ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮೇಲೇಳದ ನಗರದ ಬಸ್ ಟರ್ಮಿನಲ್

Last Updated 7 ಅಕ್ಟೋಬರ್ 2021, 8:08 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಿ ಎರಡು ವರ್ಷಗಳಿಗೆ ಕಾಲಿಡುತ್ತಿದ್ದರೂ ತಳಪಾಯದಿಂದ ಮೇಲೆದ್ದಿಲ್ಲ. ಕೆಲಸ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದು, ಒಟ್ಟಾರೆಯಾಗಿ ಕಾಮಗಾರಿ ಮುಗಿಸಲು ಮೂರು ವರ್ಷಗಳು ಬೇಕಾಗಿವೆ!

ಕೆಎಸ್‌ಆರ್‌ಟಿಸಿ ಇತಿಹಾಸದಲ್ಲಿ ಜಿಲ್ಲಾ ಕೇಂದ್ರದಲ್ಲಿ ಒಂದು ಬಸ್ ನಿಲ್ದಾಣ ನಿರ್ಮಿಸಲು ಮೂರು ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡ ಉದಾಹರಣೆಗಳಿಲ್ಲ. 2019 ಜನವರಿ ವೇಳೆಗೆ ಬಾಳನಕಟ್ಟೆಯಲ್ಲಿರುವ ಡಿಪೊ ಜಾಗಕ್ಕೆ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ನಂತರ ಕಟ್ಟಡ ತೆರವುಮಾಡಿ, ಹೊಸದಾಗಿ ನಿರ್ಮಾಣ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಯಿತು. ತಳಪಾಯದ ಕಾಮಗಾರಿ ಮುಗಿಸಲು ಇಷ್ಟುಸುದೀರ್ಘ ಸಮಯ ತೆಗೆದುಕೊಂಡಿದೆ. ನಿಯಮದ ಪ್ರಕಾರ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಸಾಕಷ್ಟು ತಡವಾಗಿದ್ದು, ಎಂಟತ್ತು ತಿಂಗಳಲ್ಲಿ ಕೆಲಸ ಮುಗಿಯಲಿದೆ ಎಂದು ಇದರ ಹೊಣೆ ಹೊತ್ತ ಅಧಿಕಾರಿಗಳು ಹೇಳುತ್ತಾರೆ. ಈಗಿನ ವೇಗ ಗಮನಿಸಿದರೆ ಇನ್ನೂ ಒಂದು ವರ್ಷಕ್ಕೆ ಮುಂಚೆ ಪೂರ್ಣಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ.

ಹಿಂದೆ ಕೆರೆ ಇದ್ದ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಹೊಸದಾಗಿ ಕೆಲಸ ಆರಂಭಿಸಿದ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಯಿತು. ಪಕ್ಕದಲ್ಲೇ ಇರುವ ಬಾಲ ಭವನಕ್ಕೆ ಒಳಚರಂಡಿ ವ್ಯವಸ್ಥೆ ಇಲ್ಲದೆ ಅಲ್ಲಿನ ನೀರು ಸಹ ಇದೇ ಪ್ರದೇಶಕ್ಕೆ ಹರಿದು ಬಂತು. ಕೋವಿಡ್‌ ಸಮಯದಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕೆಲಸ ನಿಧಾನವಾಯಿತು ಎಂದು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಶ್ಮಿಹೇಳುತ್ತಾರೆ.

ಸಂಪರ್ಕ ಕೇಂದ್ರ: ತುಮಕೂರು ನಗರ ರಾಜ್ಯದ ಸಂಪರ್ಕ ಕೊಂಡಿಯಾಗಿದೆ. ಮೈಸೂರು, ಮಂಗಳೂರು ಭಾಗವನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳು, ಮಲೆನಾಡು ಭಾಗಕ್ಕೆ ನಗರದ ಮೂಲಕವೇ ಹಾದುಹೋಗಬೇಕು. ರಾಜ್ಯದ ಉತ್ತರ ಕರ್ನಾಟಕ ಭಾಗವಷ್ಟೇ ಅಲ್ಲದೆ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ದೇಶದ ಉತ್ತರ ಭಾಗದ ಸಾಕಷ್ಟು ರಾಜ್ಯಗಳಿಗೆ ಸಂಪರ್ಕ ಬೆಸೆಯುತ್ತದೆ. ನಿತ್ಯ ನೂರಾರು ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ, ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಸುಮಾರು 3 ಸಾವಿರ ಬಸ್‌ಗಳು ನಿಲ್ದಾಣದ ಮೂಲಕ ಹಾದು ಹೋಗಬಹುದು ಎಂದು ಅಂದಾಜಿಸಲಾಗಿದೆ. ಇಂತಹ ಪ್ರಮುಖ ನಿಲ್ದಾಣದ ನಿರ್ಮಾಣ ಕೆಲಸ ತಡವಾಗಿರುವುದು ಆಕ್ರೋಶವನ್ನು ಹೆಚ್ಚಿಸಿದೆ.

ತಪ್ಪದ ಕಿರಿಕಿರಿ: ನಿಲ್ದಾಣ ಕಾಮಗಾರಿ ಸಲುವಾಗಿ ಡಿಪೊ ಸ್ಥಳಕ್ಕೆ ತತ್ಕಾಲಿಕವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗಿದ್ದು, ಇಲ್ಲಿ ಸ್ಥಳಾವಕಾಶ ಸಾಲದಾಗಿದ್ದು, ನಿತ್ಯವೂ ಪ್ರಯಾಣಿಕರು ಪರದಾಡುವುದು ಸಾಮಾನ್ಯ ದೃಶ್ಯವಾಗಿದೆ. ಬಸ್ ಸಂಚರಿಸುತ್ತಿದ್ದರೆ, ಅದರ ಮಧ್ಯದಲ್ಲೇ ಜನರು ಓಡಾಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ, ಅನಾಹುತ ಕಟ್ಟಿಟ್ಟ ಬುತ್ತಿ. ಹೆಜ್ಜೆ ಮೇಲೆ ಹೆಜ್ಜೆ ಹಾಕಿದಂತೆ ಬಸ್ ಚಾಲನೆ ಮಾಡಬೇಕಾಗುತ್ತದೆ. ಕ್ಷಣಮಾತ್ರದಲ್ಲಿ ಏನೆಲ್ಲ ಅನಾಹುತ ಆಗಬಹುದು ಎನಿಸುತ್ತದೆ ಎಂದು ಚಾಲಕರೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT