ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌಣ್‌ ಪರಿಣಾಮ | ಕುರಿ ಗೊಬ್ಬರಕ್ಕೂ ಕುಸಿದ ಬೇಡಿಕೆ

ಗೊಬ್ಬರ ಖರೀದಿಯೂ ಇಲ್ಲ; ಮರಿ ಮಾರಾಟಕ್ಕೆ ಮಾರುಕಟ್ಟೆಯೂ ಬಂದ್
Last Updated 6 ಮೇ 2020, 20:50 IST
ಅಕ್ಷರ ಗಾತ್ರ

ತುಮಕೂರು: ಕುರಿಗಾಹಿಗಳ ಆರ್ಥಿಕ ಅಭಿವೃದ್ಧಿಗೆ ಲಾಕ್‌ಡೌನ್ ತೀವ್ರವಾದ ಪೆಟ್ಟು ನೀಡಿದೆ. ಕುರಿ ಮಾರಾಟಕ್ಕೆ ಸಂತೆಗಳು ಬಂದ್ ಆಗಿವೆ. ಮತ್ತೊಂದು ಕಡೆ ಕುರಿ ಗೊಬ್ಬರವೂ ಮಾರಾಟವಾಗುತ್ತಿಲ್ಲ.

ಪ್ರತಿ ವರ್ಷ ಪೂರ್ವ ಮುಂಗಾರು ಮಳೆ ಆರಂಭಕ್ಕೆ ಕೆಲವು ದಿನಗಳಿವೆ ಎನ್ನುವಾಗ ಮಲೆನಾಡು ಜಿಲ್ಲೆಗಳ ರೈತರು, ಕಾಫಿ ತೋಟಗಳ ಮಾಲೀಕರು ತುಮಕೂರು ಸೇರಿದಂತೆ ಕುರಿ ಸಾಗಾಣಿಕೆ ಪ್ರಧಾನವಾಗಿರುವ ಜಿಲ್ಲೆಗಳ ಕುರಿಗಾಹಿಗಳಿಂದ ಗೊಬ್ಬರ (ಹಿಕ್ಕೆ) ಖರೀದಿಸುತ್ತಿದ್ದರು. ಕಾಫಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗೆ ಈ ಗೊಬ್ಬರ ಬಳಸಲಾಗುತ್ತದೆ.

ಭೂಮಿ ಫಲವತ್ತತೆಗೆ ಒಳ್ಳೆಯದು ಎನ್ನುವ ಕಾರಣಕ್ಕೆ ಪ್ರತಿ ವರ್ಷ ಈ ಅವಧಿಯಲ್ಲಿ ಕುರಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಒಂದು ಲಾರಿ ಲೋಡ್ ಗೊಬ್ಬರ ₹ 35 ಸಾವಿರಕ್ಕೆ ಮಾರಾಟವಾಗುತ್ತದೆ. ಶಿರಾ ತಾಲ್ಲೂಕು ಒಂದರಲ್ಲಿಯೇ ನೂರಾರು ಲೋಡ್ ಗೊಬ್ಬರ ಹೊರ ಜಿಲ್ಲೆಗಳಿಗೆ ಹೋಗುತ್ತದೆ.

ಲಾಕ್‌ಡೌನ್ ಪರಿಣಾಮ ಗೊಬ್ಬರ ತಿಪ್ಪೆಗಳಲ್ಲಿಯೇ ಉಳಿದಿದೆ. ಕುರಿ ಗೊಬ್ಬರ ಹಾಳಾಗುವ ವಸ್ತುವೇನೂ ಅಲ್ಲ. ಮುಂದಿನ ವರ್ಷದವರೆಗೂ ಸಂಗ್ರಹಿಸಬಹುದು. ಆದರೆ, ಗೊಬ್ಬರ ಮಾರಾಟಮಾಡಿ ಜೀವನಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದ ಕುರಿಗಾಹಿ ಕುಟುಂಬಗಳು ಹೇರಳವಾಗಿಯೇ ಇವೆ. ಬಹುತೇಕ ಕುರಿಗಾಹಿಗಳು ಬದುಕಿಗೆ ಹೊಲ, ತೋಟಗಳನ್ನು ಅವಲಂಬಿಸುವುದಕ್ಕಿಂತ ಕುರಿಗಳನ್ನು ಅವಲಂಬಿಸಿದ್ದಾರೆ. ಇಂತಹ ಕುಟುಂಬಗಳು ಈಗ ಕಂಗಾಲಾಗಿವೆ.

ಸಂತೆ ಬಂದ್
ಪ್ರತಿ ವರ್ಷ ಚಿಕ್ಕಮಗಳೂರು ಕಡೆಯವರು ಮಳೆ ಬೀಳುವ ಮುಂಚೆ ಗೊಬ್ಬರ ಖರೀದಿಗೆ ಬರುತ್ತಿದ್ದರು. ವರ್ಷಕ್ಕೆ ಮೂರು ಲಾರಿ ಲೋಡ್ ಮಾರಾಟ ಮಾಡುತ್ತಿದ್ದೆವು. ಪಕ್ಕದ ತಾಲ್ಲೂಕು ಜನರೂ ಖರೀದಿಸುತ್ತಿದ್ದರು. ಆದರೆ ಈ ಬಾರಿ ಯಾರೂ ಬಂದಿಲ್ಲ ಎಂದು ಶಿರಾ ತಾಲ್ಲೂಕು ಬೇವಿನಹಳ್ಳಿಯ ಈರಣ್ಣ ತಿಳಿಸಿದರು.

ಸಂತೆಗಳು ಬಂದ್ ಆಗಿವೆ. ಮರಿ ಮಾರಾಟಕ್ಕೆ ಮಾರುಕಟ್ಟೆ ಇಲ್ಲ. ಯುಗಾದಿ ಮರಿ ಮಾರಾಟಕ್ಕೆ ಒಳ್ಳೆಯ ಸಮಯ. ಆದರೆ ಈ ಬಾರಿ ಹಬ್ಬದ ಸಮಯದಲ್ಲಿಯೇ ಲಾಕ್‌ಡೌನ್ ಆಯಿತು ಎಂದು ಬೇಸರದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT