ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಜನಿವಾರ ಧರಿಸಿದ ದಲಿತರು

ಸೌಹಾರ್ದತೆ ಸಾರುವ ಉಜ್ಜನಿ ಜಾತ್ರೆ
Last Updated 25 ಮಾರ್ಚ್ 2023, 15:32 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು): ಸೌಹಾರ್ದತೆಗೆ ಹೆಸರಾಗಿರುವ ತಾಲ್ಲೂಕಿನ ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆ ಸಮಯದಲ್ಲಿ ದಲಿತರು ಜನಿವಾರ ಧಾರಣೆ ಮಾಡಿಕೊಳ್ಳುವುದು ವಿಶೇಷ.

ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಜನಿವಾರ ಧಾರಣೆ ಮತ್ತು ಕಂಬ ಸ್ಥಾಪನೆ ಮೂಲಕ ದೇವಿಯ ಈ ವರ್ಷದ ಉತ್ಸವ ಮತ್ತು ಜಾತ್ರೆಗೆ ಚಾಲನೆ ನೀಡಲಾಯಿತು. ಗ್ರಾಮದ ದಲಿತ ಸಮುದಾಯದ ಚೌಡಯ್ಯ, ಚೌಡೇಶಿ, ವಾಡೇಲಿಂಗಯ್ಯ, ಅಶೋಕ, ರಾಜಣ್ಣ, ಮರಿಚೌಡಯ್ಯ ಅವರು ಈ ಬಾರಿ ಜನಿವಾರ ಧರಿಸಿದ್ದಾರೆ. 12 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಉಜ್ಜನಿ ಗ್ರಾಮದ ಜನರು ಹಿಂದಿನಿಂದಲೂ ಜಾತಿ, ಧರ್ಮದ ಹಂಗಿಲ್ಲದೆ, ಕೋಮು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಚೌಡೇಶ್ವರಿ ದೇವಿ ಜಾತ್ರೆ ಸಮಯದಲ್ಲಿ ಎಲ್ಲರೂ ಒಗ್ಗೂಡಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಕುರುಬ ಸಮಾಜದವರು ಜಾತ್ರೆಯ ಕಂಬ ಪ್ರತಿಷ್ಠಾಪಿಸಿದರೆ, ದಲಿತರು ಜನಿವಾರ ಧಾರಣೆ ಮಾಡಿಕೊಳ್ಳುತ್ತಾರೆ. ಮಡಿವಾಳರು ಮುಸ್ಲಿಮರ ವೇಷ ಧರಿಸಿ ಬಾಬಯ್ಯನ ಜಲ್ದಿ ಪೂಜೆ ನೆರವೇರಿಸುತ್ತಾರೆ. ಗುಡ್ಡರು ಜಾತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಉಜ್ಜನಿ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜಾತಿ, ಜನಾಂಗದ ಭೇದವಿಲ್ಲದೆ ಎಲ್ಲಾ ಸಮುದಾಯದವರು ಜಾತ್ರೆಯಲ್ಲಿ ಪಾಲ್ಗೊಂಡು, ದೇವಿಯ ಆಶೀರ್ವಾದ ಪಡೆಯುತ್ತಾರೆ. ಅಗ್ನಿಕೊಂಡ ಹಾಯ್ದು ಹರಕೆ ತೀರಿಸುತ್ತಾರೆ.

‘ಹಳೆಯ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಜಾತ್ರೆ ಮುಗಿಯುವವರೆಗೂ ಬ್ರಾಹ್ಮಣರಾಗಿ ಇರುತ್ತೇವೆ ಮತ್ತು ದೇವಸ್ಥಾನದಲ್ಲಿಯೇ ಇರುತ್ತೇವೆ’ ಎಂದು ಜನಿವಾರ ಧರಿಸಿದ ದಲಿತ ಸಮುದಾಯದ ಚೌಡೇಶಿ ಹೇಳಿದರು.

**

ಬ್ರಾಹ್ಮಣ ಕನ್ಯೆ, ದಲಿತ ಯುವಕನ ಮದುವೆ ಫಲಶ್ರುತಿ!

ಬ್ರಾಹ್ಮಣ ಕನ್ಯೆಯಾದ ಹೆಬ್ಬಾರಮ್ಮನು ಚೌಡೇಶ್ವರಿ ದೇವಿಯ ಭಕ್ತೆ. ಈಕೆ ಪರಿಶಿಷ್ಟ ಸಮುದಾಯದ ಯುವಕನನ್ನು ಮದುವೆಯಾಗುತ್ತಾಳೆ. ಐವರು ಗಂಡು ಮಕ್ಕಳ ತಾಯಿಯಾದ ನಂತರ ತಾನು ಮದುವೆಯಾಗಿದ್ದು ಬ್ರಾಹ್ಮಣನಲ್ಲ ಎಂದು ತಿಳಿಯುತ್ತದೆ. ಚೌಡೇಶ್ವರಿ ದೇವಿಯ ಜಾತ್ರೆಯ ಕೊಂಡದಲ್ಲಿ ಅಗ್ನಿ ಪ್ರವೇಶಕ್ಕೆ ನಿರ್ಧರಿಸುತ್ತಾಳೆ.

ನೊಂದ ಪತಿ ಪ್ರಾಯಶ್ಚಿತ್ತಕ್ಕಾಗಿ ಬೇಡಿಕೊಂಡಾಗ, ‘ಪ್ರತಿ ವರ್ಷ ಚೌಡೇಶ್ವರಿ ದೇವಿ ಜಾತ್ರೆ ಸಮಯದಲ್ಲಿ ತನ್ನ ಐವರೂ ಮಕ್ಕಳು, ನೀನು (ಗಂಡ) ಸೇರಿದಂತೆ ಒಟ್ಟು ಆರು ಜನ ಜಾತ್ರೆಯ 15 ದಿನ ಮೊದಲೇ ಜನಿವಾರ ಧರಿಸಿ ಬ್ರಾಹ್ಮಣರಾಗಬೇಕು. ಹಬ್ಬ ಮುಗಿಯುವರೆಗೂ ಬ್ರಾಹ್ಮಣರಂತೆ ಇರಬೇಕು. ಕೊನೆಯ ದಿನ ಕೊಂಡ ಹಾಯಬೇಕು’ ಎಂದು ಹೆಬ್ಬಾರಮ್ಮ ತಿಳಿಸುತ್ತಾಳೆ. ನಂತರ ಚೌಡೇಶ್ವರಿ ದೇವಿಯ ಕೊಂಡದಲ್ಲಿ ಅಗ್ನಿ ಪ್ರವೇಶ ಮಾಡುವ ಮೂಲಕ ದೇವಿಯೊಳಗೆ ಐಕ್ಯಳಾಗುತ್ತಾಳೆ ಎಂಬ ಪ್ರತೀತಿ ಇದೆ.

ಇದೇ ಸಂಪ್ರದಾಯ ಮುಂದುವರಿದಿದ್ದು, ಜಾತ್ರೆ ಸಮಯದಲ್ಲಿ ಆರು ದಲಿತರು ಜನಿವಾರ ಧರಿಸುತ್ತಾರೆ. ಐವರು ದಲಿತರು ಹೆಬ್ಬಾರಮ್ಮನ ಮಕ್ಕಳ ಪ್ರತಿನಿಧಿಗಳಾದರೆ, ಒಬ್ಬರು ಆಕೆಯ ಗಂಡನನನ್ನು ಪ್ರತಿನಿಧಿಸುತ್ತಾರೆ. ಜಾತ್ರೆಯ ಕಂಬ ವಿಸರ್ಜನೆಯ ದಿನ ಜನಿವಾರ ತೆಗೆದು ಕೆರೆಗೆ ಅರ್ಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT