ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ಇಡಿ, ನಿಮ್ಮ ಋಣ ತೀರಿಸುವೆ: ಎಚ್.ಡಿ.ದೇವೇಗೌಡ

ಮಡಿವಾಳ ಸಮುದಾಯ ಆಯೋಜಿಸಿದ್ಧ ಅಭಿನಂದನಾ ಸಮಾರಂಭ
Last Updated 15 ಏಪ್ರಿಲ್ 2019, 15:16 IST
ಅಕ್ಷರ ಗಾತ್ರ

ತುಮಕೂರು: ‘ನನ್ನ ಎದುರಾಳಿಗಳ ಅಪಪ್ರಚಾರಕ್ಕೆ ದಯವಿಟ್ಟು ಕಿವಿಗೊಡಬೇಡಿ. ನಾನು ಹುಟ್ಟು ಹೋರಾಟಗಾರನಾಗಿದ್ದು, ಅವುಗಳನ್ನು ಎದುರಿಸುತ್ತೇನೆ. ಈ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಮಡಿವಾಳ ಸಮುದಾಯದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ನಾನು ಈ ಜಿಲ್ಲೆಗೆ ಹೇಮಾವತಿ ನೀರು ಹರಿಸಿಲ್ಲ. ನಾನು ಹೊರಗಿನ ಅಭ್ಯರ್ಥಿ, ಗೆಲ್ಲಿಸಿಬಿಟ್ಟರೆ ಮತ್ತೆ ಕ್ಷೇತ್ರದ ಕಡೆಗೆ ಬರುವುದಿಲ್ಲ ಎಂದು ಎದುರಾಳಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಸೋಲು, ಗೆಲುವು, ನಾನು ಮುಂದೇನಾಗುತ್ತೇನೋ ಅದು ದೈವೇಚ್ಛೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ’ ಎಂದು ಮನವಿ ಮಾಡಿದರು.

ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೇ ಘೋಷಣೆ ಮಾಡಿದ್ದೆ. ಆದರೆ, ದೇಶದ ಬೇರೆ ಬೇರೆ ರಾಜಕೀಯ ಪಕ್ಷಗಳ ನೇತಾರರು ಅಪೇಕ್ಷೆ ಪಟ್ಟು ಚುನಾವಣೆಗೆ ಸ್ಪರ್ಧಿಸಲು ಕೋರಿದ್ದರಿಂದ ಸ್ಪರ್ಧಿಸಬೇಕಾಯಿತು. ಸಂದರ್ಭ ತುಮಕೂರು ಕ್ಷೇತ್ರಕ್ಕೆ ನನ್ನನ್ನು ಕರೆದುಕೊಂಡು ಬಂದಿದೆ. ವಿಶ್ವಾಸವಿಟ್ಟು ಬೆಂಬಲಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದರು.

‘ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಿದ್ದು ನಾನು. ವಿಧಾನಸಭೆ, ಲೋಕಸಭೆಯಲ್ಲಿಯೂ ಮೀಸಲಾತಿ ತರಲು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗಲೂ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ತೀರ್ಮಾನದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಸಣ್ಣಪುಟ್ಟ ಜಾತಿಗಳಿಗೆ ಅಧಿಕಾರ ಸಿಕ್ಕಿದೆ’ ಎಂದರು.

ಈ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಿದೆ. ಸಿದ್ಧರಾಮಯ್ಯ ಹಾಗೂ ನಾನು ಒಟ್ಟಾಗಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದು ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ಹಾಗೂ ಮಡಿವಾಳ ಸಮಾಜದ ಮುಖಂಡ ಕೆ.ವಿ.ಅಮರನಾಥ್, ‘ ದೇಶದ 21 ರಾಜ್ಯಗಳಲ್ಲಿ ಮಡಿವಾಳ ಸಮಾಜವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ನಮ್ಮ ರಾಜ್ಯದಲ್ಲೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೆ ಅನ್ನಪೂರ್ಣಮ್ಮ ಆಯೋಗ ವರದಿ ಸಲ್ಲಿಸಿದೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪರಿಶಿಷ್ಟ ಜಾತಿಗೆ ಸೇರಿಸಲು ಸಹಾಯ ಮಾಡಬೇಕು’ ಎಂದು ದೇವೇಗೌಡರಿಗೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ರವೀಶ್, ಬಳ್ಳಾರಿ ರಾಮಣ್ಣ, ರಂಗಸ್ವಾಮಯ್ಯ, ಎಚ್.ನಿಂಗಪ್ಪ, ಕುಸುಮಾ ಜಗನ್ನಾಥ್ ವೇದಿಕೆಯಲ್ಲಿದ್ದರು. ಸಮಾಜದ ಮುಖಂಡ ಲಕ್ಷ್ಮಣ ಮನವಿ ಸಲ್ಲಿಸಿದರು. ರಮೇಶ್ ಬಾಬು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT