ಶುಕ್ರವಾರ, ಮೇ 14, 2021
31 °C
ಹೂವು, ಹಣ್ಣು ಖರೀದಿ ಜೋರು

ಯುಗಾದಿ: ಮಾರುಕಟ್ಟೆಯಲ್ಲಿ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯುಗಾದಿ ಹಬ್ಬದ ಖರೀದಿಗೆ ಜನ ಮುಗಿಬಿದ್ದರು. ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೂ ಜನರು ಖರೀದಿಯಲ್ಲಿ ತೊಡಗಿದ್ದರು. ಬೆಳಿಗ್ಗೆ, ಸಂಜೆ ಮಾರುಕಟ್ಟೆಗಳಲ್ಲಿ ಕಾಲಿಡಲೂ ಜಾಗ ಇಲ್ಲದಂತೆ ತುಂಬಿ ಹೋಗಿದ್ದರು. ಕಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದ ದೃಶ್ಯ ಕಂಡುಬಂತು. ವೈಯಕ್ತಿಕ ಅಂತರ ಕಾಪಾಡಲಿಲ್ಲ.

ಕೋವಿಡ್–19 ಸೋಂಕು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ತುಮಕೂರು ನಗರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿದಿನವೂ ಸಾವು ಸಂಭವಿಸುತ್ತಿದೆ. ಸೋಂಕು ತಡೆಗಟ್ಟುವ ಸಲುವಾಗಿ ಸಭೆ, ಸಮಾರಂಭ ನಿಷೇಧಿಸಲಾಗಿದೆ. ವಿವಾಹ ಮತ್ತಿತರ ಶುಭ ಕಾರ್ಯಗಳ ಮೇಲೂ ನಿಯಂತ್ರಣ ಹಾಕಲಾಗಿದೆ. ಗುಂಪು ಸೇರುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಮಾಡಲಾಗಿದೆ. ಆದರೂ ಅಂತರ ಕಾಯ್ದುಕೊಳ್ಳಲಿಲ್ಲ. ಒತ್ತೊಟ್ಟಾಗಿ ನಿಂತು ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನ ಸೊಪ್ಪು ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಈಗಾಗಲೇ ಹಣ್ಣಿನ ಬೆಲೆ ದುಬಾರಿಯಾಗಿದ್ದು, ಹೂವು ಸಹ ದುಬಾರಿಯಾಗಿತ್ತು. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೇವಂತಿಗೆ ಮಾರು ₹ 80ರಿಂದ ₹120ರ ವರೆಗೆ ಏರಿಕೆಯಾಗಿತ್ತು. ಗುಲಾಬಿ ಹಾಗೂ ಇತರ ಬಿಡಿ ಹೂಗಳ ಬೆಲೆ ಕೆ.ಜಿ ₹80ರಿಂದ ₹100ರ ವರೆಗೆ ಮಾರಾಟವಾಯಿತು. ಹಬ್ಬದ ಸಮಯದಲ್ಲಿ ಏಲಕ್ಕಿ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಕೆ.ಜಿ 40 ಇದ್ದದ್ದು, ಇಂದು ₹50–60ಕ್ಕೆ ಏರಿಕೆಯಾಗಿತ್ತು. ಕೆಲವೆಡೆ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು.

ಸೇಬು ಕೆ.ಜಿ ₹180–200, ಕಿತ್ತಳೆ, ಮೋಸಂಬಿ ಹಣ್ಣಿನ ಬೆಲೆ ಕೆ.ಜಿ ₹130 ದಾಟಿತ್ತು. ಕಲ್ಲಂಗಡಿ, ಅನಾನಸ್ ಬೆಲೆಯೂ ದುಬಾರಿಯಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು