ಬುಧವಾರ, ಸೆಪ್ಟೆಂಬರ್ 22, 2021
28 °C

ತುಮಕೂರು: ಡೆಂಗಿ, ಚಿಕೂನ್ ಗುನ್ಯಾ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಮಳೆ ಹಾಗೂ ತಂಪಾದ ವಾತಾವರಣ ನಿರ್ಮಾಣವಾಗಿದ್ದು ಸೊಳ್ಳೆಗಳ ಸಂತತಿ ವೃದ್ಧಿಸುತ್ತಿದೆ. ಇದರಿಂದಾಗಿ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳು ಹೆಚ್ಚಳವಾಗುತ್ತಿವೆ.

ಜುಲೈ ತಿಂಗಳಲ್ಲೇ ಹೆಚ್ಚು ಪ್ರಕರಣ
ಗಳು ವರದಿಯಾಗಿದ್ದು, ಈ ಸಮಯದಲ್ಲಿ ಸತತವಾಗಿ ಜಿಡಿ ಮಳೆಯಾಗಿದೆ. ಐದಾರು ದಿನಗಳ ಕಾಲ ನಿರಂತರವಾಗಿ ಸೋನೆ ಮಳೆಯಾಗಿದ್ದು, ಚರಂಡಿ ಸಹಿತ ಎಲ್ಲೆಡೆ ನೀರು ಸಂಗ್ರಹವಾಗಿತ್ತು. ಈ ನೀರಿನಲ್ಲಿ ಸೊಳ್ಳೆಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡಿದ್ದು, ರೋಗ ಉಲ್ಬಣಿಸಲು ಕಾರಣವಾಗಿದೆ.

ತುಮಕೂರು ನಗರ ಸೊಳ್ಳೆಗಳ ಆಶ್ರಯ ತಾಣ. ಎಲ್ಲರ ಬಾಯಲ್ಲೂ ಬರುವುದು ಇಲ್ಲಿ ಸೊಳ್ಳೆಗಳು ಹೆಚ್ಚು ಎಂಬ ಮಾತು. ಇತ್ತೀಚೆಗೆ ಬಿದ್ದ ಮಳೆ ನೀರು ಸಾಕಷ್ಟು ಕಡೆಗಳಲ್ಲಿ ನಿಂತಿದ್ದು ಕಂಡುಬಂತು. ಜೂನ್ ವರೆಗೂ ನಿಯಂತ್ರಣದಲ್ಲಿ ಇದ್ದ ರೋಗಗಳು ಈಗ ಒಮ್ಮೆಲೆ ಹೆಚ್ಚಳವಾಗತೊಡಗಿವೆ. ಜುಲೈ ತಿಂಗಳಲ್ಲಿ ಡೆಂಗಿ 9, ಚಿಕೂನ್ ಗುನ್ಯಾ 12, ಮಲೇರಿಯಾ 3 ಪ್ರಕರಣಗಳು ವರದಿಯಾಗಿವೆ. ಜನವರಿಯಿಂದ ಜುಲೈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಜುಲೈ ತಿಂಗಳೊಂದರಲ್ಲೇ ಅರ್ಧದಷ್ಟು ಪ್ರಕರಣಗಳು ದಾಖಲಾಗಿವೆ. ಮಲೇರಿಯಾಗಿಂತ  ಡೆಂಗಿ, ಚಿಕೂನ್ ಗುನ್ಯಾ ದೃಢಪಡುವ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಕೋವಿಡ್‌ನಿಂದಾಗಿ ಪರೀಕ್ಷೆಗೆ ಒಳಪಡುವ ಪ್ರಮಾಣವೂ ಕಡಿಮೆ ಇದೆ. ಜ್ವರ, ಮೈಕೈ ನೋವು ಕಾಣಿಸಿಕೊಂಡರೂ ಔಷಧಿ ಅಂಗಡಿಗಳಲ್ಲಿ ಔಷಧಿ ತೆಗೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಂದಾಗುತ್ತಿಲ್ಲ. ಇಲ್ಲವಾಗಿದ್ದರೆ ರೋಗಿಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬರುತಿತ್ತು ಎನ್ನಲಾಗಿದೆ.

ಗ್ರಾಮೀಣ ಪ್ರದೇಶಗಳಿಗಿಂತ ತುಮಕೂರು ನಗರ ಸೇರಿದಂತೆ ನಗರ ಪ್ರದೇಶಗಳಲ್ಲೇ ಡೆಂಗಿ, ಚಿಕೂನ್ ಗುನ್ಯಾ ರೋಗ ವೇಗವಾಗಿ ಹರಡುತ್ತಿದೆ. ಮುನ್ನೆಚ್ಚರಿಕೆ ವಹಿಸುವುದರಿಂದ ರೋಗ ಬರದಂತೆ ತಡೆಯಬಹುದಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಿ, ಕಚ್ಚದಂತೆ ನೋಡಿಕೊಳ್ಳಬೇಕಿದೆ. ಅವುಗಳ ಸಂತತಿ ಬೆಳೆಯದಂತೆ ಎಚ್ಚರಿಕೆ ವಹಿಸಬೇಕು. ಶುದ್ಧ ನೀರೇ ಸೊಳ್ಳೆಗಳ ಸಂತತಿ ಹೆಚ್ಚಳದ ತಾಣವಾಗಿದ್ದು, ನೀರು ಒಂದೆಡೆ ಹೆಚ್ಚು ದಿನಗಳ ಕಾಲ ಸಂಗ್ರಹವಾಗದಂತೆ ಗಮನಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.