ಸೋಮವಾರ, ಅಕ್ಟೋಬರ್ 18, 2021
23 °C
ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮುಖಂಡರ ಸಲಹೆ

ಬೂತ್ ಮಟ್ಟದಿಂದ ಕಾಂಗ್ರೆಸ್ ಬಲವರ್ಧನೆ: ಪಿ.ಆರ್. ರಮೇಶ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕೆನ್ನುವುದು ಜನರ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಸಲಹೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಿದ್ಧತೆ ಹಾಗೂ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಸಂಬಂಧ ಪಕ್ಷದ ಮುಖಂಡರು ಹಾಗೂ ಬೂತ್ ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.

ಬೂತ್ ಮಟ್ಟದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಭಾವನಾತ್ಮಕವಾಗಿ ಜನರನ್ನು ಬಿಜೆಪಿ ಸೆಳೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಬಿಜೆಪಿ ಸರ್ಕಾರ ಯಾವುದೇ ಕಾರ್ಯಕ್ರಮ ರೂಪಿಸುತ್ತಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ 5 ವರ್ಷ ಉತ್ತಮ ಆಡಳಿತ ನೀಡಿದ್ದು, ಜನರು ಸಹ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಬಯಸುತ್ತಿದ್ದಾರೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರ ವಾತಾವರಣವಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್, ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಸಂಘಟಿತವಾಗಿ ಹೋರಾಡಬೇಕಿದೆ. ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಪಕ್ಷ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದು
ಹೇಳಿದರು.

75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಮಹಾತ್ಮಗಾಂಧಿ ಜನ್ಮದಿನವನ್ನು ವರ್ಷಪೂರ್ತಿ ಸ್ಮರಿಸುವ ನಿಟ್ಟಿನಲ್ಲಿ ಪಕ್ಷ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಪ್ರತಿಬೂತ್ ಮಟ್ಟದಲ್ಲಿಯೂ ಆಯೋಜಿಸಬೇಕು. ಬೂತ್ ಮಟ್ಟದಲ್ಲಿ ಯುವಕರನ್ನು ಗುರುತಿಸಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮಾಹಿತಿ ಒದಗಿಸಬೇಕು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್. ರಾಮಕೃಷ್ಣ, ‘ಯಾರಿಗೂ ಅಧಿಕಾರ ಶಾಶ್ವತವಲ್ಲ ಎನ್ನುವುದನ್ನು ಅರಿತು ಪಕ್ಷದ ಮುಖಂಡರು ಕಾರ್ಯ ನಿರ್ವಹಿಸಬೇಕು. ಪಕ್ಷ ಹೇಳಿದ ಕೆಲಸವನ್ನು ಮಾಡುವ ಮೂಲಕ ಅಧಿಕಾರಕ್ಕೆ ತರಬೇಕು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬೇರೆಯವರಿಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಕೆಂಚಮಾರಯ್ಯ, ಹೊನ್ನಗಿರಿಗೌಡ, ನರಸೀಯಪ್ಪ, ಮಂಜುನಾಥ್, ಎಚ್.ಸಿ. ಹನುಮಂತಯ್ಯ, ಮುರುಳೀಧರ ಹಾಲಪ್ಪ, ವಿಜಯಕುಮಾರ್, ಸುಜಾತಾ, ಪುಟ್ಟರಾಜು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.