ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕನಾಯಕನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಇಲ್ಲ ಸ್ವಚ್ಛತೆ

ಕುಸಿದು ಬೀಳುವಷ್ಟರ ಮಟ್ಟಿಗೆ ಶಿಥಿಲಗೊಂಡ ಕೊಠಡಿಗಳು
ಸೈಯ್ದ್ ಹುಸೇನ್ ಬಿ.ಎಸ್.
Published 28 ಜೂನ್ 2024, 5:48 IST
Last Updated 28 ಜೂನ್ 2024, 5:48 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಪಟ್ಟಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳು ಕುಸಿದು ಬೀಳುವಷ್ಟರ ಮಟ್ಟಿಗೆ ಶಿಥಿಲಗೊಂಡಿವೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸದಾ ಎಚ್ಚರಿಕೆಯಲ್ಲೇ ಪಾಠ ಮಾಡುವ ಸ್ಥಿತಿ ಇದೆ. ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗಂತೂ ಇದು ಚಿಂತಾಜನಕ ವಿಚಾರ.

ಶಾಲಾ ಹಿಂಬದಿ ಕಸದ ತಿಪ್ಪೆ: ಸ್ಥಳೀಯರು, ಕೆಲವು ಅಂಗಡಿ ವ್ಯಾಪಾರಸ್ಥರು ಯಾವ ಹಿಂಜರಿಕೆ ಇಲ್ಲದೆ ಕಸ ತಂದು ಮೂಟೆ ಕಟ್ಟಿ ಶಾಲೆ ಆವರಣದಲ್ಲಿ ಎಸೆದು ಹೋಗುತ್ತಾರೆ. ಶಾಲೆಯ ಹಿಂಭಾಗದ ಗೋಡೆಗಳುದ್ದಕ್ಕೂ ನಿಂತು ಜನ ಮೂತ್ರ ಮಾಡುತ್ತಾರೆ. ಅದರ ದುರ್ವಾಸನೆ ಮತ್ತು ಅದರಿಂದ ಉತ್ಪತ್ತಿಯಾಗುವ ಸೊಳ್ಳೆಗಳ ಕಾಟವನ್ನು ನಿತ್ಯ ಮಕ್ಕಳು, ಶಿಕ್ಷಕರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು. ಶಾಲೆಯ ಕೊಠಡಿಗಳ ಗೋಡೆ ಹಿಂಬದಿಯಲ್ಲಿ ಕಸ ತಂದು ಸುರಿಯುವ ಮತ್ತು ರಾತ್ರಿಹೊತ್ತು ಅದಕ್ಕೆ ಬೆಂಕಿ ಇಡುವ ದುಷ್ಕೃತ್ಯಗಳು ಇಲ್ಲಿ ನಿರಾತಂಕವಾಗಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಕುಡುಕರ ಅಡ್ಡೆ: ಕುಡಿದು ಬಂದು ಶಾಲೆಯ ಆವರಣದಲ್ಲಿ ಮಲಗುವುದು, ರಾತ್ರಿ ಅಲ್ಲಿಯೇ ಕುಳಿತು ಕುಡಿಯುವುದು ಇತ್ಯಾದಿ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ ಎಂಬ ಆರೋಪ ಇದೆ. ಮುಖ್ಯ ಶಿಕ್ಷಕರು ಅಥವಾ ಸಹ ಶಿಕ್ಷಕರು ಇಪ್ಪತ್ತನಾಲ್ಕು ಗಂಟೆ ಬಂದು ಶಾಲೆಗೆ ಕಾವಲಿರಲು ಸಾಧ್ಯವಿಲ್ಲ. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಅಳಲೂ ಕೂಡ ಅದೇ ಆಗಿದೆ.

ಪ್ರತಿಸಾರಿಯ ಶೈಕ್ಷಣಿಕ ವರ್ಷದಲ್ಲೂ ಅವವೇ ಸಮಸ್ಯೆಗಳು ಮತ್ತೆ ಮತ್ತೆ ತಲೆದೋರುವ ಕಾರಣಗಳನ್ನು ಹುಡುಕಿ ಸಮಗ್ರ ಪರಿಹಾರೋಪಾಯ ರೂಪಿಸಿ ನಿರ್ವಹಿಸುವಲ್ಲಿ ಶಿಕ್ಷಣ ಇಲಾಖೆ, ಇಲಾಖೆ ಅಧಿಕಾರಿಗಳು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿ, ಜನ ಪ್ರತಿನಿಧಿಗಳು ಸೋಲುತ್ತಿದ್ದಾರೆ.

ಶಾಲೆ ಪಕ್ಕದ ಮರಗಳ ಕೊಂಬೆ ಕೊಠಡಿಗಳ ಚಾವಣಿಯನ್ನು ಆವರಿಸಿಕೊಂಡಿದ್ದು, ಅವು ಬೀಳುವ ಹಂತದಲ್ಲಿವೆ. ಶೀಟ್‌ಗಳ ಚಾವಣಿ ಇರುವ ಕೊಠಡಿಗಳಲ್ಲಿ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಹೆಂಚಿನ ಚಾವಣಿ ಇರುವ ಹಳೆಯ ಕಾಲದ ಗೋಡೆಗಳು ಮೂಲೆ ಮೂಲೆಯಲ್ಲೂ ಬಿರುಕು ಬಿಟ್ಟಿವೆ. ಹಲವೆಡೆ ಅಡುಗೆ ಕೋಣೆ ತಾರಸಿಯ ಕಾಂಕ್ರೀಟ್‌ ಕಿತ್ತು ಉದುರುತ್ತಿದೆ. 

ಹೊರಬದಿಯಿಂದ ಕುಸಿಯುತ್ತಿರುವ ಶಾಲೆಯ ಗೋಡೆ
ಹೊರಬದಿಯಿಂದ ಕುಸಿಯುತ್ತಿರುವ ಶಾಲೆಯ ಗೋಡೆ
ಹೊಗೆಯಾಡುತ್ತಿರುವ ಕಸದ ರಾಶಿ
ಹೊಗೆಯಾಡುತ್ತಿರುವ ಕಸದ ರಾಶಿ
ಶೌಚಾಲಯದ ದುಃಸ್ಥಿತಿ
ಶೌಚಾಲಯದ ದುಃಸ್ಥಿತಿ

ಗಣಿ ಬಾಧಿತ ಪ್ರದೇಶ ಅಭಿವೃದ್ಧಿ ಯೋಜನೆಯಂತೆ ಶಾಲೆ ಕೊಠಡಿಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಕಾರ್ಯ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಕೆಲವೇ ದಿನಗಳಲ್ಲಿ ಎಲ್ಲವೂ ಸುವ್ಯವಸ್ಥಿತಗೊಳ್ಳಲಿದೆ.

– ಸಿ.ಎಸ್. ಕಾಂತರಾಜು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕನಾಯಕನಹಳ್ಳಿ

ತ್ಯಾಜ್ಯ ತ್ವರಿತ ತೆರವಿಗೆ ಕ್ರಮ

ಶಾಲಾ‌ ಆವರಣದಲ್ಲಿ ಬಿದ್ದಿರುವ ಕಸ ಮತ್ತು ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಬೇಕು. ಸ್ಥಳೀಯರು ಮತ್ತೆ ಶಾಲಾ ಆವರಣದೊಳಕ್ಕೆ ತ್ಯಾಜ್ಯ ಎಸೆಯದಂತೆ ಅರಿವು ಮೂಡಿಸಲು ಯತ್ನಿಸಲಾಗುತ್ತಿದೆ. ಸೊಳ್ಳೆ ಮತ್ತಿತರ ಕೀಟಾಣು ನಿಯಂತ್ರಣಕ್ಕೆ ಯತ್ನಿಸಲಾಗುತ್ತಿದೆ. ‘ನಮ್ಮೂರ ಶಾಲೆ-ಸ್ವಸ್ಥ ಸ್ವಚ್ಛ ಸುಂದರ ಶಾಲೆ’ ಎಂಬ ಸಾರ್ವಜನಿಕ ಹೊಣೆಗಾರಿಕೆ ಕಾರ್ಯಕ್ರಮ ರೂಪಿಸುತ್ತೇವೆ. ಕೆ.ಎಚ್.ಗಂಗಾಧರಯ್ಯ ಪಟ್ಟಣ ಪಂಚಾಯಿತಿ ಸದಸ್ಯ ಹುಳಿಯಾರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT