ಬುಧವಾರ, ಆಗಸ್ಟ್ 10, 2022
21 °C
ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ಮೇಲ್ಸೇತುವೆ ವರೆಗಿನ ಮರಗಳನ್ನು ಕತ್ತರಿಸಲು ಆದೇಶ

ಮತ್ತೆ 17 ಮರಗಳಿಗೆ ಕೊಡಲಿ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಾಗಿ ಈಗಾಗಲೇ ಹನುಮಂತಪುರ, ಹೊರವರ್ತುಲ ರಸ್ತೆ (ರಿಂಗ್ ರೋಡ್‌) ಸೇರಿದಂತೆ ವಿವಿಧ ಭಾಗಗಳಲ್ಲಿ ಮರಗಳನ್ನು ಕಡಿಯಲಾಗಿದೆ. ಈಗ ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ಮೇಲ್ಸೇತುವರೆಗಿನ ಒಟ್ಟು 17 ಮರಗಳನ್ನು ಕಡಿಯಲು ಸ್ಮಾರ್ಟ್‌ಸಿಟಿ ಮುಂದಾಗಿದೆ.

ಈ ಸಂಬಂಧ ಅರಣ್ಯ ಇಲಾಖೆಗೆ ಪತ್ರ ಸಹ ನೀಡಿದ್ದು ಇಲಾಖೆಯೂ ಕತ್ತರಿಸಲು ಅನುಮತಿ ನೀಡಿದೆ. ಮರಗಳನ್ನು ಕಡಿಯುಲು ಮುಂದಾಗಿರುವುದಕ್ಕೆ ನಾಗರಿಕರು ಮತ್ತು ಪರಿಸರ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ಮೇಲ್ಸೇತುವೆ ರಸ್ತೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆಯಾಗಿರುವ 220 ಮೀಟರ್ ವ್ಯಾಪ್ತಿಯಲ್ಲಿನ ರಸ್ತೆಯ ಎಡ ಮತ್ತು ಮಧ್ಯಭಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಮರಗಳ ಪಟ್ಟಿಯನ್ನು ಸ್ಮಾರ್ಟ್‌ಸಿಟಿಯು ಅರಣ್ಯ ಇಲಾಖೆಗೆ ಸಲ್ಲಿಸಿತ್ತು. ಇವುಗಳನ್ನು ಕತ್ತರಿಸಲು ಅನುಮತಿ ನೀಡಬೇಕು ಎಂದು ಅಧಿಕಾರಿಗಳು ಕೋರಿದ್ದರು.

ಸರ್ಕಾರಿ ಆದೇಶದಂತೆ ಒಂದು ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಟ್ಟು ಬೆಳೆಸಲು ತಗಲುವ ವೆಚ್ಚ ಮತ್ತು ಅಭಿವೃದ್ಧಿಪಡಿಸುವ ಪ್ರತಿ ಕಿ.ಮೀ ರಸ್ತೆಗೆ ₹ 3 ಲಕ್ಷ ಹಣ ಪಾವತಿಸುವಂತೆ ಡಿಮ್ಯಾಂಡ್ ನೋಟ್ ನೀಡಲಾಗುವುದು ಎಂದು ತಿಳಿಸಿದ್ದರು.

ಸೌದೆ, ಟಿಂಬರ್ ಮೌಲ್ಯ ಮತ್ತು ಅರಣ್ಯಾಭಿವೃದ್ಧಿ ತೆರಿಗೆ ಹೀಗೆ ಮರಗಳನ್ನು ಮೌಲ್ಯಮಾಪನವನ್ನು ಅರಣ್ಯ ಇಲಾಖೆ ಮಾಡಿ, ಮರಗಳನ್ನು ಕತ್ತರಿಸಲು ಅನುಮತಿ ಸಹ ನೀಡಿದೆ.

‘ಈಗಾಗಲೇ ಇಲ್ಲಿ ರಸ್ತೆ ಕಾಮಗಾರಿ ಆಗಿದೆ. ರಸ್ತೆ ವಿಭಜಕ ಸಹ ಇದೆ. ಈ ವಿಭಜಕದ ನಡುವೆಯೇ ಮರಗಳು ಇವೆ. ಇದು ಹೆದ್ದಾರಿಯೇನೂ ಅಲ್ಲ. ಅಪಘಾತಗಳೂ ನಡೆಯುವುದಿಲ್ಲ. ಆದರೆ ಈಗ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಅನಗತ್ಯವಾಗಿ ಮರಗಳನ್ನು ಕಡಿಯಲು ಮುಂದಾಗಿರುವುದು ಸರಿಯಲ್ಲ’ ಎಂದು ಹೋರಾಟಗಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನ. 6ರಂದು ಸ್ಮಾರ್ಟ್‌ಸಿಟಿಯಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಡಿ. 14ರ ವೇಳೆಗೆ ಎಲ್ಲ ಪ್ರಕ್ರಿಯೆಗಳು ಪೂರ್ಣವಾಗಿ ಟೆಂಟರ್ ಹಂತಕ್ಕೆ ಬಂದಿದೆ. ನಮ್ಮ ಪರಿಚಿತರ ಮನೆಯ ಬಳಿ ಎರಡು ಮರಗಳ ಕೊಂಬೆಗಳು ಅವರ ಮನೆ ಆವರಣವನ್ನು ಪ್ರವೇಶಿಸಿವೆ. ಅಲ್ಲಿನ ಕೊಂಬೆಗಳನ್ನು ತೆರವುಗೊಳಿಸಿ ಎಂದು ಜೂನ್‌ನಲ್ಲಿ ನಾನು ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆಗಳು ಆಗಿಲ್ಲ. ಆದರೆ ಈ 17 ಮರಗಳನ್ನು ಕಡಿಯುವ ಪ್ರಕ್ರಿಯೆ ಮಾತ್ರ ಬಹಳ ವೇಗವಾಗಿ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ರಸ್ತೆಯಲ್ಲಿನ ಯುಜಿಡಿ ಮಾರ್ಗವನ್ನು ಎರಡು ಬಾರಿ ಬದಲಾವಣೆ ಮಾಡಲಾಗಿದೆ. ಇದರಿಂದ ಸಾಕಷ್ಟು ಹಣ ಪೋಲಾಗಿದೆ. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.