ತುಮಕೂರು: ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಸೇರಿದಂತೆ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಂ.ಚಂದ್ರಶೇಖರ್ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಿ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಅಕ್ರಮಗಳಲ್ಲಿ ಭಾಗಿಯಾಗಿರುವ ಚಂದ್ರಶೇಖರ್ ವಿರುದ್ಧ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದೆ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತೇಜೋವಧೆ ಮಾಡಲು ಬಳಸಿಕೊಂಡಿದೆ. ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದರೂ ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಂಡು ಬಂದು, ಕೆಲಸ ನಿರ್ವಹಿಸಿದ ಕಡೆಗಳಲ್ಲಿ ಭೂಗಳ್ಳರು, ಸಮಾಜಘಾತುಕರ ಜತೆಗೆ ಒಡನಾಟ ಬೆಳೆಸಿಕೊಂಡು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಮಾಹಿತಿ ಸೋರಿಕೆ ಸಂಬಂಧ ರಾಜ್ಯಪಾಲರ ಕಚೇರಿ ವಿರುದ್ಧವೇ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿ ದರ್ಪ ಮೆರೆದಿದ್ದರು. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದನ್ನೇ ನೆಪವಾಗಿ ಇಟ್ಟುಕೊಂಡು ಸಚಿವರನ್ನು ಅವಮಾನಿಸಿದ್ದಾರೆ. ಎಸ್‌ಐಟಿ ಸದಸ್ಯರಿಗೆ ಪತ್ರ ಬರೆದು ಕುಮಾರಸ್ವಾಮಿ ವಿರುದ್ಧ ಅಸಭ್ಯ, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ‘ಹಂದಿಗಳ ಜತೆ ಗುದ್ದಾಡಬೇಡಿ. ಏಕೆಂದರೆ ಹಿಂದಿಗಳಂತೆ ನೀವು ಕೊಳಕಾಗುತ್ತೀರಿ’ ಎಂಬ ಪದಗಳನ್ನು ಬಳಸಿ ಅಪಮಾನ ಮಾಡಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಒಂದು ವೇಳೆ ಕುಮಾರಸ್ವಾಮಿ ಮಾನಹಾನಿಕರ ಹೇಳಿಕೆ ನೀಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶಗಳಿವೆ. ಕಾನೂನು ಮಾರ್ಗಗಳನ್ನು ಬಿಟ್ಟು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಅಸಭ್ಯ ಪದಗಳನ್ನು ಬಳಸಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವ, ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು, ವಿರೋಧ ಪಕ್ಷಗಳು ಸರ್ಕಾರಗಳ ವಿರುದ್ಧ ಆರೋಪ ಮಾಡುವುದು ಸಹಜ. ಆದರೆ ರಾಜ್ಯಪಾಲರು ಕೈಗೊಳ್ಳುವ ನಿರ್ಧಾರಗಳನ್ನೇ ಸಾರ್ವಜನಿಕವಾಗಿ ಹಿರಿಯ ಪೊಲೀಸ್ ಅಧಿಕಾರಿಯಾಗಿ ಟೀಕಿಸುತ್ತಿದ್ದಾರೆ. ಜತೆಗೆ ವಿರೋಧ ಪಕ್ಷದ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಹಲವು ಎಫ್ಐಆರ್‌ಗಳಲ್ಲಿ ಎಂ.ಚಂದ್ರಶೇಖರ್ ಹೆಸರು ನಮೂದಾಗಿದೆ. ಹಲವಾರು ಕೋರ್ಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಮಾಜಿ ಶಾಸಕ ಎಚ್.ನಿಂಗಪ್ಪ, ನಗರ ಘಟಕದ ಅಧ್ಯಕ್ಷ ವಿಜಯ್‍ಗೌಡ, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಶ್ರೀನಿವಾಸ ಪ್ರಸಾದ್, ಟಿ.ಜಿ.ನರಸಿಂಹರಾಜು, ಯೋಗಾನಂದಕುಮಾರ್, ಕುಸುಮಾ ಜಗನ್ನಾಥ್, ಟಿ.ಕೆ.ನರಸಿಂಹಮೂರ್ತಿ, ಹನುಮಂತರಾಯಪ್ಪ, ಎಚ್.ಡಿ.ಕೆ.ಮಂಜುನಾಥ್, ಎ.ಶ್ರೀನಿವಾಸ್, ಟಿ.ಎಚ್.ಬಾಲಕೃಷ್ಣ, ಲಕ್ಷ್ಮಿನರಸಿಂಹರಾಜು, ರಾಮಕೃಷ್ಣಪ್ಪ, ಧರಣೇಂದ್ರಕುಮಾರ್, ಟಿ.ಎಲ್.ಕುಂಭಯ್ಯ, ಗುರುಪ್ರಕಾಶ್ ಬಳ್ಳುಕುರಾಯ, ಗಂಗಣ್ಣ, ವಿಜಯಕುಮಾರ್, ತಾಹೇರಾ ಕುಲ್ಸಂ, ಲೀಲಾವತಿ, ರಾಮಣ್ಣ, ರಂಗಪ್ಪ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.