ಶುಕ್ರವಾರ, ಏಪ್ರಿಲ್ 3, 2020
19 °C
ದಂಡಿನ ಮಾರಮ್ಮ ದೇವಸ್ಥಾನದ ಭಕ್ತರ ಆಗ್ರಹ; ಪೊಲೀಸರಿಂದ ಲಘು ಲಾಠಿ ಪ್ರಹಾರ

ಕೋಣ ಬಲಿಗಾಗಿ ‘ಕಾದಾಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮ ದೇವಿಗೆ ಕೋಣ ಬಲಿ ಕೊಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಭಕ್ತರು ದೇವಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಇಡೀ ದಿನ ಭಕ್ತರು ಹಾಗೂ ಅಧಿಕಾರಿಗಳ ನಡುವೆ ‘ಕಾದಾಟ’ ನಡೆಯಿತು.

ದಂಡಿನ ಮಾರಮ್ಮ ದೇವಿ ಜಾತ್ರೆಗೆ ಮಂಗಳವಾರ ರಾತ್ರಿ ಚಾಲನೆ ನೀಡಲಾಗಿತ್ತು. ಬುಧವಾರ ಕೋಣ ಬಲಿ ಕೊಡಲು ಮುಂದಾದಾಗ ಅಧಿಕಾರಿಗಳು ಹಾಗೂ ಪೊಲೀಸರು ಅವಕಾಶ ನೀಡಲಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಬುಧವಾರ ಮುಂಜಾನೆ ಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದಾಗ, ಕೋಣ ಬಲಿಕೊಟ್ಟ ನಂತರವೇ ದೇವಿಯನ್ನು ಒಳಗೆ ಕರೆದುಕೊಂಡು ಹೋಗಬೇಕು ಎಂದು ಭಕ್ತರು ಪಟ್ಟುಹಿಡಿದರು. ಅವಕಾಶ ಸಿಗದಿದ್ದಾಗ ದೇವಾಲಯಕ್ಕೆ ಬೀಗಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗದೆ, ಜನರು ವಿವಿಧ ತೊಂದರೆ ಅನುಭವಿಸುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿವೆ. ಕೆರೆಗಳು ಬರಡು ಭೂಮಿ
ಯಾಗುತ್ತಿವೆ. ಈ ದೇವಿಗೆ ಕೋಣ ಬಲಿ ಕೊಡದಿರುವುದರಿಂದ ಈ ರೀತಿ ತೊಂದರೆಯಾಗುತ್ತಿದೆ. ಹಾಗಾಗಿ ಅವಕಾಶ ನೀಡಬೇಕು ಎಂದು ಪ್ರತಿಭಟನನಿರತರು ಒತ್ತಾಯಿಸಿದರು.

ಕೋಣ ಬಲಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಗಳು ಯಾವುದೇ ಕಾರಣಕ್ಕೂ ಬಲಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ, ತಹಶೀಲ್ದಾರ್ ಡಾ.ವಿಶ್ವನಾಥ, ಡಿವೈಎಸ್‌ಪಿ ಸೂರ್ಯನಾರಯಣ್, ಕೋಣ ಬಲಿ ಕೊಡಲು ಸರ್ಕಾರದ ಆದೇಶವಿಲ್ಲ. ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಭಕ್ತರ ಮನವೊಲಿಸಿದ ಮುಖಂಡರು, ದೇವಾಲಯದ ಬೀಗ ತೆಗೆಸಿ, ದರ್ಶನಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನನಿರತರನ್ನು ಚದುರಿಸಲು ಪೊಲೀಸರು ಎರಡು ಬಾರಿ ಲಘು ಲಾಠಿ ಪ್ರಹಾರ ನೆಡಸಿದರು.

ದಶಕಗಳಿಂದ ಪಣ್ಣೆ ರೈತ ಸಂಘದವರು ಈ ದೇವಾಲಯದಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಸುತ್ತಿದ್ದರು. ಆಗ ಕೋಣ ಬಲಿ ನಡೆಯುತ್ತಿತ್ತು. ದೇಗುಲ ಮುಜರಾಯಿ ಇಲಾಖೆಗೆ ಹಸ್ತಾಂತರವಾದ ಬಳಿಕ ಕೋಣ ಬಲಿ ನಿಂತಿದೆ.

ಜಾತ್ರೆಯ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಬೇಕು. ಇದಕ್ಕೆ ಅಧಿಕಾರಿಗಳು ಅನುವು ಮಾಡಿಕೊಡಬೇಕು

ಎಂ.ಎಸ್.ಚಂದ್ರಶೇಖರ್ ಬಾಬು, ಪುರಸಭೆ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು