ಗುರುವಾರ , ಅಕ್ಟೋಬರ್ 24, 2019
21 °C

ಪದವೀಧರ ಮತಕ್ಷೇತ್ರ: ನೋಂದಣಿಗೆ ಕಾಂಗ್ರೆಸ್‌ ಕರೆ

Published:
Updated:
Prajavani

ತುಮಕೂರು: ಪದವೀಧರರು ಸಮರ್ಥ ಜನಪ್ರತಿನಿಧಿಗಳನ್ನು ಚುನಾಯಿಸಲು ಪದವೀಧರ ಮತಕ್ಷೇತ್ರಗಳಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ವಕ್ತಾರ ಮುರುಳೀಧರ ಹಾಲಪ್ಪ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಸರು ಸೇರ್ಪಡೆಯ ಅರ್ಜಿಗಳನ್ನು ಪದವೀಧರರಿಗೆ ಸಾಂಕೇತಿಕವಾಗಿ ವಿತರಿಸಿ, ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

2016ರ ಅಕ್ಟೋಬರ್‌ 31ರ ಮೊದಲು ಪದವಿ ಪಡೆದವರು ಹೆಸರು ಸೇರ್ಪಡೆಗೆ ಅರ್ಹರು. ಅರ್ಜಿ ಸಲ್ಲಿಸಲು ನವೆಂಬರ್ 6ರ ವರೆಗೆ ಕಾಲಾವಕಾಶ ಇದೆ. ಭರ್ತಿ ಮಾಡಿದ ಅರ್ಜಿಗಳನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರ ಅಥವಾ ಅಂಕಪಟ್ಟಿಗಳ ಪ್ರತಿಗಳನ್ನು ಗೆಜೆಟೆಡ್‌ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಜತೆಗೆ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿಯ ಪ್ರತಿ ಇರಬೇಕು ಎಂದು ಅವರು ಮಾಹಿತಿ ನೀಡಿದರು. 

ವಿಧಾನ ಮಂಡಲದ ಕಲಾಪಗಳನ್ನು ಚಿತ್ರೀಕರಿಸಲು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಸಹ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದೆ. ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲರು ಕಲಾಪದ ವೇಳೆ ನೋಡುವ ವಿಡಿಯೋಗಳು, ಗೂಳಿಹಟ್ಟಿ ಶೇಖರ್‌ ಅಂತವರ ಹುಚ್ಚಾಟಗಳು ಜನಕ್ಕೆ ಗೊತ್ತಾಗಬಾರದು. ಅಯೋಗ್ಯರ ವರ್ತನೆಗಳು ಜನರಿಗೆ ಕಾಣಬಾರದೆಂದು ಇಂತಹ ಕ್ರಮ ವಹಿಸಲಾಗಿದೆ ಎಂದು ಕುಟುಕಿದರು. 

ಉಪಚುನಾವಣೆಗೆ ತಯಾರಿ ನಡೆಸಿದ್ದ ಬಿಜೆಪಿ ಮುಖಂಡರಿಗೆ ನಿಗಮ, ಮಂಡಳಿಗಳ ಸ್ಥಾನ ನೀಡಿ ಸಮಾಧಾನ ಪಡಿಸುತ್ತಿದ್ದಾರೆ. ಆ ಪಕ್ಷದಲ್ಲಿನ ಮನಸ್ತಾಪಗಳೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಆಗಲಿವೆ ಎಂದರು.

ಉಪಚುನಾವಣೆ ಹತ್ತಿರ ಬಂದಿದೆ. ಈ ಸಂದರ್ಭದಲ್ಲಿಯೇ ಐ.ಟಿ.ದಾಳಿಗಳು ಶುರುವಾಗಿವೆ. ಇಂತಹ ದಾಳಿಗಳು ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿಯೂ ನಡೆದವು. ದಾಳಿಗೆ ಒಳಗಾದವರು ಬಿಜೆಪಿಗೆ ಪಕ್ಷಾಂತರ ಆದ ಬಳಿಕ, ಆ ದಾಳಿಗಳು ತಾರ್ತಿಕ ಅಂತ್ಯಕ್ಕೆ ಹೋಗಲಿಲ್ಲ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿವೆ ಎಂದು ದೂರಿದರು.

ಐ.ಟಿ.ದಾಳಿಗಳಿಂದ ನಾವು ನೈತಿಕವಾಗಿ ಮತ್ತಷ್ಟು ಬಲಿಷ್ಠರಾಗುತ್ತೇವೆ ಎಂದು ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)