ಗುರುವಾರ , ಮಾರ್ಚ್ 30, 2023
24 °C
ನಿಡಸಾಲೆ ಸುತ್ತಮುತ್ತಲಿನ ರೈತರ ಆತಂಕ

ಕಾಲುಬಾಯಿ ರೋಗ: 8 ಜಾನುವಾರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ನಿಡಸಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಲುಬಾಯಿ ರೋಗದಿಂದ ಜಾನುವಾರು ಮೃತಪಡುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ನಿಡಸಾಲೆ, ಚಲಮಸಂದ್ರ ಗ್ರಾಮದಲ್ಲಿ ಕಾಲುಬಾಯಿ ರೋಗದಿಂದ ಜಾನುವಾರು ಬಳಲುತ್ತಿವೆ. ಕಳೆದ ವಾರದಿಂದ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು ಶನಿವಾರದಿಂದ ಇಲ್ಲಿಯವರೆಗೆ ನಿಡಸಾಲೆ ಗ್ರಾಮದ ಪಟೇಲ್ ಗಂಗಣ್ಣ, ಶಿವಲಿಂಗಯ್ಯ, ಕೃಷ್ಣಪ್ಪ, ಚಂದ್ರೇಗೌಡ ಅವರಿಗೆ ಸೇರಿದ ಒಟ್ಟು 8 ಜಾನುವಾರು ಮೃತಪಟ್ಟಿವೆ. ಇನ್ನೂ ಹತ್ತಾರು ಜಾನುವಾರು ಸೋಂಕಿನಿಂದ ಚಿಂತಾಜನಕ ಸ್ಥಿತಿಗೆ ತಲುಪಿವೆ.

‘ಕಣ್ಣ ಮುಂದೆಯೇ ಜಾನುವಾರು ನರಳಿ ಮೃತಪಡುವುದನ್ನು ನೋಡಲಾಗದ ಸ್ಥಿತಿಗೆ ರೈತರು ತಲುಪಿದ್ದಾರೆ’ ಎಂದು ಗ್ರಾಮಸ್ಥ ಅರುಣ್ ತಿಳಿಸಿದ್ದಾರೆ.

ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದೆ. ಜಾನುವಾರುಗಳಿಗೆ ಲಸಿಕೆಯ ಅಗತ್ಯವಿದೆ. ವಿತರಣೆ ಮಾಡಲು ಸಿಬ್ಬಂದಿ ಕೊರತೆಯ ಜತೆಗೆ ಪಶು ವೈದ್ಯರಿಗೆ ನಿಡಸಾಲೆಯ ಜತೆಗೆ ಉಜ್ಜನಿಯ ಗ್ರಾಮದ ಪ್ರಭಾರ ಕೆಲಸವನ್ನೂ ನೀಡಲಾಗಿದೆ. ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆ ಇದೆ. ಜತೆಗೆ ಸರ್ಕಾರದಿಂದ ಉಚಿತ ಲಸಿಕೆ ವಿತರಣೆಯಾಗದಿರುವುದು ಜಾನುವಾರುಗಳ ರಕ್ಷಣೆಗೆ ಸಮಸ್ಯೆಯಾಗಿದೆ. ಸಂಬಂದಪಟ್ಟವರು ಗಮನಹರಿಸಲು ಮುಂದಾಗಬೇಕು ಎಂದು ಗ್ರಾಮಸ್ಥರಾದ ಯೋಗೀಶ್ ಮತ್ತು ಪ್ರವೀಣ್ ಕೋರಿದ್ದಾರೆ.

‘ಸರ್ಕಾರದಿಂದ ಕಾಲುಬಾಯಿ ರೋಗದ ಉಚಿತ ಲಸಿಕೆ ವಿತರಣೆ ಬಗ್ಗೆ ಮಾರ್ಗಸೂಚಿ ಬಂದಿಲ್ಲ. ಲಸಿಕೆಯೂ ಸರಬರಾಜಾಗಿಲ್ಲ. ಆದರೂ, ಕಾಲುಬಾಯಿ ರೋಗ ನಿಯಂತ್ರಣಕ್ಕೆ ಪರ್ಯಾಯ ಲಸಿಕೆ ನೀಡಲು ವೈದ್ಯರಿಗೆ ಸೂಚನೆ ನೀಡಲಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಿಡಸಾಲೆಯ ಪಶು ವೈದ್ಯೆ ಪ್ರಿಯಾ ಮಾತನಾಡಿ, ‘ನಿಡಸಾಲೆ ಗ್ರಾಮದಲ್ಲಿ ಕಾಲುಬಾಯಿ ರೋಗದಿಂದ ಜಾನುವಾರು ಮೃತಪಡುತ್ತಿವೆ. ರೋಗ ಹರಡದಂತೆ ಸುತ್ತಲಿನ ಗ್ರಾಮಗಳಾದ ಹೊಸಹಳ್ಳಿದೊಡ್ಡಿ, ಎ.ಕೆ. ಕಾಲೊನಿ, ಕೆಬ್ಬಳ್ಳಿ, ರಾಜಪ್ಪದೊಡ್ಡಿಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ನಿಡಸಾಲೆ ಗ್ರಾಮದಲ್ಲಿ ಸೋಂಕು ಹರಡದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರು ಸಹ ಎಚ್ಚರಿಕೆವಹಿಸಬೇಕಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.