ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು| ಕ್ರಿಸ್ಮಸ್ ಸ್ವಾಗತಿಸಲು ಸಜ್ಜಾದ ಕ್ರೈಸ್ತರು

ಚರ್ಚ್‌, ಮನೆಗಳಲ್ಲಿ ತಯಾರಿ ಜೋರು
Last Updated 24 ಡಿಸೆಂಬರ್ 2019, 12:15 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಕ್ರಿಸ್ಮಸ್ ಸಡಗರ ಮನೆ ಮಾಡಿದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನವನ್ನು ಆಚರಿಸಲು ಕ್ರೈಸ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಹಬ್ಬದ ಪ್ರಯುಕ್ತ ನಗರದ ಚರ್ಚ್‌ ವೃತ್ತದ ಬಳಿಯ ವೆಸ್ಲಿ ಚರ್ಚ್‌, ಹೊರಪೇಟೆಯ ಆರ್‌.ಸಿ ಲೂರ್ದು ಮಾತೆ ದೇವಾಲಯ, ಶಿರಾ ಗೇಟ್‌ ಸಮೀಪದ ಟಾಮ್ಲಿನ್ಸನ್, ಗಾಯತ್ರಿ ಚಿತ್ರಮಂದಿರ ಸಮೀಪದ ಸಿಎಸ್‌ಐ ಚರ್ಚ್‌, ರೈಲ್ವೆ ನಿಲ್ದಾಣ ಸಮೀಪದ ಶಾಂತಿನಗರ ಚರ್ಚ್‌, ಕುರಿಪಾಳ್ಯ ಸ್ಟೀನ್ ಚರ್ಚ್‌, ದೇವನೂರಿನ ಸಾಡೇ ಸ್ಮಾರಕ ಚರ್ಚ್, ಬೆತ್ತಲೂರಿನ ಬೇತಲ್ ಚರ್ಚ್, ಸಾಡೇಪುರದ ಚರ್ಚ್‌ ಸೇರಿದಂತೆ ನಗರದ ಹಲವು ಚರ್ಚ್‌ಗಳು ಈಗಾಗಲೇ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಹಲವೆಡೆ ಏಸುಕ್ರಿಸ್ತನ ಜನ್ಮವೃತ್ತಾಂತವನ್ನು ಗೋದಲಿಯಲ್ಲಿ ಪುಟ್ಟ ಗೊಂಬೆಗಳ ಪ್ರದರ್ಶನದ ಮೂಲಕ ತೋರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹಬ್ಬದ ಆಚರಣೆ ಬಿಂಬಿಸುವ ಕೃತಕ ಹಾಗೂ ಪ್ರಕೃತಿದತ್ತವಾದ ಕ್ರಿಸ್ಮಸ್ ಟ್ರೀಗೆ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೆ ಕ್ರೈಸ್ತರು ನಾನಾ ಬಗೆಯ ತಿನಿಸು ಸಿದ್ಧಗೊಳಿಸುವುದರಲ್ಲಿ ಸಕ್ರಿಯರಾಗಿದ್ದಾರೆ.

ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಸಮಾರಂಭ, ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಜೆ ಮತ್ತು ರಾತ್ರಿ ಚಳಿ ಲೆಕ್ಕಿಸದೆ ಕ್ರೈಸ್ತರು ಪ್ರೀತಿ ಪಾತ್ರರ ಮನೆಗಳಿಗೆ ತೆರಳಿ ಹಬ್ಬಕ್ಕೆ ಆಹ್ವಾನಿಸುತ್ತಿದ್ದಾರೆ. ಅಲ್ಲಲ್ಲಿ ಮಕ್ಕಳ ಪ್ರೀತಿಗೆ ಪಾತ್ರ ಸಾಂತಾಕ್ಲಾಸ್‌ ವೇಷಧಾರಿಗಳು ಕ್ರಿಸ್ತನ ಸಂದೇಶಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ.

ಈ ಬಾರಿ ಕ್ರಿಸ್ಮಸ್ ಪ್ರಯುಕ್ತ ಮಾರುಕಟ್ಟೆಗೆ ಬಗೆಬಗೆಯ ಅಲಂಕಾರಿಕ ಸಾಮಗ್ರಿಗಳು ಲಗ್ಗೆ ಇಟ್ಟಿವೆ. ನಗರದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ನಕ್ಷತ್ರ ಆಕೃತಿಗಳು, ಜಗಮಗಿಸುವ ದೀಪಗಳು, ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ಬಗೆಬಗೆಯ ಆಕಾರದ ಕೇಕ್‌ಗಳು ಹಾಗೂ ವಿಶಿಷ್ಟ ತಿಂಡಿಗಳು ಯೇಸುವಿನ ಜನ್ಮದಿನದ ಆಗಮನವನ್ನು ಸಾರುತ್ತಿವೆ.

ಖರೀದಿ ಭರಾಟೆ ಜೋರು: ಮಾರುಕಟ್ಟೆ ಯಲ್ಲಿ ಬಗೆಬಗೆಯ ನಕ್ಷತ್ರಗಳು, ಗೋದಲಿ ಗಳು, ಬಾಲ ಏಸು, ಮೇರಿ, ಜೋಸೆಫ್, ದೇವದೂತರು, ನಾಗರಿಕರು, ಕುರಿಗಾಹಿಗಳು, ಕುರಿ, ಒಂಟೆ, ಪುಟ್ಟ ಪುಟ್ಟ ಗೊಂಬೆಗಳ ಮಾರಾಟ ಮತ್ತು ಖರೀದಿಯ ಭರಾಟೆ ಜೋರಾಗಿದೆ. ಮಕ್ಕಳು, ಹಿರಿಯರು ಮಾರುಕಟ್ಟೆಗೆ ಲಗ್ಗೆ ಇಟ್ಟು ಹೊಸ ಬಟ್ಟೆ, ವಸ್ತುಗಳನ್ನು ಉತ್ಸಾಹದಿಂದ ಖರೀದಿಸು ತ್ತಿದ್ದಾರೆ.

ಆಕರ್ಷಿಸುತ್ತಿರುವ ಮಾಲ್‌ಗಳು: ಹಲವು ಶಾಪಿಂಗ್‌ ಮಾಲ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ಕ್ರಿಸ್ಮಸ್, ಹೊಸ ವರ್ಷದ ವಾತಾವರಣ ಕಟ್ಟಿಕೊಡ ಲಾಗಿದೆ. ಕೆಲವೆಡೆ ಮಾಲ್‌ಗಳಿಗೆ ಬರುವ ಮಕ್ಕಳಿಗೆ ಸಾಂತಾಕ್ಲಾಸ್‌ ವೇಷಧಾರಿ ಗಳು ಚಾಕೊಲೇಟ್ ನೀಡಿ ಸ್ವಾಗತಿಸು ತ್ತಿದ್ದಾರೆ. ಇದರೊಂದಿಗೆ ದೀಪಾಲಂಕಾರ ಗೊಂಡಿರುವ ಕ್ರಿಸ್ಮಸ್ ಟ್ರೀಗಳು, ತರೇಹವಾರಿ ಕೇಕುಗಳು, ಕ್ರಿಸ್ಮಸ್ ಉಡುಪುಗಳು, ಬಗೆ ಬಗೆಯ ಆಟಿಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT