ಮಂಗಳವಾರ, ಸೆಪ್ಟೆಂಬರ್ 22, 2020
26 °C

ಶಿರಾ: ಶೇಂಗಾ ಖರೀದಿ ಕೇಂದ್ರ ಆರಂಭಿಸಲು ರೈತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಮಾರುಕಟ್ಟೆಗೆ ಬರುತ್ತಿದ್ದು, ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಬೆಳೆಯಾದ ಕಾರಣ ಸುಮಾರು 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಈಗ ಫಸಲು ಬರುತ್ತಿರುವ ಕಾರಣ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ 1,411 ಚೀಲ ಶೇಂಗಾ ಬಂದಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಲಿದೆ.

ಬೆಲೆ ಕಡಿಮೆ: ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶೇಂಗಾ ಬಂದರೆ ಬೆಲೆ ಕಡಿಮೆಯಾಗುವ ಸಂಭವ ಇದೆ. ಇದರಿಂದ ರೈತರಿಗೆ ಅನ್ಯಾಯ ಆಗಲಿದೆ. ತಕ್ಷಣ ಶೇಂಗಾ ಖರೀದಿ ಕೇಂದ್ರ ತೆರೆಯುವುದು ಸೂಕ್ತ. ಮಂಗಳವಾರ ಕ್ವಿಂಟಲ್‌ಗೆ ₹2,500ರಿಂದ ಆರಂಭವಾಗಿ ಗುಣಮಟ್ಟದ ಶೇಂಗಾಕ್ಕೆ ₹5619 ಬೆಲೆ ದೊರೆತಿದೆ.

ಶೇಂಗಾಕ್ಕೆ ಕ್ವಿಂಟಲ್‌ಗೆ ₹5,270 ಬೆಂಬಲ ಬೆಲೆ ನಿಗದಿ ಮಾಡಿದ್ದರೂ ರೈತರಿಗೆ ಈ ಬೆಲೆ ದೊರೆಯದಂತಾಗಿದೆ.  

ಬೆಲೆ ಕುಸಿತಕ್ಕೆ ಕಾರಣ: ರೈತರು ಮಾರುಕಟ್ಟೆಗೆ ಹಸಿ ಶೇಂಗಾ ತರುತ್ತಿರುವುದು ಸಹ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಒಣಗಿಸಿ ಸ್ವಚ್ಛಗೊಳಿಸಿಕೊಂಡು ಶೇಂಗಾ ತಂದರೆ ಉತ್ತಮ ಬೆಲೆ ದೊರೆಯಲಿದೆ. ಜತೆಗೆ ಮಳೆ ಬೇರೆ ಬರುತ್ತಿರುವುದರಿಂದ ಶೇಂಗಾ ಕಪ್ಪು ಬಣ್ಣಕ್ಕೆ ತಿರುಗಿ ಕೆಟ್ಟು ಹೋಗುತ್ತಿದೆ.

ಒಣಗಿಸಿ ಮಾರಲು ರೈತರು ಒಪ್ಪುತ್ತಿಲ್ಲ

ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ರೈತರು ಮಾರುಕಟ್ಟೆಗೆ ತಂದಿರುವ ಶೇಂಗಾ ಹಸಿಯಾಗಿರುವುದರಿಂದ ಸೂಕ್ತ ಬೆಲೆ ದೊರೆಯುವುದಿಲ್ಲ. ಆದ್ದರಿಂದ ‘ಗೋಡೌನ್ ನೀಡಲಾಗುವುದು. ಒಣಗಿಸಿ ಮುಂದಿನ ವಾರ ಮಾರಾಟ ಮಾಡಿ’ ಎಂದು ರೈತರಿಗೆ ಮನವಿ ಮಾಡಿದರೂ ಒಪ್ಪುತ್ತಿಲ್ಲ. ಸ್ಥಳೀಯ ಖರೀದಿದಾರರ ಜತೆ ಹಿರಿಯೂರು, ಚಳ್ಳಕೆರೆ ಮತ್ತು ಚಿತ್ರದುರ್ಗದಿಂದ ಖರೀದಿದಾರರನ್ನು ಕರೆಯಿಸಿ ರೈತರಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಹನುಮಂತರಾಜು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು