ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಇಲ್ಲ ವ್ಯವಸ್ಥೆ

ಅವ್ಯವಸ್ಥೆ ವಿಡಿಯೊ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಸೋಂಕಿತರು
Last Updated 3 ಆಗಸ್ಟ್ 2020, 6:07 IST
ಅಕ್ಷರ ಗಾತ್ರ

ತಿಪಟೂರು: ‘ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕವಾದ ವ್ಯವಸ್ಥೆ ಕಲ್ಪಿಸದೆ ರೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಕೊರೊನಾ ಸೋಂಕಿತರು ಆರೋಪಿಸಿದ್ದಾರೆ.

ಸೋಂಕಿತರು ತಾಲ್ಲೂಕಿನ ಕೋವಿಡ್‌ ಕೇರ್‌ ಸೆಂಟರ್‌ ಸ್ಥಿತಿ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕೊನೆಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 112 ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದು, ಇದನ್ನು ನಿರ್ವಹಣೆ ಮಾಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಸೋಂಕಿತರು ದೂರುತ್ತಾರೆ.

ಕೋವಿಡ್ ಕೆರ್ ಸೆಂಟರ್‌ನಲ್ಲಿ ಸದ್ಯ ಸುಮಾರು 30 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾರದಿಂದ ಯಾವುದೇ ಕೋಣೆಗಳನ್ನು ಸ್ಯಾನಿಟೈಸ್ ಮಾಡಿಲ್ಲ. ಶುಚಿಯಾದ ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿಲ್ಲ.

‘ದಾಖಲೆಗೆ ಮಾತ್ರವೇ ಊಟದ ಪಟ್ಟಿ ಹಾಕಿದ್ದು, ಒಂದು ದಿನವೂ ಮೊಟ್ಟೆ ನೀಡಿಲ್ಲ. ಅಲ್ಲದೇ ಶೌಚಾಲಯಗಳಿಗೆ ದ್ರಾವಣಯುಕ್ತ ನೀರನ್ನು ಹಾಕುತ್ತಿಲ್ಲ. ಕೊರೊನಾ ಜತೆಗೆ ರಕ್ತದ ಒತ್ತಡ, ಮಧುಮೇಹ ಇರುವಂತಹ ರೋಗಿಗಳ ತಪಾಸಣೆ ಆಗಾಗ್ಗೆ ಮಾಡುತ್ತಿಲ್ಲ. ಅವರಿಗೆ ಬೇಕಾದ ಔಷಧಿ ನೀಡುತ್ತಿಲ್ಲ’ ಎಂದು ಸೋಂಕಿತರು ದೂರುತ್ತಾರೆ.

‘ಈ ಬಗ್ಗೆ ವೈದ್ಯರನ್ನು ಪ್ರಶ್ನಿಸಿದರೆ, ಅಂತಹ ವ್ಯಕ್ತಿಯನ್ನು ನೋಡುವುದೇ ಇಲ್ಲ. ಯಾರಿಗೆ ಬೇಕಾದರೂ ದೂರು ನೀಡಿ ಎಂದು ಬೆದರಿಕೆ ಹಾಕುತ್ತಾರೆ. ವೈದ್ಯರು ನೀಡುವ ಔಷಧಿಗಳನ್ನು ಸೋಂಕಿತರು ತೆಗೆದುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಯಾರೊಬ್ಬರು ಪರಿಶೀಲಿಸುವುದಿಲ್ಲ’ ಎಂದು ದೂರಿದ್ದಾರೆ.

ಮಾನಸಿಕ ಕಿರುಕುಳ: ‘ವೈದ್ಯರು ಸೋಂಕಿತರೊಂದಿಗೆ ವಿಶ್ವಾಸ ತುಂಬುವ ಮಾತುಗಳನ್ನಾಡುವುದನ್ನು ಬಿಟ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ನಾವೇನೂ ಐಷಾರಾಮಿ ವ್ಯವಸ್ಥೆಯನ್ನು ನಿರೀಕ್ಷಿಸುತ್ತಿಲ್ಲ. ಇರುವುದನ್ನೇ ಸರಿಯಾಗಿ ನೀಡಿದರೆ ಆರೋಪವನ್ನು ಮಾಡುವುದಿಲ್ಲ’ ಎಂಬುದು ಸೋಂಕಿತರ ಅಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT