ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನೈಶ್ಚರ ದೇಗುಲ: ಸೌಕರ್ಯಗಳ ಕೊರತೆಯಿಂದ ತತ್ತರಿಸಿದ ಭಕ್ತರು

Last Updated 1 ಸೆಪ್ಟೆಂಬರ್ 2018, 17:29 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಶನೈಶ್ಚರ ದೇಗುಲಕ್ಕೆ ಮೂರನೇ ಶ್ರಾವಣ ಶನಿವಾರದ ಅಂಗವಾಗಿ ಲಕ್ಷಕ್ಕೂ ಹೆಚ್ಚಿನ ಭಕ್ತರು ಬಂದಿದ್ದರು.

ಪಟ್ಟಣದ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿದ್ದವು. ಚಳ್ಳಕೆರೆ, ಚಿತ್ರದುರ್ಗ, ತುಮಕೂರು ಇತ್ಯಾದಿ ಸ್ಥಳಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಈ ವಾರವೂ ಭಕ್ತರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ದರ್ಶನ ಪಡೆದರು.

ತೆಂಗಿನಕಾಯಿ, ಹೂವಿನ ವ್ಯಾಪಾರಿಗಳ ಕಾಟ:ದೇಗುಲ, ಎಸ್.ಎಸ್.ಕೆ ಸಮುದಾಯ ಭವನಕ್ಕೆ ಬಂದ ಭಕ್ತರನ್ನು ತಮ್ಮ ಬಳಿಯೇ ಕಾಯಿ, ಪೂಜಾ ಸಾಮಗ್ರಿಗಳನ್ನು ಕೊಳ್ಳುವಂತೆ ವ್ಯಾಪಾರಿಗಳು ಎಳೆದಾಡಿದರು. ವ್ಯಾಪಾರಿಗಳ ಕಾಟದಿಂದ ಭಕ್ತರು ಬೇಸರಗೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೂವು, ತೆಂಗಿನ ಕಾಯಿ, ಪೂಜಾ ಸಾಮಗ್ರಿಗಳಿಗೆ ದುಪ್ಪಟ್ಟು ಬೆಲೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ತೆಂಗಿನಕಾಯಿ, ಹೂವು ಮಾತ್ರವಲ್ಲದೆ, ಎಳ್ಳೆಣ್ಣೆ, ಹಾಕಲೇಬೇಕು, ನವ ಧಾನ್ಯಗಳನ್ನು ದೇಗುಲಕ್ಕೆ ಕೊಡಬೇಕು ಇಲ್ಲವಾದಲ್ಲಿ ಒಳ್ಳೆಯದಾಗುವುದಿಲ್ಲ ಎಂಬುದಾಗಿ ಭಕ್ತರಿಗೆ ಇಲ್ಲ ಸಲ್ಲದ ಭಯ ಹುಟ್ಟಿಸಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್‌ಗಳು:ಪ್ಲಾಸ್ಟಿಕ್ ಕವರ್‌ಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಬಾರದು ಎಂಬ ಕಾನೂನಿದ್ದರೂ, ದೇಗುಲ ವ್ಯಾಪ್ತಿಯ ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿಯೇ ಪೂಜಾ ಸಾಮಗ್ರಿಗಳನ್ನು ಕೊಡಲಾಗುತ್ತಿತ್ತು. ದೇಗುಲದ ಆವರಣದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಹಾಕಲಾಗಿತ್ತು.

ಪಾದಾಚಾರಿ ರಸ್ತೆ, ರಸ್ತೆ ವಿಭಜಕಗಳಲ್ಲಿ ಅಂಗಡಿಗಳು:ಪಾದಾಚಾರಿ ರಸ್ತೆ, ರಸ್ತೆ ವಿಭಜಕಗಳಿಗಳ ಸ್ಥಳದಲ್ಲಿಯೂ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿದ್ದರು. ಇದರಿಂದ ಪ್ರಮುಖ ರಸ್ತೆಯಲ್ಲಿಯೇ ಭಕ್ತರು ಸಂಚರಿಸಬೇಕಾಯಿತು. ದೇಗುಲ ಪ್ರದೇಶಕ್ಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಅಂಗವಿಕಲರು, ಮಕ್ಕಳು ಮಹಿಳೆಯರು ಅರ್ಧ ಕಿ.ಮೀ ದೂರದಿಂದ ದೇಗುಲಕ್ಕೆ ನಡೆದುಕೊಂಡು ಬರಬೇಕಾಯಿತು. ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ದೇಗುಲ ಪ್ರದೇಶಕ್ಕೆ ವಾಹನಗಳು ಬಾರದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರಿಂದ ಅಂಗವಿಕಲರು, ಮಕ್ಕಳು, ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಇಂತಹವರು ನೇರವಾಗಿ ದೇಗುಲದ ಬಳಿ ಬರಲು ಅವಕಾಶ ಕೊಡಬೇಕು ಎಂದು ಹೊಸದುರ್ಗದಿಂದ ದೇಗುಲಕ್ಕೆ ಬಂದಿದ್ದ ಅಂಗವಿಕಲ ಮಂಜಣ್ಣ ಅಭಿಪ್ರಾಯಪಟ್ಟರು.

ಹೊಸ ಬಟ್ಟೆಯನ್ನೂ ಬಿಚ್ಚಿಸಿ ಕಳುಹಿಸಿದರು:ದೇಗುಲದಲ್ಲಿ ಸ್ನಾನ ಮಾಡಿ, ಮಂಡೆ ತೆಗೆಸುವವರು ತಾವಾಗಿಯೇ ಬಟ್ಟೆಯನ್ನು ಬಿಟ್ಟು ಹೋದರೆ ಅಂತಹ ಬಟ್ಟೆಗಳನ್ನು ತೆಗೆದುಕೊಳ್ಳುವಂತೆ ದೇಗುಲ ಸಮಿತಿ ಹರಾಜು ನಡೆಸುತ್ತದೆ. ಆದರೆ ಕೆಲ ಕಿಡಿಗೇಡಿಗಳು ದೇಗುಲದ ವಸತಿ ಗೃಹದ ಬಳಿ ಬರುವ ಭಕ್ತರಿಗೆಲ್ಲರಿಗೂ ಧರಿಸಿರುವ ಬಟ್ಟೆ ಬಿಟ್ಟು ಹೋಗಿ, ಇಲ್ಲವಾದಲ್ಲಿ ಶನಿ ಹೆಗಲೇರುತ್ತಾನೆ ಎಂಬಿತ್ಯಾದಿ ಮೌಢ್ಯವನ್ನು ತುಂಬಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕೆಲ ಭಕ್ತರು ಆರೋಪಿಸಿದರು. ಬೆಲೆ ಬಾಳುವ ರೇಷ್ಮೆ ಸೀರೆ, ರೇಷ್ಮೆ ಪಂಚೆ ಧರಿಸಿರುವವರನ್ನು ಗುರಿಯಾಗಿರಿಸಿಕೊಂಡು ಬಟ್ಟೆ ಕಳಚಿ ಕೊಟ್ಟು ಹೋಗುವಂತೆ ಮಾಡಲಾಗುತ್ತಿದೆ. ಇಂತಹ ಕೃತ್ಯಗಳಿಗೆ ದೇಗುಲ ಸಮಿತಿ ಕಡಿವಾಣ ಹಾಕಬೇಕು ಎಂದು ಚಳ್ಳಕೆರೆಯ ಶ್ರೀನಿವಾಸ್ ಒತ್ತಾಯಿಸಿದರು.

ದೇಗುಲಕ್ಕೆ ಕೋಟ್ಯಂತರ ರೂಪಾಯಿ ಆದಾಯವಿದೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು. ಧರ್ಮಸ್ಥಳ, ಶೃಂಗೇರಿ, ಹೊರನಾಡಿನಲ್ಲಿ ಮಾಡಿದಂತೆ ಭಕ್ತರು ಸರದಿಯಲ್ಲಿ ನಿಲ್ಲಲು ಶಾಶ್ವತ ನೆರಳಿನ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದವು.

ಖಾಸಗಿ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದಕ್ಕಾಗಿ ಕೆಲವರು ₹ 50 ರಿಂದ ₹ 200 ಈ ವಾರವೂ ವಸೂಲಿ ಮಾಡಿದರು. ಪಟ್ಟಣದ ಗೋಪಾಲ್ ಗೆಳೆಯರ ಬಳಗ ಸೇರಿದಂತೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಉಪಹಾರ, ಕುಡಿಯುವ ನೀರು, ಮಜ್ಜಿಗೆ ವಿತರಿಸಿದರು.

ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕೋಟ್ಯಾಂತರ ರೂಪಾಯಿ ಆದಾಯವಿದೆ. ಬರುವ ಭಕ್ತರಿಗನುಗುಣವಾಗಿ ಕುಡಿಯುವ ನೀರು ಶೌಚಾಲಯದ ಸೌಕರ್ಯ ಕಲ್ಪಿಸಬೇಕು.
-ಲಿಂಗಣ್ಣ, ಬಳ್ಳಾರಿ.

ಧರ್ಮಸ್ಥಳ ಸೇರಿದಂತೆ ಹಲವೆಡೆ ಸರದಿಯಲ್ಲಿ ನಿಲ್ಲುವ ಭಕ್ತರಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸಲಾಗಿದೆ. ಇಲ್ಲಿ ಪರದೆ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ವ್ಯಾಪಾರಿಗಳ ಕಾಟಕ್ಕೆ ಕಡಿವಾಣ ಹಾಕಬೇಕು.
- ಮುಕೇಶ್, ಬರಮಸಾಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT