ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಮನೆಗಳಲ್ಲಿ ನೀರಿಲ್ಲ

ಮುಂದುವರಿದ ಕಾರ್ಮಿಕರ ಮುಷ್ಕರ
Last Updated 7 ಮಾರ್ಚ್ 2023, 14:38 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರು ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದು, ಎರಡನೇ ದಿನವಾದ ಮಂಗಳವಾರವೂ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ.

ನೀರು ಸರಬರಾಜುದಾರರ ಜತೆಗೆ ಕಸ ಸಂಗ್ರಹಿಸುವ ಆಟೊ ಚಾಲಕರು, ಲೋಡರ್ಸ್ ಸಹ ಮುಷ್ಕರದಲ್ಲಿ ಭಾಗವಹಿಸಿದ್ದು, ಸ್ವಚ್ಛತೆಯೂ ಇಲ್ಲವಾಗಿದೆ. ಕಸ ಸಂಗ್ರಹವನ್ನೂ ಸ್ಥಗಿತಗೊಳಿಸಲಾಗಿದೆ.

ಸೋಮವಾರದಿಂದ ಮಹಾನಗರ ಪಾಲಿಕೆ ಎದುರು ಮುಷ್ಕರ ನಡೆಸುತ್ತಿದ್ದು, ಮೊದಲ ದಿನ ಸ್ವಲ್ಪ ಮಟ್ಟಿಗೆ ಮನೆಯಲ್ಲಿ ಇದ್ದ ನೀರನ್ನೇ ಜನರು ಬಳಕೆ ಮಾಡಿಕೊಂಡಿದ್ದರು. ಈಗ ಮನೆಗಳಲ್ಲಿ, ತೊಟ್ಟಿಗಳಲ್ಲಿ ಇದ್ದ ನೀರು ಖಾಲಿಯಾಗಿದ್ದು, ಮಂಗಳವಾರದಿಂದ ನಗರದ ಬಹುತೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ. ಪಾಲಿಕೆ, ಸದಸ್ಯರಿಗೆ ಜನರು ಕರೆ ಮಾಡಿ ನೀರು ಯಾವಾಗ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ನೀಡುವುದು ಪಾಲಿಕೆಗೆ ಸಾಕಾಗಿ ಹೋಗಿದೆ. ಕೇವಲ 33 ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದು, ಕೆಲವು ವಾರ್ಡ್‌ಗಳ ಅಲ್ಲಲ್ಲಿ ನೀರು ಸರಬರಾಜು ಮಾಡಲಾಗಿದೆ. ಉಳಿದೆಡೆ ಎರಡು ದಿನಗಳಿಂದ ನೀರು ಬಿಟ್ಟಿಲ್ಲ.

ನೀರು ಸರಬರಾಜು ಮಾಡುವ 190 ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇಷ್ಟು ವರ್ಷಗಳ ಕಾಲ ದುಡಿದರೂ ಸೇವೆ ಕಾಯಂ ಮಾಡುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದಿದ್ದಾರೆ. ರಾಜ್ಯದ ಎಲ್ಲೆಡೆ ನೀರು ಸರಬರಾಜುದಾರರು ಮುಷ್ಕರಕ್ಕೆ ಇಳಿದಿರುವುದು ಬಲ ಬಂದಂತಾಗಿದೆ.

ನಗರದಲ್ಲಿ ಕಸ ಸಂಗ್ರಹಿಸುವ ಕೆಲಸವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರ ಮೂಲಕ ಆಟೊ ಚಾಲಕರು, ಲೋಡರ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆಟೊ ಚಾಲಕರನ್ನು ಪಾಲಿಕೆ ನೇಮಿಸಿಕೊಂಡಿಲ್ಲ. ಪಾಲಿಕೆ ಸಿಬ್ಬಂದಿಯೂ ಅಲ್ಲ. ಅವರು ಸಹ ಯಾವುದೇ ಮಾಹಿತಿ ನೀಡದೆ ಮುಷ್ಕರಕ್ಕೆ ಇಳಿದಿದ್ದಾರೆ.

ಮೇಯರ್ ಎಂ.ಪ್ರಭಾವತಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ಪಾಲಿಕೆ ಸದಸ್ಯರು, ತಕ್ಷಣವೇ ಕಸ ಸಂಗ್ರಹ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಕಸ ಸಂಗ್ರಹ ಆರಂಭಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕಸ ಸಂಗ್ರಹಿಸುವ ಕೆಲಸವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಬೇರೆಯವರನ್ನು ಚಾಲಕರನ್ನಾಗಿ ನೇಮಿಸಿಕೊಳ್ಳಲಿ. ಮೊದಲು ಕೆಲಸ ಆರಂಭಿಸಬೇಕು ಎಂದು ಎಚ್ಚರಿಸಿದ್ದಾರೆ.

**

ಪರ್ಯಾಯ ವ್ಯವಸ್ಥೆ

ಪಾಲಿಕೆ ಕಾಯಂ ಸಿಬ್ಬಂದಿ ಬಳಸಿಕೊಂಡು ನೀರು ಸರಬರಾಜು ಮಾಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬುಧವಾರದ ವೇಳೆ ಮುಷ್ಕರ ಅಂತ್ಯವಾಗುವ ಸಾಧ್ಯತೆ ಇದೆ ಎಂದು ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT