ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನೇನಹಳ್ಳಿ ನೀರು ಕುಡಿಯಲು ಯೋಗ್ಯವಲ್ಲ!

ನೀರಿನ 6 ಮಾದರಿಗಳ ಪರೀಕ್ಷೆ, 200 ದಾಟಿದ ಅಸ್ವಸ್ಥರ ಸಂಖ್ಯೆ
Published 14 ಜೂನ್ 2024, 6:47 IST
Last Updated 14 ಜೂನ್ 2024, 6:47 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮಕ್ಕೆ ನೀರು ಪೂರೈಕೆಯಾಗುವ 6 ನೀರಿನ ಮಾದರಿಗಳನ್ನು ಜಿಲ್ಲಾ ಆಸ್ಪತ್ರೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುವುದು ಖಚಿತಪಟ್ಟಿದೆ.

ಗ್ರಾಮದಲ್ಲಿರುವ 2 ಕೊಳವೆ ಬಾವಿಗಳಿಂದ ಓವರ್‌ ಹೆಡ್‌ ಟ್ಯಾಂಕ್‌ಗೆ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ, ಅಲ್ಲಿಂದ ನಲ್ಲಿಗಳ ಮುಖಾಂತರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥರಾದ ನಂತರ ಕೊಳವೆ ಬಾವಿಯ 3, ಶುದ್ಧ ಕುಡಿಯುವ ನೀರಿನ ಘಟಕದಿಂದ 1, ನಲ್ಲಿಗಳಿಂದ 2 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಎಲ್ಲ ಮಾದರಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುವುದು ದೃಢಪಟ್ಟಿದೆ.

‘100 ಎಂ.ಎಲ್‌ ನೀರಿನಲ್ಲಿ 10ಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇದ್ದರೆ ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ನಿರ್ಧರಿಸಲಾಗುತ್ತದೆ. ಈಗ ಪರೀಕ್ಷೆಗೆ ಒಳಪಡಿಸಿದ ಎಲ್ಲ ಮಾದರಿಗಳಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಸಂಖ್ಯೆಯಲ್ಲಿವೆ’ ಎಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ರಾಮೇಗೌಡ ಮಾಹಿತಿ ನೀಡಿದರು.

ಕಳೆದ ಎರಡು ದಿನಗಳಿಂದ ಚಿನ್ನೇನಹಳ್ಳಿ ಕೊಳವೆ ಬಾಯಿಯಿಂದ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಆದರೂ ಗ್ರಾಮದ ಜನರಲ್ಲಿ ವಾಂತಿ, ಭೇದಿ ನಿಲ್ಲುತ್ತಿಲ್ಲ. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ದಿನದ 24 ಗಂಟೆಯೂ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ವೈದ್ಯರು, ಸಿಬ್ಬಂದಿ ನಿಯೋಜಿಸಲಾಗಿದೆ.

‘ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚರಂಡಿ ಮೂಲಕ ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಈಗ ಸಮಸ್ಯೆಯಾಗುತ್ತಿದೆ. ಚರಂಡಿಯಲ್ಲಿರುವ ಪೈಪ್‌ ಒಡೆದು ಕಲುಷಿತ ನೀರು ಸರಬರಾಜು ಆಗಿದೆ. ಪೈಪ್‌ ಲೈನ್‌ ಕಾಮಗಾರಿ ಮಾಡುವ ಸಮಯದಲ್ಲೇ ವಿರೋಧ ವ್ಯಕ್ತಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನರ ಮಾತು ಕೇಳಿಸಿಕೊಳ್ಳಲಿಲ್ಲ. ಈ ಹಿಂದೆಯೇ ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಜನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲನೆ ಮಾಡುವುದನ್ನು ಮರೆತಿದ್ದಾರೆ. ಕಾಲ ಕಾಲಕ್ಕೆ ಪರೀಕ್ಷೆ ನಡೆಸಿದ್ದರೆ ಈಗ ಜನರು ಸಮಸ್ಯೆ ಅನುಭವಿಸುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು, ವೃದ್ಧರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಇದಕ್ಕೆ ಯಾರು ಹೊಣೆ?’ ಎಂದು ಚಿನ್ನೇನಹಳ್ಳಿಯ ಪ್ರಸನ್ನ ಪ್ರಶ್ನಿಸಿದರು.

ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಓವರ್‌ ಹೆಡ್‌ ಟ್ಯಾಂಕ್‌
ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಓವರ್‌ ಹೆಡ್‌ ಟ್ಯಾಂಕ್‌
ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಚರಂಡಿಯ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಿರುವುದು
ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಚರಂಡಿಯ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಿರುವುದು

ಪರಿಹಾರ: ಸಿ.ಎಂ ಜತೆ ಚರ್ಚೆ’ ‘

ಕಲುಷಿತ ನೀರು ಸೇವಿಸಿ ಮೃತಪಟ್ಟವರಿಗೆ ಪರಿಹಾರ ವಿತರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಗುರುವಾರ ತಿಳಿಸಿದರು. ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಇನ್ನೂ ತುಂಬಾ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರಕರಣ ನಮಗೊಂದು ನೀತಿ ಪಾಠ. ಅಧಿಕಾರಿಗಳು ನೀರು ಸರಬರಾಜು ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಹಲವು ಕಡೆಗಳಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಶುಕ್ರವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

200ಕ್ಕೂ ಹೆಚ್ಚು ಜನ

ಅಸ್ವಸ್ಥ ಕಲುಷಿತ ನೀರು ಸೇವಿಸಿ ಈವರೆಗೆ 200ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಗಿರಿ ತುಮಕೂರಿನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿ ಮತ್ತೆ 10 ಜನ ಅಸ್ವಸ್ಥರಾಗಿದ್ದರು. ಇದರಲ್ಲಿ 7 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 3 ಮಂದಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಮಧುಗಿರಿಯಲ್ಲಿ 17 ಜಿಲ್ಲಾ ಆಸ್ಪತ್ರೆಯಲ್ಲಿ 17 ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸೇರಿದಂತೆ ಒಟ್ಟು 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ‘ಘಟನೆ ನಡೆದ ನಂತರ ಚಿನ್ನೇನಹಳ್ಳಿಯ ಪ್ರತಿ ಮನೆಯಲ್ಲಿ ಸರ್ವೆ ಮಾಡಲಾಗಿದೆ. ಗ್ರಾಮದ ನೀರಿನ ಮಾದರಿಗಳನ್ನು ಈಗಾಗಲೇ ಪರೀಕ್ಷಿಸಿದ್ದು ಒಂದಷ್ಟು ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ನೀರು ಸೇವಿಸುವ ಮುನ್ನ ಕಾಯಿಸಿ ಕುಡಿಯಬೇಕು’ ಎಂದು ಡಿಎಚ್ಒ ಡಾ.ಡಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT