ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ರಾಜಕಾರಣಕ್ಕೆ ಕಾಂಗ್ರೆಸ್ ಕಿಡಿ

ಮತಾಂತರ ನಿಷೇಧ ಮಸೂದೆ ವಿರೋಧಿಸಿ ಪ್ರತಿಭಟನೆ
Last Updated 4 ಜನವರಿ 2022, 6:12 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಭಿವೃದ್ಧಿ ಕಡೆಗಣಿಸಿ ಜಾತಿ, ಧರ್ಮದ ಹೆಸರಿನಲ್ಲಿ ಅಶಾಂತಿ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯ ಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಂವಿಧಾನ ವಿರೋಧಿಯಾಗಿ ರೂಪಿಸಿರುವ ಮತಾಂತರ ನಿಷೇಧ ಮಸೂದೆಯನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರನ್ನು ದೂಷಣೆ ಮಾಡುವುದು, ನಮ್ಮನ್ನೇ ಮುಂದಿಟ್ಟು ಕೊಂಡು ರಾಜಕಾರಣ ಮಾಡುವುದು, ‘ಕಡಿತಿವಿ– ಬಡಿತೀವಿ’ ಎಂಬ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆ ನೀಡಲಾಗಿದೆ. ಅಲ್ಪಸಂಖ್ಯಾತರನ್ನು ಕಡಿಯಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ಮುಖಂಡರಾದ ನರಸಿಂಹನ್, ಅಶ್ವಿನಿ ಉಪಾಧ್ಯಾಯ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಪ್ರಧಾನಿ, ಗೃಹ ಸಚಿವರು ಖಂಡಿಸದಿರುವುದು, ಅಂತಹವರ ಮೇಲೆ ಕ್ರಮಕ್ಕೆ ಮುಂದಾಗದಿರುವುದನ್ನು ಖಂಡಿಸಿದರು. ಈ ರೀತಿ ವರ್ತಿಸದಂತೆ ತಮ್ಮ ಪಕ್ಷದ ಮುಖಂಡರನ್ನು ನಿಯಂತ್ರಿಸುತ್ತಿಲ್ಲ. ಸಂಸದ ತೇಜಸ್ವಿ ಸೂರ್ಯ ಪ್ರತಿ ಬಾರಿಯೂ ಕೋಮುಭಾವನೆ ಪ್ರಚೋದಿಸುವ ಹೇಳಿಕೆ ನೀಡಿ, ವಾಪಸ್ ಪಡೆಯುತ್ತಾರೆ. ಮತ್ತೆ ಅದೇ ರೀತಿ ನಡೆದುಕೊಳ್ಳುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಕ್ರೈಸ್ತ ಸಮುದಾಯದವರು ಸೌಹಾರ್ದಯುತ, ಶಾಂತಿಯಿಂದ ಜೀವನ ನಡೆಸುತ್ತಿದ್ದರೂ ಚರ್ಚ್, ಪಾದ್ರಿಗಳು, ಕ್ರೈಸ್ತರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದ ನಿರ್ಮಲ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆ ಸಮಯದಲ್ಲಿ ಶಾಲೆಗೆ ನುಗ್ಗಿ ಶಿಕ್ಷಕರ ಮೇಲೆ ಹಲ್ಲೆ ಮಾಡಿದವರು ಮತ್ತು ಗೋಕಾಕ್‌ನಲ್ಲಿ ಚರ್ಚ್‌ಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಸಿದ್ಧಪಡಿಸಿದ್ದ ಊಟವನ್ನು ಚೆಲ್ಲಿ ದೌರ್ಜನ್ಯ ನಡೆಸಿದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚರ್ಚ್‌ಗಳಿಗೆ ಬೀಗ ಹಾಕಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಯೇಸು ಪ್ರತಿಮೆ ಭಗ್ನಗೊಳಿಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಉಪಾಧ್ಯಕ್ಷ ಷಾ ಬಾಬು, ಬ್ಲಾಕ್ ಅಧ್ಯಕ್ಷರಾದ ತಾಮ್ಸನ್, ಶಫೀಕ್,ಮುಖಂಡರಾದ ವಿಜಯ ಕುಮಾರ್, ಸಂಜೀವ್, ರಜನಿ ಪ್ರಕಾಶ್, ಇಲಾನಿ, ಖಲೀಂ, ಶಿವಾಜಿ, ಜಬೀ, ವಾಹಿದ್, ಅಜಾಜ್, ದಾದಾಪೀರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT