ಭಾನುವಾರ, ಜನವರಿ 17, 2021
26 °C
ಕುಣಿಗಲ್‌ ಪಾದಚಾರಿ ಮಾರ್ಗದ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ

ರಸ್ತೆ ಬದಿ ನಿಂತಿದ್ದ ಬೈಕ್‌ಗಳ ಮೇಲೆ ಬಸ್‌ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಾದಚಾರಿ ಮಾರ್ಗದ ಅವ್ಯವಸ್ಥೆಯಿಂದಾಗಿ ಸಂಚರಿಸಲಾಗದೆ ಖಾಸಗಿ ಬಸ್ ರಸ್ತೆಬದಿ ನಿಂತಿದ್ದ ದ್ವಿಚಕ್ರವಾಹನಗಳ ಮೇಲೆ ಹರಿದು ಪಟ್ಟಣದ ಗ್ರಾಮದೇವತಾ ವೃತ್ತದಲ್ಲಿ ಒಂದು ಗಂಟೆ ಸಂಚಾರಕ್ಕೆ ತೊಂದರೆಯಾಗಿ ನಾಗರಿಕರು ಪರದಾಡಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಪುರಸಭೆ ಬಸ್ ನಿಲ್ದಾಣದಿಂದ ತುಮಕೂರಿಗೆ ಹೋಗುತ್ತಿದ್ದ ಬಸ್ ಹಕೀಂ ಷಾ ವಾಲಿ ಕಾಂಪ್ಲೆಕ್ಸ್ ಬಳಿ ತಿರುವಿನ ಬಳಿ ಬಂದಾಗ ರಸ್ತೆಯ ಒಂದು ಬದಿಯಲ್ಲಿ ಕಾರುಗಳು ನಿಂತ್ತಿದ್ದು, ಅಡ್ಡಲಾಗಿ ಬಂದ ದ್ವಿಚಕ್ರ ವಾಹನ ಸವಾರನನ್ನು ಪಾರು ಮಾಡಲು ಯತ್ನಿಸುವ ಪ್ರಯತ್ನದಲ್ಲಿ ಬಸ್ ಚಾಲಕ ರಸ್ತೆಯ ಮತ್ತೊಂದು ಬದಿಯಲ್ಲಿ ಸಾಲಾಗಿ ನಿಂತಿದ್ದ ದ್ವಿಚಕ್ರವಾಹನಗಳ ಮೇಲೆ ಹರಿದಿದೆ. 15ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಘಟನೆಯಿಂದಾಗಿ ವಾಹನ ಮಾಲೀಕರು ಆತಂಕಗೊಂಡು, ಚಾಲಕನ ಮೇಲೆ ಹರಿಹಾಯ್ದಿದ್ದಾರೆ. ವಾಹನಗಳನ್ನು ತೆರವು ಮಾಡಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರು, ಬೆಂಗಳೂರು ಮತ್ತು ಮೈಸೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಕೇಂದ್ರ ಬಿಂದುವಾಗಿದ್ದ ಗ್ರಾಮದೇವತಾ ವೃತ್ತದಲ್ಲಿ ಸುಮಾರು ಒಂದುಗಂಟೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ನಂತರ ಪೊಲೀಸರು ಬಂದು ಜಖಂಗೊಂಡಿದ್ದ ವಾಹನ ಮತ್ತು ಬಸ್ ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರ‌ಕ್ಕೆ ಅನುವು ಮಾಡಿಕೊಟ್ಟರು.

ನಾಗರಿಕರ ಆಕ್ರೋಶ, ಅಸಹಾಯಕರಾದ ಪೊಲೀಸರು: ಪಟ್ಟಣದಲ್ಲಿ ರಸ್ತೆಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಪಾದಚಾರಿಗಳ ಮಾರ್ಗವನ್ನು ದ್ವಿಚಕ್ರವಾಹನ ಸವಾರರು ಅತಿಕ್ರಮಿಸಿಕೊಂಡಿದ್ದಾರೆ. ನಾಗರಿಕರಿಗೆ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರೆ ಪೊಲೀಸರು, ಪುರಸಭೆಯವನ್ನು ದೂರುತ್ತಿದ್ದಾರೆ. ಪುರಸಭೆಯವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪುರಸಭೆ ಅಧಿಕಾರಿಗಳ ಮನವಿ ಮೇರೆಗೆ ಕ್ರಮ ತೆಗೆದುಕೊಳ್ಳಬಹುದು. ಪುರಸಭೆಯವರೆ ಮುಂದೆ ಬರದಿದ್ದಾಗ ಪೊಲೀಸರು ಅಸಹಾಯಕರಾಗುತ್ತಿದ್ದಾರೆ. ಸುಂಕ ವಸೂಲಿಯ ನೆಪದಲ್ಲಿ ಗುತ್ತಿಗೆದಾರರು ರಸ್ತೆ ಬದಿ ವ್ಯಾಪಾರಿಗಳ ಪರವಾಗಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

ಕಳೆದ ತಿಂಗಳು ತುಮಕೂರು ರಸ್ತೆಯಲ್ಲಿ ಇದೇ ರೀತಿಯ ಸಮಸ್ಯೆಯಿಂದಾಗಿ ಅಪಘಾತಗಳು ಹೆಚ್ಚಾದಾಗ ಪುರಸಭೆಯ ಅಧಿಕಾರಿ ವರ್ಗದವರು ಪೊಲೀಸರ ಸಹಕಾರದಲ್ಲಿ ರಸ್ತೆಬದಿಯ ಅಂಗಡಿಗಳನ್ನು ತೆರವುಮಾಡುವ ಕಾರ್ಯವನ್ನು ನೆಪಮಾತ್ರಕ್ಕೆ ಒಂದು ದಿನ ಮಾಡಿ ಒತ್ತಡಕ್ಕೆ ಮಣಿದು ಕೈಬಿಟ್ಟಿದ್ದಾರೆ. ಪುರಸಭೆಯವರ ನಿರ್ಲಕ್ಷದಿಂದಾಗಿ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ. ಪುರಸಭೆ, ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಮತ್ತು ನಾಗರಿಕರ ಹಿತದೃಷ್ಟಿಯಿಂದ ವ್ಯವಸ್ಥಿತ ಕ್ರಮ ಜರುಗಿಸಲು ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.