ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ದಲಿತರ ಕುಂದುಕೊರತೆ ಸಭೆ

ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳಲ್ಲಿ ₹37 ಲಕ್ಷ ಪರಿಹಾರ ವಿತರಣೆ
Last Updated 23 ಜೂನ್ 2020, 15:45 IST
ಅಕ್ಷರ ಗಾತ್ರ

ತುಮಕೂರು: ದಲಿತರ ಕುಂದುಕೊರತೆ ಸಭೆ ನಡೆಸದ ತಹಶೀಲ್ದಾರರಿಗೆ ಎಚ್ಚರಿಕೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ಉಪವಿಭಾಗಾಧಿಕಾರಿಗಳಿಗೆ ಮಂಗಳವಾರ ಸೂಚಿಸಿದರು.

ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ದಲಿತರ ಕುಂದುಕೊರತೆ ಸಭೆ ನಡೆಸಲು ಸೂಚನೆ ನೀಡಿದ್ದರೂ ನಿಗದಿತ ಸಮಯದಲ್ಲಿ ಸಭೆ ನಡೆಸಿಲ್ಲ. 2019ರಲ್ಲಿ ಶಿರಾ, ಕೊರಟಗೆರೆ, ಕುಣಿಗಲ್ ತಾಲ್ಲೂಕಿನಲ್ಲಿ ಕೇವಲ ಒಂದೇ ಒಂದು ದಲಿತರ ಕುಂದುಕೊರತೆ ಸಭೆ ನಡೆಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮನಾಥ್, ‘ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳಲ್ಲಿ ₹37 ಲಕ್ಷ ಪರಿಹಾರ ವಿತರಿಸಲಾಗಿದೆ. 2019 ಡಿಸೆಂಬರ್‌ನಿಂದ 2020ರ ಜೂನ್ 19ರ ವರೆಗೆ ಪರಿಶಿಷ್ಟ ಜಾತಿಯ 25, ಪಂಗಡದ 4 ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಪರಿಶಿಷ್ಟ ಜಾತಿಯ 45, ಪಂಗಡದ 13 ಸೇರಿದಂತೆ ಜಾತಿ ನಿಂದನೆ, ಹಲ್ಲೆ, ಅತ್ಯಾಚಾರ, ಅಪಹರಣ, ಲೈಂಗಿಕ ಕಿರುಕುಳ, ಮಾನಸಿಕ ಹಲ್ಲೆಗೊಳಗಾದ ಒಟ್ಟು 58 ಸಂತ್ರಸ್ತರಿಗೂ ಪರಿಹಾರ ನೀಡಲಾಗಿದೆ’ ಎಂದು ತಿಳಿಸಿದರು.

‘ದಲಿತರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಶಾಂತಿ ಸಭೆಗಳನ್ನು ನಡೆಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯದ ಆವರಣದಲ್ಲೇ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಕೇಂದ್ರ ಪ್ರಾರಂಭಿಸುವಂತೆ ಸಮಿತಿ ಸದಸ್ಯರು ಮನವಿ ಮಾಡಿದರು. ನಗರದಲ್ಲಿರುವ ಕ್ಯಾಂಪಸ್‌ನಲ್ಲೇ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಕುಲಪತಿ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ವರ್ಗದ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದವರನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಕುಮಾರ್ ಮಾದರ್, ರಂಗಯ್ಯ ಪ್ರಸ್ತಾಪಿಸಿದರು. ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.

ಡಿಎಫ್‌ಒಗೆ ನಿರ್ದೇಶನ: ಶಿರಾ ತಾಲ್ಲೂಕು ಶೀಬಿ ಅಗ್ರಹಾರ, ಬೋರಸಂದ್ರ, ಮಧುಗಿರಿ ತಾಲ್ಲೂಕಿನ ತಿಪ್ಪನಹಳ್ಳಿ, ನಂದಿಹಳ್ಳಿ, ಮತ್ತಿತರ ಕಡೆ ದಲಿತರ ಭೂಮಿಯಲ್ಲಿ ಪದೇ ಪದೇ ಅರಣ್ಯ ಇಲಾಖೆಯವರು ಟ್ರಂಚ್ ತೆಗೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲಿಸುವಂತೆ ಡಿಎಫ್‌ಒ ಗಿರೀಶ್ ಅವರಿಗೆ ನಿರ್ದೇಶಿಸಿದರು.

ಸಮಿತಿ ಸದಸ್ಯ ಕದುರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್, ನಂದಿನಿ, ನಂದಿನಿದೇವಿ ಇದ್ದರು.

ಪೌರಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗಾಗಿ ಪ್ರತ್ಯೇಕ ಶೌಚಾಲಯ, ಸ್ನಾನಗೃಹ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಇಎಸ್‌ಐ, ಪಿಎಫ್ ಕಡ್ಡಾಯವಾಗಿ ಕಡಿತಗೊಳಿಸಬೇಕು. ಸೂಚನೆ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದುಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಂದು ಎಚ್ಚರಿಸಿದರು.

ತುಮಕೂರು, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯಕ್ಕಾಗಿ ಜಿಲ್ಲಾಡಳಿತದಿಂದ ನಿವೇಶನ ಮಂಜೂರು ಮಾಡಲಾಗಿತ್ತು. ಈವರೆಗೆ ಖಾತೆಯಾಗದವರಿಗೆ ಕೂಡಲೇ ಖಾತೆಮಾಡಿಸಿ ವಸತಿ ಸೌಲಭ್ಯಕ್ಕಾಗಿ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.

ಪ್ರಕರಣ ದಾಖಲು

ತುಮಕೂರು ತಾಲ್ಲೂಕು ಗೂಳೂರು ಹೋಬಳಿ ಮಂಚಗೊಂಡನಹಳ್ಳಿ, ಗುಬ್ಬಿ ತಾಲ್ಲೂಕು ವಿರೂಪಾಕ್ಷಿಪುರದ ದಲಿತರ ಭೂಮಿಯನ್ನು ಅಕ್ರಮವಾಗಿ ಇತರೆ ಜನಾಂಗದ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ದೂರು ನೀಡಿದಾಗ ಮಂಚಗೊಂಡನಹಳ್ಳಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ₹1 ಕೋಟಿ ಅನುದಾನದಲ್ಲಿ ಇತರೆ ಜನಾಂಗದವರಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಿರುವ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT