ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕಲುಷಿತ ನೀರು ಸೇವನೆ: ಒಬ್ಬರಲ್ಲಿ ಕಾಲರಾ ಪತ್ತೆ

15 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ: ಮೂವರ ಸ್ಥಿತಿ ಗಂಭೀರ
Published 16 ಜೂನ್ 2024, 23:10 IST
Last Updated 16 ಜೂನ್ 2024, 23:10 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದ ಒಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ.

ಜೂನ್‌ 10ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣಪ್ಪ (32) ಎಂಬುವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೃಷ್ಣಪ್ಪ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಾಬಸ್‌ಪೇಟೆಯ ಸಂಬಂಧಿಕರ ಮನೆಯಲ್ಲಿದ್ದಾರೆ. ಇನ್ನೂ ಚಿಕಿತ್ಸೆ ಅಗತ್ಯವಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದರೂ ಅವರು ಮನೆಗೆ ತೆರಳಿದ್ದಾರೆ.

ಕೃಷ್ಣಪ್ಪ ಅವರ ಮಲದ ಮಾದರಿಯನ್ನು ಎರಡು ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಎರಡೂ ವರದಿಯಲ್ಲಿ ಕೃಷ್ಣಪ್ಪ ಅವರಿಗೆ ಕಾಲರಾ ಸೋಂಕು ದೃಢಪಟ್ಟಿದೆ.  

‘ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಚಿನ್ನೇನಹಳ್ಳಿಯ 15 ಗ್ರಾಮಸ್ಥರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಜಯಲಕ್ಷ್ಮಿ (32), ಕೆಂಪಮ್ಮ (60), ಲಕ್ಷ್ಮಿನಾರಾಯಣ (32) ಎಂಬುವರ ಸ್ಥಿತಿ ಗಂಭೀರವಾಗಿದೆ. ಉಳಿದವರು ಆರೋಗ್ಯವಾಗಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಆರೋಗ್ಯ ಸ್ಥಿತಿ ಗಂಭೀರವಾಗಿರುವ ಗ್ರಾಮಸ್ಥರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಅಸ್ವಸ್ಥರಾದವರಲ್ಲಿ ಹೆಚ್ಚಿನವರು ಬಡವರಾಗಿದ್ದು ಖಾಸಗಿ ಆಸ್ಪತ್ರೆ ಶುಲ್ಕ ಪಾವತಿಸಲು ಪರದಾಡುತ್ತಿದ್ದಾರೆ’ ಎಂದು ಚಿನ್ನೇನಹಳ್ಳಿ ಗ್ರಾಮದ ರಾಮಸ್ವಾಮಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT