ಭಾನುವಾರ, ನವೆಂಬರ್ 29, 2020
21 °C
ಅಂಗಡಿಗಳಲ್ಲಿ ಶನಿವಾರ ಬೆಳಿಗ್ಗೆಯೇ ಪೂಜೆಯ ಸಂಭ್ರಮ

ದೀಪಾವಳಿ ಸಂಭ್ರಮ; ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ದೀಪಾವಳಿ ಪ‍್ರಯುಕ್ತ ನಗರದ ಅಂತರಸನಹಳ್ಳಿ ಮಾರುಕಟ್ಟೆ ಶನಿವಾರವೂ ಜನರಿಂದ ಗಿಜಿಗುಡುತ್ತಿತ್ತು. ಹೂ, ಹಣ್ಣು, ಬಾಳೆ ದಿಂಡು ಸೇರಿದಂತೆ ಹಬ್ಬಕ್ಕೆ ಅಗತ್ಯವಿದ್ದ ಸಾಮಗ್ರಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರಿದ್ದರು. ಅಲ್ಲದೆ ನಗರದ ಕೆಲವು ಮಾಲೀಕರು ಶನಿವಾರವೇ ಅಂಗಡಿಗಳಲ್ಲಿ ಪೂಜೆ ಸಲ್ಲಿಸಿ ಜನರಿಗೆ ಸಿಹಿ ಹಂಚಿದರು.

ಅಂತರಸನಹಳ್ಳಿ ಮಾರುಕಟ್ಟೆ, ಎಸ್‌.ಎಸ್‌.ಪುರಂ, ಶೆಟ್ಟಿಹಳ್ಳಿ, ಜೆ.ಸಿ.ರಸ್ತೆ ಹೀಗೆ ವಿವಿಧ ಕಡೆಗಳ ರಸ್ತೆ ಬದಿಯಲ್ಲಿ ಶುಕ್ರವಾರದಿಂದಲೂ ಹೂ, ಹಣ್ಣು, ಬಾಳೆ ಕಂದಿನ ವ್ಯಾಪಾರ ಜೋರಾಗಿತ್ತು. ಹಬ್ಬದ ಪ್ರಯುಕ್ತ ನಗರದ ಬಿ.ಎಚ್‌.ರಸ್ತೆಯಲ್ಲಿರುವ ಹಣ್ಣಿನ ಅಂಗಡಿಗಳ ಮುಂದೆ ಸೇಬು, ದಾಳಿಂಬೆ, ಬಾಳೆ, ಸೀಬೆ, ಕಿತ್ತಳೆ ಹೀಗೆ ನಾನಾ ಹಣ್ಣುಗಳ ರಾಶಿಯನ್ನು ವ್ಯಾಪಾರಿಗಳು ಮಾಡಿದ್ದರು.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದಲೂ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಜನಜಂಗುಳಿ ಹೆಚ್ಚಿದೆ. ಸೇವಂತಿಗೆ, ಗುಲಾಬಿ ಸೇರಿದಂತೆ ನಾನಾ ಬಗೆಯ ಹೂಗಳ ಖರೀದಿಗೆ ಜನರು ಹೆಚ್ಚಿನದಾಗಿಯೇ ಸೇರಿದ್ದರು.

ಕೆ.ಜಿ ಸೇಬು ಗುಣಮಟ್ಟ ಆಧರಿಸಿ ₹ 140ರಿಂದ 180ರ ವರೆಗೂ ಇತ್ತು. ಏಲಕ್ಕಿ ಬಾಳೆ ಹಣ್ಣು ಕೆ.ಜಿ ₹ 60, ಕಿತ್ತಳೆ ₹ 50 ಇತ್ತು. ಈ ಹಣ್ಣುಗಳೇ ಪ್ರಮುಖವಾಗಿ ಮಾರಾಟವಾಗುತ್ತಿದ್ದವು. ಪೂಜೆಯ ಕಾರಣದಿಂದ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ಹೂವಿನ ಹಾರಗಳೂ ಅಷ್ಟೇ ಗಾತ್ರದ ಆಧಾರದಲ್ಲಿ ₹ 60ರಿಂದ 150ರವರೆಗೂ ಮಾರಾಟವಾದವು.

ಪೂಜೆ ಸಂಭ್ರಮ: ಶನಿವಾರ ಬೆಳ್ಳಂ ಬೆಳಿಗ್ಗೆಯೇ ಎಂ.ಜಿ.ರಸ್ತೆ, ಎಸ್‌.ಎಸ್‌.ಪುರಂ, ಬಿ.ಎಚ್‌.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿಗಳ ಮಾಲೀಕರು, ಬಾಗಿಲು ತೆರೆದು ಅಂಗಡಿಗಳನ್ನು ಸ್ವಚ್ಛಗೊಳಿಸಿದರು. ಬೆಳಿಗ್ಗೆಯೇ ಪೂಜೆ ನಡೆಸಿ ಜನರಿಗೆ ಸಿಹಿ ವಿತರಿಸಿದರು. ಚಿನ್ನಾಭರಣ ಅಂಗಡಿಗಳ ಮಾಲೀಕರು ಪ್ರಮುಖವಾಗಿ ಪೂಜೆ ನೆರವೇರಿಸಿದರು. ಭಾನುವಾರ ಲಕ್ಷ್ಮಿಪೂಜೆ ಮಾಡಲು ಕೆಲವು ಅಂಗಡಿಗಳ ಮಾಲೀಕರು ಶನಿವಾರವೇ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು