದು ಹೇಳಿದರು.

ಸಹಾಯವಾಣಿ

ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು. ನಿಗದಿತ ಸಮಯಕ್ಕೆ ಬಸ್ ಬಾರದಿದ್ದಲ್ಲಿ ಆಯಾ ತಾಲ್ಲೂಕಿನ ಘಟಕ ವ್ಯವಸ್ಥಾಪಕರ ದೂರವಾಣಿಗೆ ಕರೆ ಮಾಡಿ ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ. ಗುಬ್ಬಿ ತಾಲ್ಲೂಕು– 7760990913 ಕುಣಿಗಲ್- 7760990914 ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ– 7760990915 ಶಿರಾ- 7760990916 ತಿಪಟೂರು- 7760990917 ಕೊರಟಗೆರೆ- 7760990935 ಮಧುಗಿರಿ- 7349418324 ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT