ಮಂಗಳವಾರ, ಅಕ್ಟೋಬರ್ 27, 2020
28 °C
ತಾಲ್ಲೂಕಿನಲ್ಲಿ ಉಲ್ಬಣಿಸಿದ ರಸಗೊಬ್ಬರದ ಸಮಸ್ಯೆ

ಕುಣಿಗಲ್: ಪೊಲೀಸ್ ಕಾವಲಿನಲ್ಲಿ ರಸಗೊಬ್ಬರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನಲ್ಲಿ ರಸಗೊಬ್ಬರದ ಸಮಸ್ಯೆ ಹೆಚ್ಚಾಗಿದ್ದು, ಶುಕ್ರವಾರ ಟಿಎಪಿಎಂಎಸ್‌ನಲ್ಲಿ ಪೊಲೀಸ್ ಕಾವಲಿನಲ್ಲಿ ರಸಗೊಬ್ಬರ ವಿತರಣೆ ಮಾಡಲಾಯಿತು.

ರಸಗೊಬ್ಬರ ಲಾರಿ ಬರುವ ಮುನ್ನವೇ ಬೆಳಿಗ್ಗೆಯಿಂದಲೇ ನೂರಾರು ರೈತರು ಟಿಎಪಿಎಂಎಸ್ ಮುಂದೆ ಜಮಾವಣೆಗೊಂಡಿದ್ದರು. ಮಧ್ಯಾಹ್ನ ಲಾರಿ ಬರುತ್ತಿದ್ದಂತೆ ರೈತರ ಸಂಖ್ಯೆಯೂ ಹೆಚ್ಚಾಗಿ, ನಿಯಂತ್ರಿಲಾಗದೆ ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಪೊಲೀಸರ ಮೊರೆ ಹೋದರು.

ರೈತರಿಂದ ಆಧಾರ್ ಪ್ರತಿ ಪಡೆದು ನಂತರ ಹೆಬ್ಬೆಟಿನ ಗುರುತು ಪಡೆದು ಗೊಬ್ಬರ ವಿತರಣೆ ಮಾಡಬೇಕಾಗಿತ್ತು. ಸಹಕಾರ ಸಂಘದವರು ಮತ್ತು ಅಂಗಡಿಯ ಮಾಲೀಕರು ನಿಯಮಗಳನ್ನು ಪಾಲಿಸದೆ ಕೇವಲ ಆಧಾರ್ ಪ್ರತಿಗಳನ್ನು ಪಡೆದು ಗೊಬ್ಬರ ವಿತರಣೆ ಮಾಡುತ್ತಿದ್ದರು. ಇದರಿಂದ ಅನರ್ಹರೂ ರೈತರ ಹೆಸರಿನ ಆಧಾರ್ ಪ್ರತಿ ನೀಡಿ ಗೊಬ್ಬರ ಪಡೆದುಕೊಳ್ಳುತ್ತಿದ್ದರು. ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ನಂತರ ಲಾಭ ಪಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಸಮಸ್ಯೆ ಹೆಚ್ಚಾಗಿ ತೀವ್ರ ಆರೋಪಗಳು ಬಂದ ಕಾರಣ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ತಿಳಿಸಿದ್ದಾರೆ.

ಶುಕ್ರವಾರ ರೈತರಿಂದ ಆಧಾರ್ ಪ್ರತಿ ಪಡೆದು ಆಧಾರ್‌ನಲ್ಲಿ ನಮೂದಾಗಿರುವ ಹೆಸರಿನವರ ಬಳಿ ಹೆಬ್ಬೆಟ್ಟಿನ ಮುದ್ರೆ ಪಡೆದು ವಿತರಣೆಗೆ ಮುಂದಾದಾಗ ಬೆಳಿಗ್ಗೆಯಿಂದ ಕಾದಿರುವ ರೈತರು ತಡವಾಗುತ್ತದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಆದರೂ ಅಧಿಕಾರಿಗಳು ನಿಯಮಾವಳಿ ಪ್ರಕಾರವೇ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿ ವಿತರಣೆಗೆ ಕ್ರಮ ತೆಗೆದುಕೊಂಡರು.

ಯೂರಿಯಾಕ್ಕಾಗಿ ರಸ್ತೆಗಿಳಿದ ರೈತರು
ಕುಣಿಗಲ್
: ರಸಗೊಬ್ಬರಕ್ಕಾಗಿ ರೈತರು ಟಿಎಪಿಎಂಎಸ್ ಕಚೇರಿ ಮುಂಭಾಗ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆಯಿತು. ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.

ಟಿಎಪಿಎಂಎಸ್ ಕಚೇರಿಗೆ ಶುಕ್ರವಾರ ಮೂರು ಲಾರಿ ಲೋಡ್ ಯೂರಿಯೂ ಗೊಬ್ಬರ ಬಂದಿದೆ. ಸಂಜೆವೆರೆಗೂ ಎರಡು ಲೋಡ್ ವಿತರಣೆ ಮಾಡಿದ್ದು, ರಾತ್ರಿಯಾದ ಕಾರಣ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಹಕಾರ ಸಂಘದವರು ಶನಿವಾರ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ರೈತರು ಬೆಳಿಗ್ಗೆಯಿಂದ ಕಾದಿದ್ದೇವೆ. ಈಗಲೇ ವಿತರಿಸಿ ಎಂದು ಪಟ್ಟು ಹಿಡಿದರು. ಟಿಎಪಿಎಂಎಸ್ ಕಚೇರಿ ಮುಂಭಾಗದ ಹಳೇ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ಪ್ರತಿಭಟನೆ ನಡೆಸಿದರು.

20 ನಿಮಿಷ ಸಂಚಾರಕ್ಕೆ ಅಡಚಣೆ ಆಯಿತು. ನಂತರ ಪಿಎಸ್ಐ ವಿಕಾಸ್ ಗೌಡ ಸಿಬ್ಬಂದಿಯೊಂದಿಗೆ ಬಂದು ರೈತರನ್ನು ಸಮಾಧಾನಪಡಿಸಿ ಚದುರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು