ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

398 ಗ್ರಾಮಗಳಲ್ಲಿ ಮನೆಮನೆ ಗಂಗೆ ನೀರು ಪೂರೈಕೆ ಯೋಜನೆ: ಕಳಪೆಯ ಕೂಪವಾದ ಕಾಮಗಾರಿ

₹115 ಕೋಟಿ ಮಂಜೂರು
Published 11 ಆಗಸ್ಟ್ 2024, 6:20 IST
Last Updated 11 ಆಗಸ್ಟ್ 2024, 6:20 IST
ಅಕ್ಷರ ಗಾತ್ರ

ತುರುವೇಕೆರೆ: ಜಲಜೀವನ್ ಮಿಷನ್ (ಜೆಜೆಎಂ)ಯೋಜನೆಯಡಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ನಿರುಪಯುಕ್ತವಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಶ್ನಿಸುತ್ತಿಲ್ಲ ಎಂದು  ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲ್ಲೂಕಿನ 398 ಗ್ರಾಮಗಳಲ್ಲಿ ಮನೆಮನೆ ಗಂಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಗುರಿ ಹೊಂದಲಾಗಿದೆ. ಇದಕ್ಕಾಗಿ ₹115 ಕೋಟಿ ಮಂಜೂರಾಗಿದ್ದು 27 ಗ್ರಾಮ ಪಂಚಾಯಿತಿಗಳಲ್ಲಿ ಶೇ 25ರಷ್ಟು ಕಾಮಗಾರಿ ಪ್ರಾರಂಭವಾಗಿದೆ.

ಗುಣಮಟ್ಟದ ಪೈಪ್ ಹಾಕದೆ ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದ್ದಾರೆ. ಕೆಲ ನಲ್ಲಿಗಳು ಹಾಳಾಗಿವೆ. ನಲ್ಲಿಯ ಸಣ್ಣ ಪೈಪ್ ಕೂಡ ಗುಣಮಟ್ಟದಲ್ಲ. ಕೆಲವೆಡೆ ಮನೆಯ ಗೋಡೆ, ಚರಂಡಿ ಪಕ್ಕ ಎಲ್ಲೆಂದರಲ್ಲಿ ಸಿಮೆಂಟ್ ಸ್ಲ್ಯಾಬ್‌ಗಳನ್ನು ಹಾಕಿ ನಲ್ಲಿ ಅಳವಡಿಸಿದ್ದಾರೆ. ಸಿಸಿ ರಸ್ತೆಗಳನ್ನು ಯದ್ವಾತದ್ವಾ ಕಿತ್ತು ಹಾಕಲಾಗಿದೆ. ರಸ್ತೆಯನ್ನು ಪೈಪ್ ಹಾಕುವ ಜಾಗಕ್ಕೆ ಅನುಗುಣವಾಗಿ ಕತ್ತರಿಸದೆ ಜಸಿಬಿ ಬಳಸಿ ಅಗೆಯಲಾಗಿದೆ... ಹೀಗೆ ಹತ್ತಾರ ಆರೋಪಗಳನ್ನು ಜನರು ಥಟಥಟನೆ ಹೇಳುತ್ತಾರೆ.

‘ಮುನಿಯೂರು ಗ್ರಾಮದಲ್ಲಿ ಕಾಮಗಾರಿ ಅವೈಜ್ಞಾನಿಕ ಹಾಗೂ ಅಪೂರ್ಣವಾಗಿದೆ. ಪೈಪ್ ಅನ್ನು ಮೂರು ಅಡಿ ಆಳಕ್ಕೆ ಹಾಕದೆ ಅರ್ಧ ಇಂಚಿಗೆ ಅಳವಡಿಸಲಾಗಿದೆ. ಪೈಪ್‌ ಅಳವಡಿಸುವಾಗ ಚರಂಡಿಗಳನ್ನು ವಿರೂಪಗೊಳಿಸಿ ಮಳೆ ನೀರು ಸರಾಗವಾಗಿ ಹೋಗದಂತೆ ಮಾಡಿದ್ದಾರೆ. ಇದರಿಂದ ಮನೆಗಳಿಗೆ ನೀರು ನಗ್ಗುವಂತಾಗಿದೆ ಈ ಬಗ್ಗೆ ಎಇಇ ನರಸಿಂಹಮೂರ್ತಿ, ಎಂಜಿನಿಯರ್‌ಗೆ ದೂರು ನೀಡಿದಾಗ ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸುತ್ತೇವೆ ಎಂದಿದ್ದರು. ನಾಲ್ಕು ತಿಂಗಳು ಕಳೆದರೂ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಗ್ರಾಮಸ್ಥರಾದ ಅಶ್ವತ್ ಕುಮಾರ್, ಸಾಗರ್, ಯೋಗಾನಂದ, ಪ್ರವೀಣ್, ದಿಲೀಪ್, ಹೇಮಂತ್ ಶಿವಕುಮಾರ್ ದೂರಿದರು.

ದಬ್ಬೇಘಟ್ಟ, ಗೊಟ್ಟಿಕೆರೆ, ಬೀಚ್ನಹಳ್ಳಿ ಪುರ, ಬೆಂಡಿಕೆರೆ, ಅರೇಹಳ್ಳಿ, ಬೆಂಡಿಕೆರೆ ಹೊಸೂರು, ಹಿಂಡುಮಾರನಹಳ್ಳಿ ಗ್ರಾಮಗಳಲ್ಲೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಹಿಂಡುಮಾರನಹಳ್ಳಿಯಲ್ಲಿ ಪೈಪ್‌ಲೈನ್‌ ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ. ಮಣ್ಣು ಹಾಕಿರುವುದರಿಂದ ಮಳೆಗಾಲದಲ್ಲಿ ಗುಂಡಿ ಬೀಳುತ್ತಿದೆ. ಗೊಟ್ಟಿಕೆರೆ ಗ್ರಾಮದಲ್ಲಿ ನಲ್ಲಿಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಕಾಮಗಾರಿ ಮುಗಿದಿರುವ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಳು ಮಾಡಲಾಗಿದೆ. ಕೆಲವೆಡೆ ನೀರು ಸರಬರಾಜು ಮಾಡಲು ಒವರ್‌ಹೆಡ್ ಟ್ಯಾಂಕ್ ಕಟ್ಟಿಲ್ಲ, ಕೆಲವೆಡೆ ಕಟ್ಟಿದ್ದರೂ ಗುಣಮಟ್ಟದಿಂದ ಕೂಡಿಲ್ಲ ಎನ್ನುತ್ತಾರೆ ಮಂಜುನಾಥ್.

ಗೂರಲಮಠ, ಮಲ್ಲೇನಹಳ್ಳಿ, ಹಾಲದಹಳ್ಳಿ, ವಡಕೆಘಟ್ಟ ಗ್ರಾಮಗಳಲ್ಲಿ ಕಾಮಗಾರಿಯೇ ಆಗಿಲ್ಲ ಎನ್ನುವುದು ವೇಣುಗೋಪಾಲ್ ಅವರ ಆರೋಪ.

‘ಮಾದಿಹಳ್ಳಿ, ಕಣತೂರು, ಮಾವಿನಹಳ್ಳಿ, ಮಣೆಚಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಒವರ್ ಹೆಡ್‌ ಟ್ಯಾಂಕ್‌ಗಳು ಸಂಪೂರ್ಣ ಕಳಪೆಯಾಗಿವೆ. ಕಾಮಗಾರಿಯಲ್ಲಿ ಬಳಸಿರುವ ಸಾಮಗ್ರಿಗಳು ಎರಡೇ ವರ್ಷಗಳಲ್ಲಿ ಹಾಳಾಗುತ್ತವೆ. ಅಜ್ಜನಹಳ್ಳಿ ಗ್ರಾಮದಲ್ಲೂ ಸರಿಯಾಗಿ ಕೆಲಸವಾಗಿಲ್ಲ. ಅರಿಶಿಣದಲ್ಲಿ ಗ್ರಾಮದೊಳಗಿನ ಎಲ್ಲ ಮನೆಗಳಿಗೂ ನಲ್ಲಿ ಹಾಕಿದ್ದಾರೆ ಆದರೆ ಊರಿಂದ ನೂರು ಮೀಟರ್ ದೂರದ ಮನೆಗಳಿಗೆ ನಲ್ಲಿ ಸಂಪರ್ಕವೇ ಇಲ್ಲ’ ಎಂದು ಮೋಹನ್ ಸಿ.ವಿ ದೂರಿದರು.

ಗೋಣಿತುಮಕೂರು ಗ್ರಾಮ ಪಂಚಾಯಿತಿಯ 13 ಹಳ್ಳಿಗಳಲ್ಲಿ ಅಧಿಕಾರಿಗಳು ಸರ್ವೆ ಮಾಡಿದ್ದು, ಇನ್ನೂ ಕೆಲಸವೇ ನಡೆದಿಲ್ಲ. ದಂಡಿನಶಿವರ ಪಂಚಾಯಿತಿಯ ಎಂಟು ಗ್ರಾಮಗಳಲ್ಲಿ  ಕಾಮಗಾರಿ ಪ್ರಾರಂಭವೇ ಆಗಿಲ್ಲ ಎನ್ನುತ್ತಾರೆ ದಂಡಿನಶಿವರ ಕುಮಾರ್.

ವಡವನಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಸೊರವನಹಳ್ಳಿ, ಮಣೆಚಂಡೂರು, ಶೆಟ್ಟಿಗೊಂಡನಹಳ್ಳಿ, ಭೈತರ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಜೆಜೆಎಂ ಕಾಮಗಾರಿಯ ನಿರೀಕ್ಷೆಯಲ್ಲಿದ್ದಾರೆ.

ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮ ಹಾಗೂ ಬಾಣಸಂದ್ರ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳಲ್ಲಿ ಮನೆಮನೆ ಗಂಗೆ ನಲ್ಲಿ ನೀರಿನ ಕಾಮಗಾರಿ ಪ್ರಾರಂಭವಾಗಬೇಕಿದೆ. ತಾಲ್ಲೂಕಿನ ಗಡಿಭಾಗದ ಸಂಪಿಗೆ ಗ್ರಾಮದಲ್ಲಿ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.

ಮಾಯಸಂದ್ರ ಹೋಬಳಿಯ ಕೆಲ ಗ್ರಾಮಗಳಲ್ಲಿ ಸಿಸಿ ರಸ್ತೆ ಅಗೆದಿರುವುದು
ಮಾಯಸಂದ್ರ ಹೋಬಳಿಯ ಕೆಲ ಗ್ರಾಮಗಳಲ್ಲಿ ಸಿಸಿ ರಸ್ತೆ ಅಗೆದಿರುವುದು
ಮುನಿಯೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಾಗಿ ತೆಗೆದ ಗುಂಡಿಯನ್ನು ಕೇವಲ ಮಣ್ಣಿನಲ್ಲಿ ಮುಚ್ಚಿರುವುದು
ಮುನಿಯೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಾಗಿ ತೆಗೆದ ಗುಂಡಿಯನ್ನು ಕೇವಲ ಮಣ್ಣಿನಲ್ಲಿ ಮುಚ್ಚಿರುವುದು
ಮುನಿಯೂರು ಗ್ರಾಮದಲ್ಲಿ ಮನೆಯೊಂದರ ಗೋಡೆಗೆ ನಲ್ಲಿ ಸಂಪರ್ಕ
ಮುನಿಯೂರು ಗ್ರಾಮದಲ್ಲಿ ಮನೆಯೊಂದರ ಗೋಡೆಗೆ ನಲ್ಲಿ ಸಂಪರ್ಕ
ಸಾಗರ್
ಸಾಗರ್

51 ಸಾವಿರ ನಲ್ಲಿ ಅಳವಡಿಕೆ

ತುರುವೇಕೆರೆಯಲ್ಲಿ 398 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 85 ಗ್ರಾಮಗಳಲ್ಲಿ ಕಾಮಗಾರಿ ಪ್ರಾಂಭವಾಗಿದೆ. 25 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. 65 ಗ್ರಾಮಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕು. 124 ಒವರ್‌ಹೆಡ್ ಟ್ಯಾಂಕ್ ಮತ್ತು 51 ಸಾವಿರ ನಲ್ಲಿಗಳನ್ನು ಹಾಕಲಾಗಿದೆ. ರವಿಕುಮಾರ್ ಎಂಜಿನಿಯರ್ ಕುಡಿಯುವ ನೀರು ಇಲಾಖೆ ಅವೈಜ್ಞಾನಿಕ ಕಾಮಗಾರಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿಗಳಲ್ಲಿ ಬಳಸಿರುವ ಸಾಮಗ್ರಿಗಳು ಸಂಪೂರ್ಣ ಕಳಪೆಯಾಗಿವೆ. ಕಾಮಗಾರಿ ನೆಪದಲ್ಲಿ ಹೊಸ ಸಿಸಿ ರಸ್ತೆಗಳನ್ನು ಮನಸೋ ಇಚ್ಛೆ ಕೀಳಲಾಗಿದೆ. ಕಾಮಗಾರಿ ಅವೈಜ್ಞಾನಿಕವಾಗಿದೆ. ಎಂಜಿನಿಯರ್ ಎಇಇ ಕರ್ತವ್ಯ ಲೋಪವೆಸಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಶಿಸ್ತು ಕ್ರಮ ಜರುಗಿಸಬೇಕು. ಸಾಗರ್ ಕರ್ನಾಟಕ ರಾಜ್ಯ ರೈತ ಸಂಘ ಮುನಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT