ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳ ವರ್ತನೆ ಜನರಿಗೆ ತಿಳಿಸಲು ಯಾತ್ರೆ

ಅಧಿವೇಶನಕ್ಕೆ ಅಡ್ಡಿ ಪಡಿಸಿದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ
Last Updated 18 ಆಗಸ್ಟ್ 2021, 3:51 IST
ಅಕ್ಷರ ಗಾತ್ರ

ತುಮಕೂರು: ದೇಶದ ಎಲ್ಲ ವರ್ಗಗಳ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ತಿಳಿಸಿದರು.

ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಜನಾಶೀರ್ವಾದ ಯಾತ್ರೆ ಅವಶ್ಯಕತೆ ಇದೆಯೇ ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಿದ್ದಾರೆ. ಆದರೆ ಸಂಸತ್‌ಗೆ ಅಗೌರವ ಉಂಟು ಮಾಡುವ ರೀತಿಯಲ್ಲಿ ವಿರೋಧಪಕ್ಷಗಳು ವರ್ತಿಸಿದ್ದನ್ನು ಜನರಿಗೆ ತಿಳಿಸಲು ಈ ಯಾತ್ರೆ ಅಗತ್ಯ ಎಂದರು.

ಮೋದಿ ಸರ್ಕಾರದಲ್ಲಿ ಇಪ್ಪತ್ತು ಮಂದಿ ಪರಿಶಿಷ್ಟರು ಸಚಿವರಾಗಿದ್ದಾರೆ. ಅವರನ್ನು ಸಂಸತ್ತಿಗೆ ಪರಿಚಯಿಸಲು ಬಿಡದಷ್ಟು ವಿರೋಧ ಪಕ್ಷಗಳು ಪರಿಶಿಷ್ಟರ ವಿರೋಧಿಯಾಗಿ ವರ್ತಿಸು
ತ್ತಿವೆ. ಮೋದಿ ಸರ್ಕಾರದ ಕಾರ್ಯಕ್ರಮ
ಗಳ ಬಗ್ಗೆ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಬೇಕು. ಬೆರಳಂಚಿನಲ್ಲಿ ಸೌಲಭ್ಯ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಜನ ಬಿಜೆಪಿ ಕಾರ್ಯಕ್ರಮಗಳನ್ನು ಒಪ್ಪಿ ಪುನರಾಯ್ಕೆ ಮಾಡಿದ್ದಾರೆ. ವಿರೋಧ ಪಕ್ಷಗಳು ಮೋದಿ ಅವರ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ತಿಕ್ಕಾಟದಿಂದ ಸಂಸತ್ ಅಧಿವೇಶನ ನಡೆಸಲು ಬಿಡದ ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಧಿವೇಶನಕ್ಕೆ ಅಡ್ಡಿ ಮಾಡಿರುವುದನ್ನು ವಿರೋಧಿಸಿ ಈ ಜನಾಶಿರ್ವಾವಾದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಜನಪ್ರಿಯತೆ ಹಾಗೂ ಪ್ರಚಾರಕ್ಕಾಗಿ ವಿರೋಧ ಪಕ್ಷಗಳು ಅಧಿವೇಶನಕ್ಕೆ ಅಡ್ಡಿ ಮಾಡಿದ್ದಾರೆ. ಅಧಿವೇಶನದಲ್ಲಿ ಚರ್ಚೆ ಮಾಡಲು ಶಕ್ತಿ ಇಲ್ಲದೇ, ಅಧಿವೇಶನಕ್ಕೆ ಅಡ್ಡಿ ಮಾಡುತ್ತಿರುವುದು ಶೋಭೆ ತರುವ ಲಕ್ಷಣವಲ್ಲ. ಮನವಿ ಮಾಡಿದರು ಅಧಿವೇಶನ ನಡೆಸಲು ಬಿಡದ ವಿರೋಧ ಪಕ್ಷಗಳ ನಡೆಯ ಹಿಂದಿರುವ ಹುನ್ನಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಮಾಡಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಜನರ ಬಳಿಗೆ ಹೋಗಬೇಕು ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅನೇಕ ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕೋವಿಡ್, ಪ್ರವಾಹ ಸೇರಿದಂತೆ ಅನೇಕ ವಿಪತ್ತುಗಳ ನಡುವೆ ಬಿಜೆಪಿ ಸರ್ಕಾರ ಸಮರ್ಪಕ ಆಡಳಿತ ನೀಡಿದೆ. ಯಡಿಯೂರಪ್ಪ ಅಧಿಕಾರವಧಿ ನಂತರ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು, ಬಿಜೆಪಿ ಗುರಿ ಉತ್ತಮ ಆಡಳಿತ ನೀಡುವುದಷ್ಟೇ ಎಂದು ಹೇಳಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ರಾಷ್ಟ್ರದ ಸುತ್ತ ಶತ್ರುಗಳಿದ್ದಾರೆ. ಆದರೆ ವಿಶ್ವನಾಯಕ ನರೇಂದ್ರ ಮೋದಿ ಕೆಚ್ಚೆದೆಯಿಂದ ಎಲ್ಲವನ್ನು ಎದುರಿಸುತ್ತಿದ್ದಾರೆ. ಹಿಂದೆ ಯಾವ ವಿರೋಧ ಪಕ್ಷಗಳು ವರ್ತಿಸದ ರೀತಿಯಲ್ಲಿ ಗೂಂಡಾಗಳ ರೀತಿ ವಿರೋಧ ಪಕ್ಷಗಳು ವರ್ತಿಸುತ್ತಿವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ.ರಾಜೇಶ್ ಗೌಡ, ಮಸಾಲ ಜಯರಾಂ, ಚಿದಾನಂದ್ ಎಂ.ಗೌಡ, ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ನಾರು ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕಿರಣ್ ಕುಮಾರ್, ಎಸ್.ಆರ್.ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ, ಎಂ.ಬಿ.ನಂದೀಶ್, ಮೇಯರ್ ಕೃಷ್ಣಪ್ಪ, ಎಂ.ಆರ್.ಹುಲಿನಾಯ್ಕರ್, ಡಿ.ಕೃಷ್ಣಕುಮಾರ್, ಪ್ರೇಮಾ ಹೆಗ್ಡೆ, ವೈ.ಎಚ್.ಹುಚ್ಚಯ್ಯ, ನರಸಿಂಹಮೂರ್ತಿ, ಲಕ್ಷ್ಮೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT