ಶುಕ್ರವಾರ, ಆಗಸ್ಟ್ 19, 2022
27 °C
ಮುಖಂಡರಿಗೆ ತಲೆನೋವಾದ ಅಭ್ಯರ್ಥಿ, ಆಕಾಂಕ್ಷಿಗಳ ನಡುವಿನ ಸ್ಪರ್ಧೆ

ಮಧುಗಿರಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಸ್ಪರ್ಧೆ

ಗಂಗಾಧರ್ ವಿ. ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿರುವ ಹೋಬಳಿಯಲ್ಲಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ.

ಹೋಬಳಿಯಲ್ಲಿ ಕೊಡಿಗೇನಹಳ್ಳಿ, ದೊಡ್ಡಮಾಲೂರು, ಚಿಕ್ಕಮಾಲೂರು, ಕಲಿದೇವಪುರ, ಕಡಗತ್ತೂರು, ಮುದ್ದೇನಹಳ್ಳಿ ಮತ್ತು ಸಿಂಗನಹಳ್ಳಿ ಗ್ರಾಮ ಪಂಚಾಯಿತಿಗಳಿವೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೊಡಿಗೇನಹಳ್ಳಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಹೆಚ್ಚು ಮತ ಚಲಾವಣೆಯಾಗಿದ್ದ ಪರಿಣಾಮ ಎಂ.ವಿ. ವೀರಭದ್ರಯ್ಯ ಶಾಸಕರಾದರು. ಇದು ಜೆಡಿಎಸ್‌ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸಿತ್ತು.

ಕೆ.ಎನ್. ರಾಜಣ್ಣ ಶಾಸಕರಾಗಿದ್ದಾಗ ಮಧುಗಿರಿ ತಾಲ್ಲೂಕಿನಲ್ಲೇ ಕೊಡಿಗೇನಹಳ್ಳಿ ಹೋಬಳಿಗೆ ಹೆಚ್ಚು ಅನುದಾನ ಹರಿದು ಬಂದಿತ್ತು. ಆದರೆ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣ ಅವರ ನಿರೀಕ್ಷೆಯಂತೆ ಅವರಿಗೆ ಮತ ಸಿಕ್ಕಿರಲಿಲ್ಲ.

ಶಾಸಕರಾದ ನಂತರ ಎಂ.ವಿ. ವೀರಭದ್ರಯ್ಯ ಜನರ ನಿರೀಕ್ಷೆ ತಕ್ಕಂತೆ ಸ್ಪಂದಿಸಿಲ್ಲ ಎಂಬ ಅಸಮಾಧಾನವಿದೆ. ಕೆಲ ಜೆಡಿಎಸ್ ಮುಖಂಡರು ಕೆ.ಎನ್. ರಾಜಣ್ಣ ಪರ ನಿಂತಿರುವುದು ಈಗ ಕಾಂಗ್ರೆಸ್‌ ಬಲ ಮತ್ತೆ ವೃದ್ಧಿಯಾಗಿದೆ ಎನ್ನಲಾಗುತ್ತಿದೆ. ವೀರಭದ್ರಯ್ಯ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ದೂರುಗಳಿವೆ. ಯಾರಿಗೂ ತಿಳಿಯದಂತೆ ಕೇವಲ ನೆಪ ಮಾತ್ರಕ್ಕೆ ಆಗಾಗ ಕ್ಷೇತ್ರಕ್ಕೆ ಬಂದು ಹೋಗುತ್ತಿರುವುದು ಜೆಡಿಎಸ್‌ ಕಾರ್ಯಕರ್ತರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಹಲವೆಡೆ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಸ್ಪರ್ಧೆ ಏರ್ಪಟ್ಟರೆ, ಕೆಲವೆಡೆ ಕಾಂಗ್ರೆಸ್‌ ಅಭ್ಯರ್ಥಿ, ಆಕಾಂಕ್ಷಿಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಕಾಂಗ್ರೆಸ್ ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.