ಗುರುವಾರ , ನವೆಂಬರ್ 14, 2019
23 °C

ನಾಯಿ ವಿಚಾರಕ್ಕೆ ಕುಟುಂಬಗಳ ಮಾರಾಮಾರಿ

Published:
Updated:
Prajavani

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮದಲ್ಲಿ ನಾಯಿಯ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾಯಿಯ ಮಾಲೀಕ ಶಿವಕುಮಾರ ಸ್ವಾಮಿ, ತಾಯಿ ಸತ್ಯ ಪ್ರೇಮ, ಪತ್ನಿ ರೇಖಾ ಇವರ ಮೇಲೆ ಪಕ್ಕದ ಮನೆಯ ನಾಗರಾಜು ಅವರ ಮಗ ಅರುಣ್ ಎಂಬುವರು ಕಬ್ಬಿಣದ ಪೈಪ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಿವಕುಮಾರ ಸ್ವಾಮಿ ಅವರ ತಲೆ ಹಿಂಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ. ತಾಯಿ ಸತ್ಯ ಪ್ರೇಮ ಅವರಿಗೆ ಎಡಗೈಗೆ ಹೊಡೆತ ಬಿದ್ದು ಮುರಿದಂತಾಗಿದೆ. ರೇಖಾ ಅವರ ಬೆನ್ನುಮೂಳೆಗೆ ತೀವ್ರ ಗಾಯವಾಗಿದೆ. ಮೂವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಶಿವಕುಮಾರಸ್ವಾಮಿ ಅವರ ಸೋದರ ಧನಂಜಯ, ‘ನಮ್ಮ ಅಣ್ಣನ ಮನೆಯ ನಾಯಿ ನಾಗರಾಜು ಮನೆಯ ಹತ್ತಿರ ಹೋಗಿದ್ದರಿಂದ ಜಗಳ ಶುರುವಾಯಿತು. ನಾಗರಾಜು ಮನೆಯವರು ನಾಯಿಗೆ ಹೊಡೆದದ್ದನ್ನು ನೋಡಿ ಶಿವಕುಮಾರಸ್ವಾಮಿ ಅವರ ಪತ್ನಿ ಪ್ರಶ್ನಿಸಿದರು. ಇದರಿಂದ ಈ ಜಗಳ ಹೆಚ್ಚಾಯಿತು. ನಂತರ ನಾಗರಾಜು ಅವರ ಮಗ ಅರುಣ್ ಅಲ್ಲೇ ಇದ್ದ ಕಬ್ಬಿಣದ ಪೈಪ್‌ನಿಂದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)