ವಿಶಿಷ್ಟ ಆಚರಣೆಯ ಚೌಡೇಶ್ವರಿ ಜಾತ್ರಾ ಮಹೋತ್ಸವ

ಸೋಮವಾರ, ಮೇ 27, 2019
24 °C

ವಿಶಿಷ್ಟ ಆಚರಣೆಯ ಚೌಡೇಶ್ವರಿ ಜಾತ್ರಾ ಮಹೋತ್ಸವ

Published:
Updated:
Prajavani

ಹುಲಿಯೂರುದುರ್ಗ: 'ಉಜ್ಜನಿ' ಎನ್ನುವುದು ಅನ್ವರ್ಥವಾಗಿ ಜಿಲ್ಲೆಯಲ್ಲಿ ಚೌಡೇಶ್ವರಿಯ ಊರು ಎನ್ನುವಷ್ಟರ ಮಟ್ಟಿಗೆ ಹೆಸರಾಗಿದೆ. ಹದಿನೆಂಟು ದೇವಾಲಯಗಳಿರುವ ದೇವತೆಗಳ ಗ್ರಾಮ ಎಂದರೂ ಅತಿಶಯೋಕ್ತಿಯಲ್ಲ.

ಪ್ರಧಾನ ಗ್ರಾಮ ದೇವತೆ ಚೌಡೇಶ್ವರಿ, ಚಿಕ್ಕ ಚೌಡೇಶ್ವರಿ, ಹೊನ್ನಾದೇವಿ, ಲಕ್ಷ್ಮೀ ದೇವಿ, ಮಾರಮ್ಮ, ಹೆಬ್ಬಾರಮ್ಮ, ಹಟ್ಟಿ ಮಾರಮ್ಮ, ಹುರುಳಿ ಮಾರಮ್ಮ, ಮಂಚಮ್ಮ, ಉತ್ತೂರಮ್ಮ, ಕತ್ತಲೆ ಬೆಳಕಮ್ಮ, ಆಂಜನೇಯ, ಗಣಪತಿ, ವರದರಾಜ ಸ್ವಾಮಿ, ಮಲ್ಲೇಶ್ವರ, ಗೌರೀಶಂಕರ, ರಾಮಲಿಂಗೇಶ್ವರ, ಬಸವೇಶ್ವರ ಇವೇ ಆ ಹದಿನೆಂಟು ದೇವಾಲುಗಳಾಗಿವೆ.

ಪ್ರತೀ ವರ್ಷ ಯುಗಾದಿಯ ನಂತರದ ಮೊದಲಿನ ಮಂಗಳವಾರ ಇಲ್ಲವೇ ಶುಕ್ರವಾರ ದಿಂದ ಆರಂಭವಾಗುವ ಹದಿನೆಂಟು ದಿನಗಳ ಹಬ್ಬಕ್ಕೆ ನಾಂದಿಯಾಗುತ್ತದೆ. ಈ ದಿನಗಳಲ್ಲಿ ಗ್ರಾಮದ ಜನರು ಅಂಟು ಮುಟ್ಟು ಮಾಡಿಕೊಳ್ಳುವಂತಿಲ್ಲ, ಶಾಖಾಹಾರ ಮುಟ್ಟುವುದಿಲ್ಲ. ಒಗ್ಗರಣೆ ಹಾಕುವುದಿಲ್ಲ.

ಕಂಬ ಪ್ರತಿಷ್ಠಾಪನೆ ಯೊಂದಿಗೆ ಏಪ್ರಿಲ್ 9 ರಿಂದ ಆರಂಭಗೊಂಡಿರುವ ಅದ್ದೂರಿ ಜಾತ್ರಾ ಮಹೋತ್ಸವ ಏಪ್ರಿಲ್ 26 ರವರೆಗೆ ಮುಂದುವರಿಯುತ್ತದೆ. ವಿವಿಧ ಜಾತಿ ಸಮುದಾಯಗಳ ಜನರು ಹಬ್ಬದ ಕಾರ್ಯ ಹಂಚಾಣಿಕೆಗೆ ಒಪ್ಪಿಸಿಕೊಳ್ಳುತ್ತಾರೆ.

ಕಂಬದ ಪ್ರತಿಷ್ಠಾಪನೆ ಕುರುಬರದಾದರೆ ದಲಿತರು ಬ್ರಾಹ್ಮಣ್ಯ ದೀಕ್ಷೆ ಪಡೆದುಕೊಳ್ಳುತ್ತಾರೆ. ಮುಸಲ್ಮಾನ ವೇಷಧಾರಿಗಳಿಂದ ಬಾಬಯ್ಯನ ಜಲ್ದಿ, ಪೂಜೆ, ಕರಗ ಹಾಗೂ ರೈತ ಗುಡ್ಡರು ಜಾತ್ರೆ ಯ ಉಸ್ತುವಾರಿಯನ್ನು ನಿರ್ವಹಿಸುತ್ತಾರೆ. ಕನ್ನಡಿ ಹಾಗೂ ಕರಗದ ಗುಡ್ಡರು ಕೊಂಡ ನಿರ್ಮಿಸುತ್ತಾರೆ. ಇವೆಲ್ಲವೂ ಸಂಪ್ರದಾಯ ಬದ್ದ ಕಾರ್ಯಸೂಚಿಗಳಾಗಿರುತ್ತವೆ.

ಕಡಗ- ಕಾಲಂದುಗೆ, ಓಲೆ, ಡಾಬು, ಮೂಗುತಿ ಸ್ವರ್ಣಖಚಿತ ಕಿರೀಟಧಾರಿಣಿಯಾಗಿ ಅಲಂಕಾರ ಗೊಳ್ಳುವ ಚೌಡೇಶ್ವರಿ ಯ ಮೆರವಣಿಗೆ ವೈಭವೋಪೇತ ವಾಗಿ ಜರುಗುತ್ತದೆ.

ಹಣತೆ ಬೆಳಗಿದ, ಹೂ ಹೊಂಬಾಳೆಗಳಿಂದ ಅಲಂಕೃತ ವಾದ ತಂಬಿಟ್ಟಿನಾರತಿಯ ಮೊದಲ ಸೇವೆಯ ಹಕ್ಕು ನಿಡಸಾಲೆಯ ಹೆಂಗಳೆಯರದು.

ಅಗ್ನಿ ಕೊಂಡೋತ್ಸವ: ಕೊಪ್ಪಲು ಗ್ರಾಮದ ವರು ಕೊಂಡದ ಗುಂಡಿ ತೆಗೆಯುತ್ತಾರೆ, ಕನ್ನಡಿ ಹಾಗೂ ಕರಗದ ಪಾಲಿನವರು ಬೃಹತ್ ಅಗ್ನಿಕೊಂಡ ನಿರ್ಮಿಸುತ್ತಾರೆ. ಹತ್ತು ಹಲವು ಬಗೆಯ ವಾಹನಗಳಲ್ಲಿ ಹೊತ್ತು ತರುವ ಕಟ್ಟಿಗೆಗಳನ್ನು ಜೋಡಿಸುವ ಕೌಶಲ್ಯ ವಿಶಿಷ್ಟವಾದುದು. ಹಿತ್ತಲಪುರ ಗ್ರಾಮದ ವರು ಕೊಂಡದ ಮೊದಲ ಸೌದೆ ಅರ್ಪಿಸುತ್ತಾರೆ.

ಅಗ್ನಿ ಕೊಂಡೋತ್ಸವ ದ ಮುನ್ನ ದೇವಾಲಯದ ಈಶಾನ್ಯಕ್ಕೆ ಇರುವ ಹೊನ್ನರಳಿ ಮರದ ಪ್ರದಕ್ಷಿಣೆ ಸಂದರ್ಭದಲ್ಲಿ ಜನರು ಭಕ್ತಿ ಭಾವ ತುಂದಿಲರಾಗುತ್ತಾರೆ. ಮುಂಗೊಂಡ ಹಾಯುವ ಅಗ್ರ ಮಾನ್ಯತೆ ನಿಡಸಾಲೆ ಚೌಡೇಶ್ವರಿ ಯದಾಗಿರುತ್ತದೆ. ಅನುಸರಿಸಿ ಕೊಂಡದ ಅಂಗಣ ಕೆಂಡದ ಮೇಲೆ ಗ್ರಾಮ ದೇವತೆ ಚೌಡೇಶ್ವರಿ ಅಡಿಯಿಡತೊಡಗಿದಂತೆ ಜನರ ಜೈಕಾರ, ಉದ್ಘೋಷಗಳು ಮುಗಿಲು ಮುಟ್ಟುತ್ತವೆ.

ರಥೋತ್ಸವ: ಏಪ್ರಿಲ್ 24 ರಂದು ನಡೆಯುವ ರಥೋತ್ಸವವು ವೀರಗಾಸೆ, ಗೊಂಬೆ ಕುಣಿತ, ನಾದಸ್ವರ, ತಮಟೆ ವಾದನಗಳಿಂದ ವಿಜೃಂಭಿಸುತ್ತದೆ. ರಥದ ಗಾಲಿಗಳು ಉರುಳಿದಂತೆ ದವನ ಚುಚ್ಚಿದ ಬಾಳೆಯ ಹಣ್ಣುಗಳನ್ನು ತೂರಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ.

ಕಂಬ ವಿಸರ್ಜನೆ, ಜನಿವಾರ ತ್ಯಾಗ: ಬೇವು ಬೆಲ್ಲದ ನೈವೇದ್ಯ ಅರ್ಪಿಸಿ ಹಬ್ಬದ ಪೂರ್ವ ಪ್ರತಿಷ್ಠಾಪಿತ ಕಂಬವನ್ನು ಕಿತ್ತು ಮಜ್ಜನ ಬಾವಿಯಲ್ಲಿ ವಿಸರ್ಜಿಸಲಾಗುತ್ತದೆ. ಶುಕ್ರವಾರ ಹೆಬ್ಬಾರೆ ಗುಡ್ಡರು ಜನಿವಾರ ತೆಗೆದು ಕೆರೆಗೆ ಅರ್ಪಿಸುತ್ತಾರೆ. ಕೊಂಡೋತ್ಸವ ನಂತರದ ಒಂಬತ್ತನೆಯ ದಿನ ಹೆಬ್ಬಾರೆ ಗುಡ್ಡರ ಸಮ್ಮುಖದಲ್ಲಿ ಅಗ್ನಿಕೊಂಡವನ್ನು ಮುಚ್ಚಲಾಗುತ್ತದೆ.

*

ಹೇಳಿಕೆ: ದಲಿತರು ಬ್ರಾಹ್ಮಣರಾಗುವ ಮುಕ್ತ ಮಾನ್ಯತೆ ನಮ್ಮೂರಿನಲ್ಲಿ ಮಾತ್ರವೇ ಕಾಣಬಹುದಾದ ಒಂದು ವಿಶಿಷ್ಟ ಆಚರಣೆ. ಮೊದಲಿಗೆ ಗ್ರಾಮ ವಾಸಿಗಳಾಗಿದ್ದ ಮುಸಲ್ಮಾನರು ಚೌಡೇಶ್ವರಿ ಗೆ ನಡೆದುಕೊಳ್ಳುತ್ತಿದ್ದ ಭಕ್ತಿ ಭಾವದ ಪ್ರತೀಕವಾಗಿ ಬಾಬಯ್ಯನ ಜಲ್ದಿ ಆಚರಣೆ ಕೂಡಾ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಇದು ನಮ್ಮಲ್ಲಿನ ಸಮಾನತೆಯ ಪ್ರತಿಬಿಂಬ.

- ವಾಡೆಲಿಂಗಯ್ಯ, ಅಧ್ಯಕ್ಷ, ಚೌಡೇಶ್ವರಿ ಜಾತ್ರಾ ಉಸ್ತುವಾರಿ ಸಮಿತಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !