ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ | ಬರ: ತೆಂಗು, ಅಡಿಕೆ ಬೆಳೆಗಾರರು ಕಂಗಾಲು

Published 18 ಮಾರ್ಚ್ 2024, 7:01 IST
Last Updated 18 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ತುರುವೇಕೆರೆ: ತೆಂಗು ನಾಡಿನ ತುರುವೇಕೆರೆಯಲ್ಲಿ ಮಳೆಯ ಕೊರತೆಯಿಂದ ತೆಂಗು, ಅಡಿಕೆ ಬೆಳೆಗಳು ಒಣಗುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.

ಮತ್ತೊಂದೆಡೆ ತಾಲ್ಲೂಕಿನ ಅಲ್ಲಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಜನ, ಜಾನುವಾರು ಪರದಾಡುವಂತಾಗಿದೆ. ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು ಮುಂಗಾರು ಮತ್ತು ಹಿಂಗಾರಿನ ಮಳೆ ಕೊರತೆಯಿಂದ ಅಂರ್ತಜಲದ ಮಟ್ಟ ಕುಸಿದಿದೆ. ನೀರಿನ ಆಕರ ಮೂಲಗಳಾದ ಕೆರೆಕಟ್ಟೆ, ಬಾವಿ ಮತ್ತು ಕೊಳವೆ ಬಾವಿಗಳು ಭಾಗಶಃ ಬತ್ತಿಹೋಗಿವೆ. ಪಟ್ಟಣದ ಮೂಲಕ ಶಿಂಷಾ ನದಿ ಹರಿದರೂ ತಾಲ್ಲೂಕಿನಲ್ಲಿ ನೀರಿನ ಬರ ನೀಗಿಲ್ಲ.

ಈ ಬಾರಿ ವಾಡಿಕೆಯಂತೆ 66.59 ಸೆಂ.ಮೀಟರ್ ಮಳೆ ಬೀಳಬೇಕಾದದ್ದು ಕೇವಲ 29.2 ಸೆಂ. ಮೀಟರ್ ಮಾತ್ರ ಬಿದ್ದಿದ್ದು ಅಂರ್ತಜಲದ ಮಟ್ಟ ಸಂಪೂರ್ಣ ಕುಸಿಯುತ್ತಿದೆ. ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ಸರಿಯಾಗಿ ನೀರು ಬರುತ್ತಿಲ್ಲ. ಕೆರೆಕಟ್ಟೆಯ ಆಸರಿನ ಕೊಳವೆ ಬಾವಿಗಳಲ್ಲಿ ನೀರು ನಿಂತು ನಿಂತು ಬರುತ್ತಿದೆ. ಉಳಿದೆಡೆ ರೈತರ ಕೊಳವೆ ಬಾವಿಗಳಲ್ಲಿ ಸಂಪೂರ್ಣ ನೀರು ನಿಂತಿದೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ದೂರದ ತೋಟದ ಕೊಳವೆ ಬಾವಿಗಳ ಕಡೆ ಹೆಂಗಸರು, ಗಂಡಸರು ಸೈಕಲ್, ಬೈಕ್ ಮತ್ತು ತಲೆಯ ಮೇಲೆ ನೀರು ಹೊತ್ತು ತರುತ್ತಿದ್ದಾರೆ.

ಹರಿಯದ ಹೇಮೆ ನೀರು: ತಾಲ್ಲೂಕಿನ 243 ಗ್ರಾಮಗಳ ಪೈಕಿ ಸುಮಾರು ಶೇ 50ರಷ್ಟು ಗ್ರಾಮಗಳು ಒಣಭೂಮಿ ಪ್ರದೇಶಗಳಾಗಿವೆ. ಉಳಿದ ಭಾಗದಲ್ಲಿ ಹೇಮಾವತಿ ನಾಲಾ ನೀರು ಹರಿಯುತ್ತದೆ. ಆದರೆ ಈ ಬಾರಿ ಹೇಮಾವತಿ ನಾಲಾ ನೀರು ತುರುವೇಕೆರೆಗೆ ನಿಗದಿಪಡಿಸಿದಂತೆ ಹರಿಯದೆ ಮಲ್ಲಾಘಟ್ಟ, ಸಾರಿಗೆಹಳ್ಳಿ, ಅಮ್ಮಸಂದ್ರ, ಮಾಯಸಂದ್ರ, ಕೊಂಡಜ್ಜಿ, ಸಂಪಿಗೆ ಸೇರಿದಂತೆ ಬಹುತೇಕ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ.

ತಾಲ್ಲೂಕಿನ 40 ಕೆರೆಗಳು ಹೇಮಾವತಿ ನಾಲಾ ನೀರಿನಿಂದ ತುಂಬುತ್ತವೆ. ಇವುಗಳಲ್ಲಿ ಕುಡಿಯುವ ನೀರಿಗಾಗಿ ಮಲ್ಲಾಘಟ್ಟ, ತಂಡಗ ಮತ್ತು ಮಾಯಸಂದ್ರ ಕೆರೆಗಳು ಮಾತ್ರ ಬಳಕೆಯಾಗುತ್ತಿವೆ. ಮಾರ್ಚ್ 12ರಿಂದ ತುಮಕೂರಿನ ಬುಗಡನಹಳ್ಳಿ ಕೆರೆಗೆ ಕುಡಿಯುವ ನೀರಿಗಾಗಿ ಹೇಮೆಯ ನೀರು ಬಿಡಲಾಗುತ್ತಿದೆ. ಆದರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಅಭಾವವಿದ್ದರೂ ಯಾವ ಕೆರೆಗಳಿಗೂ ನೀರು ಹರಿಸುತ್ತಿಲ್ಲ ಎಂಬುದು ಜನಪ್ರತಿನಿಧಿಗಳ ದೂರು.

ಕೊಳವೆ ಬಾವಿಗಳಿವೆ, ನೀರಿಲ್ಲ: ತಾಲ್ಲೂಕಿನಲ್ಲಿ 1.68 ಲಕ್ಷ ಜನಸಂಖ್ಯೆ ಇದೆ. 42 ಸಾವಿರ ಕುಟುಂಬಗಳಿವೆ. ಇವೆಲ್ಲವೂ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಹೆಚ್ಚಾಗಿ ಅವಲಂಬಿಸಿವೆ. ಇವುಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳದ್ದು. ತಾಲ್ಲೂಕಿನಲ್ಲಿ ಸುಮಾರು 1,063 ಕೊಳವೆ ಬಾವಿಗಳು, 1,000ಕ್ಕೂ ಹೆಚ್ಚು ಹ್ಯಾಂಡ್ ಜಗ್, ಸುಮಾರು 1,200 ಕ್ಕೂ ಹೆಚ್ಚು ಕಿರು ನೀರು ಸರಬರಾಜಿನ ಸಿಸ್ಟನ್ ಮತ್ತು ಸುಮಾರು 96 ಓವರ್ ಹೆಡ್ ಟ್ಯಾಂಕರ್ ಇವೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಇಷ್ಟೆಲ್ಲಾ ಇದ್ದರೂ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ. ವಿವಿಧ ಯೋಜನೆಯಡಿ ಸುಮಾರು 88 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 4 ಘಟಕಗಳು ಕೆಟ್ಟು ನಿಂತಿವೆಂದು ಗ್ರಾಮಸ್ಥರು ದೂರುತ್ತಾರೆ.

ಇಲ್ಲಿಗೆ ನೀರು ಬೇಕಿದೆ: ಬಿಸಿಲಿನ ತಾಪ ಹೆಚ್ಚುತ್ತಿರುವ ಕಾರಣ ನೆರಿಗೇಹಳ್ಳಿ, ಬ್ಯಾಲಹಳ್ಳಿ, ನೇರಲಕಟ್ಟೆ ಗೊಲ್ಲರಹಟ್ಟಿ, ತಾಳಕೆರೆ ಮಂಕಿಕೊಪ್ಪೆ, ಆನೇಕೆರೆ ಪಾಳ್ಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳ ಮೂಲಕ ಈ ಗ್ರಾಮಕ್ಕೆ ನೀರು ಪೂರೈಸುತ್ತಿದ್ದು ಅದಕ್ಕಾಗಿ ಪ್ರತಿ ತಿಂಗಳಿಗೆ ₹ 18,000 ಖರ್ಚು ಮಾಡಲಾಗಿದೆಂದು ಅಧಿಕಾರಿಯೊಬ್ಬರು ತಿಳಿಸಿದರು.

ನೀರಿನ ಗೋಳು ಕೇಳುವವರಿಲ್ಲ: ಹಟ್ಟಿಯಳ್ಳಿ ಗೊಲ್ಲರಹಟ್ಟಿ, ಲಕ್ಷ್ಮೀನಗರ ಮೊದ್ಲಾಪುರ, ದೊಡ್ಡಬೀರನ ಕೆರೆ, ಅಂಚೀಹಳ್ಳಿ, ತರಮನಕೋಟೆ ಕೊಪ್ಪ, ಡಿ.ಎನ್.ಪುರ, ಕರಡಗೆರೆ, ಬ್ಯಾಡರಹಳ್ಳಿ, ಇಳ್ಳೇನಹಳ್ಳಿ ಕಾವಲ್ ಗಳಲ್ಲೂ ನೀರಿನ ಬರ ಕಾಣಿಸಿಕೊಂಡಿದ್ದು ಕೇಳುವರಿಲ್ಲದಾಗಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಂದು ವಿಶ್ವಮಾವನ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ತಿಳಿಸಿದರು.

ಪಟ್ಟಣಿಗರಿಗೂ ತಟ್ಟಿದ ನೀರಿನ ಬಿಸಿ: ಪಟ್ಟಣದಲ್ಲಿ 16,400 ಜನಸಂಖ್ಯೆಯಿದೆ. ಇಲ್ಲಿನ ಜನರಿಗೆ ಮಲ್ಲಾಘಟ್ಟ ಕೆರೆಯಿಂದ ವರ್ಷಕ್ಕೆ 11 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಕೆರೆಯ ನೀರಿನ ಸಾಮರ್ಥ್ಯ 700 ಎಂಪಿಎಫ್.ಟಿ ಇದ್ದು ಸದ್ಯಕ್ಕೆ 487 ಎಂಪಿಎಫ್.ಟಿ ನೀರು ಮಾತ್ರ ಇದೆ. ಇಲ್ಲಿನ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 135 ಲೀಟರ್ ಬೇಕು ಆದರೆ 108 ಲೀಟರ್ ಮಾತ್ರ ಪೂರೈಕೆ ಮಾಡಲಾಗುತ್ತಿದೆ. 1 ಮತ್ತು 4 ನೇ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇದ್ದು ವಾರಕ್ಕೆ ಎರಡು ದಿನ ಮಾತ್ರ ಪಟ್ಟಣಿಗರಿಗೆ ನೀರು ಸಿಗುತ್ತದೆಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.

‘ಪಟ್ಟಣದ ಬಾಡಿಗೆ ಮನೆಯಲ್ಲಿರುವ ಜನರ ನೀರಿನ ಗೋಳು ಹೇಳತೀರದಾಗಿದೆ. ಕುಡಿಯಲು, ಗೃಹ ಕಾರ್ಯಗಳಿಗೆ, ಬಟ್ಟೆತೊಳೆಯ, ಸ್ನಾನ ಮಾಡಲು ನೀರಿಲ್ಲದೆ ಜನ ಹೈರಾಣಾಗಿದ್ದಾರೆ. ಕೆಲ ಮಾಲೀಕರು ಬಾಡಿಗೆದಾರರ ಮನೆಗಳಿಗೆ ಸಾವಿರ ರೂಪಾಯಿ ಕೊಟ್ಟು ಟ್ಯಾಂಕರ್ ಮೂಲಕ ನೀರು ಬಿಡಿಸುವ ಸ್ಥಿತಿ ಬಂದಿದೆ’ ಎಂದು  ಗೃಹಿಣಿ ಹರಿಣಿ ಬೇಸರ ವ್ಯಕ್ತಪಡಿಸಿದರು.

ಸೊರಗಿದ ತೆಂಗು, ಅಡಿಕೆ: ಇಲ್ಲಿನ ಜನತೆ ಪ್ರಧಾನ ವಾಣಿಜ್ಯ ಬೆಳೆಯಾಗಿ ತೆಂಗು ಬೆಳೆಯುವ ವಾಡಿಕೆ ಇದೆ. ಆದರೆ ಹೇಮಾವತಿ ನಾಲಾ ನೀರು ಬಂದ ಮೇಲೆ ಅಡಿಕೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ತಾಲ್ಲೂಕಿನಲ್ಲಿ 36,282 ಹೆಕ್ಟೇರ್ ತೆಂಗು, 5,270 ಹೆಕ್ಟೇರ್ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಈ ಬೆಳೆಗಳು ಕೆರೆಗಳ ಸುತ್ತಮುತ್ತಲಿನ ತೋಟಗಳಲ್ಲಿ ಸ್ವಲ್ಪ ಹಸಿರಾಗಿರುವುದು ಬಿಟ್ಟರೆ ಉಳಿದಂತೆ ಕೊಳವೆ ಬಾವಿಗಳು ಬತ್ತಿವೆ. ತೆಂಗು ಮತ್ತು ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಅದರಲ್ಲಿ ಕೋಳಘಟ್ಟ, ಅಜ್ಜನಹಳ್ಳಿ, ಮೊದ್ಲಾಪುರ, ನೀರುಗುಂದ, ಸೀಗೇಹಳ್ಳಿ, ನಾಯಕನಘಟ್ಟ, ಆನೇಕೆರೆ ಮತ್ತು ಸೀಗೇಹಳ್ಳಿ ಭಾಗಗಳ ರೈತರೇ ಹೆಚ್ಚು. ಕೆಲವೆಡೆ ನೀರಿಲ್ಲದೆ ತೆಂಗು ಮತ್ತು ಅಡಿಕೆ ಸಸಿಗಳು ಒಣಗುತ್ತಿದ್ದು ಅವುಗಳನ್ನು ಉಳಿಸಿಕೊಳ್ಳಲು ರೈತರು ಕೊಳವೆ ಬಾವಿಕೊರೆಸಲು ಮುಂದಾಗಿದ್ದರೂ ಬೇಡಿಕೆ ಇರುವ ಕಾರಣ ಬೋರ್ ವೆಲ್ ಲಾರಿಗಳು ಸಿಗದೆ ರೈತರು ಚಿಂತೆಗೀಡಾಗಿದ್ದಾರೆ ಎನ್ನುತ್ತಾರೆ ರೈತ ಲೋಕಮ್ಮನಹಳ್ಳಿ ಕಾಂತರಾಜ್.

ಸದ್ಯಕ್ಕೆ ಮೇವಿದೆ: ಈ ಬಾರಿ ವಾಡಿಕೆ ಮಳೆಗಿಂತ ಅತೀ ಕಡಿಮೆ ಮಳೆಯಾಗಿದ್ದು ರಾಗಿ ಹುಲ್ಲಿಗೆ ಬೇಡಿಕೆ ಹೆಚ್ಚಿದೆ. ಕೆಲವೆಡೆ ಅಗ್ನಿ ಅವಘಡಗಳು ಹೆಚ್ಚಿರುವ ಕಾರಣ ಮೇವು ಹಾಳಾಗಿ ಜಾನುವಾರಗಳ ಮೇವಿಗೆ ಕೆಲವೆಡೆ ಕೊರತೆ ಕಾಡಿದೆ. ದಬ್ಬೇಘಟ್ಟ, ಮಾಯಸಂದ್ರ ಕಸಬಾದ ಹೋಬಳಿಯ ಕೆಲವು ಭಾಗಗಳಲ್ಲಿ ಮೇವಿನ ಸಮಸ್ಯೆ ಇದ್ದು ಕೆಲ ರೈತರು ಟನ್ ಗೆ ₹ 4,500 ನೀಡಿ ಚನ್ನರಾಯಪಟ್ಟಣದಿಂದ ಮುಸುಕಿನ ಜೋಳದ ಮೇವು ತರಿಸಿಕೊಳ್ಳುತ್ತಿದ್ದಾರೆಂದು ರೈತರೊಬ್ಬರು ತಿಳಿಸಿದರು.

‘ತಾಲ್ಲೂಕಿನಲ್ಲಿ ಹಸು, ಎಮ್ಮೆ 57,309 ಇವೆ, ಕುರಿ-ಮೇಕೆಗಳು 79,217 ಇವೆ. ಇವುಗಳಿಗೆ 10 ವಾರಕ್ಕೆ ಆಗುವಷ್ಟು ಸದ್ಯಕ್ಕೆ ಮೇವಿದೆ. ಆ ನಂತರ ಮಳೆಬೀಳುವುದು ತಡವಾದರೆ ಗೋಶಾಲೆ ತೆರೆಯಬೇಕಾಗುತ್ತದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ರೇವಣ ಸಿದ್ದಪ್ಪ.

ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ: ‘ಬಾಣಸಂದ್ರ ಸಮೀಪದ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ 230 ಹಸು ಮತ್ತು ಓರಿಗಳಿವೆ.1 ಟನ್ ಹಸಿ ಮತ್ತು2 ಟನ್ ಓಣ ಮೇವು ಹಾಗು ರಾಸುಗಳಿಗೆ ಕುಡಿಯಲು 6 ಕೊಳವೆ ಬಾವಿಗಳ ನೀರಿದ್ದು ಇನ್ನೂ ಸ್ವಲ್ಪ ದಿನದೂಡಬಹುದು’ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದರು.

ಅರಣ್ಯಕ್ಕೆ ಬೆಂಕಿ: ಮಾಯಸಂದ್ರ ಹೋಬಳಿಯ ಮೀಸಲು ಅರಣ್ಯಗಳಾದ ಸೀಗೇಹಳ್ಳಿ ಕಾಡಲ ಗಿಡದ ಕಾವಲ್‌ನಲ್ಲಿ ಅಲ್ಲಲ್ಲಿ ಡೀಮ್ಡ್ ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಟ ಹೆಚ್ಚಾಗಿದ್ದು ಇಲ್ಲಿನ ಪ್ರಾಣಿಗಳಿಗೆ ಜೀವ ಹಾನಿಯಾಗುವುದರ ಜೊತೆಗೆ ಮೇವಿನ ತೊಂದರೆ ಕಾಡಲಿದೆ. ಅರಣ್ಯ ಮಧ್ಯೆ ಇರುವ ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ಅದು ಮುಗಿದರೆ ಅಲ್ಲಲ್ಲಿ ಕಾಡು ಪ್ರಾಣಿಗಳಿಗೆ ನೀರಿಡುವ ವ್ಯವಸ್ಥೆ ಮಾಡಲಾಗುವುದೆಂದು ಅರಣ್ಯ ರಕ್ಷಕರೊಬ್ಬರು ತಿಳಿಸಿದರು.

ತುರುವೇಕೆರೆ ತಾಲ್ಲೂಕಿನ ಸಾರಿಗೇಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
ತುರುವೇಕೆರೆ ತಾಲ್ಲೂಕಿನ ಸಾರಿಗೇಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
ತುರುವೇಕೆರೆ ತಾಲ್ಲೂಕಿನ ಹಳ್ಳಿಕಾರ್ ತಳಿಸಂವರ್ಧನ ಕೇಂದ್ರದ ಹಸುಗಳು ಬಿಸಿಲಿನಲ್ಲಿ ಮೇಯುತ್ತಿರುವುದು.
ತುರುವೇಕೆರೆ ತಾಲ್ಲೂಕಿನ ಹಳ್ಳಿಕಾರ್ ತಳಿಸಂವರ್ಧನ ಕೇಂದ್ರದ ಹಸುಗಳು ಬಿಸಿಲಿನಲ್ಲಿ ಮೇಯುತ್ತಿರುವುದು.
ತುರುವೇಕೆರೆ ತಾಲ್ಲೂಕಿನ ಮಾದಿಹಳ್ಳಿ ಹೊರ ವಲಯದಲ್ಲಿನ ತೋಟಗಳು ನೀರಿಲ್ಲದೆ ಒಣಗುತ್ತಿದೆ
ತುರುವೇಕೆರೆ ತಾಲ್ಲೂಕಿನ ಮಾದಿಹಳ್ಳಿ ಹೊರ ವಲಯದಲ್ಲಿನ ತೋಟಗಳು ನೀರಿಲ್ಲದೆ ಒಣಗುತ್ತಿದೆ
ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಕೆರೆಯಲ್ಲಿ ನೀರು ಕಡಿಮೆಯಾಗಿದೆ
ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಕೆರೆಯಲ್ಲಿ ನೀರು ಕಡಿಮೆಯಾಗಿದೆ
ತುರುವೇಕೆರೆ ತಾಲ್ಲೂಕಿನಲ್ಲಿ ನೀರಿಲ್ಲದೆ ಒಣಗುತ್ತಿರುವ ತೆಂಗಿನ ಸಸಿಗಳು.
ತುರುವೇಕೆರೆ ತಾಲ್ಲೂಕಿನಲ್ಲಿ ನೀರಿಲ್ಲದೆ ಒಣಗುತ್ತಿರುವ ತೆಂಗಿನ ಸಸಿಗಳು.
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಕಟ್ಟೆಯೊಂದರಲ್ಲಿ ಎಮ್ಮೆಗಳಿಗೆ ನೀರು ಕುಡಿಸುತ್ತಿರುವ ರೈತರು
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಕಟ್ಟೆಯೊಂದರಲ್ಲಿ ಎಮ್ಮೆಗಳಿಗೆ ನೀರು ಕುಡಿಸುತ್ತಿರುವ ರೈತರು
‘ತಾಲ್ಲೂಕಿಗೆ ನಿಗಧಿಪಡಿಸಿದಂತೆ 5.5 ಟಿಎಂಸಿ ಹೇಮಾವತಿ ನೀರನ್ನು ಟಿ.ಬಿ.ಸಿ. ನಾಲೆಯಿಂದ ಬಿಡಲಾಗಿದೆ. ಆದರೆ ಎನ್.ಬಿ.ಸಿ ನಾಲೆಯಿಂದ ಇಲ್ಲಿಯ ತನಕ ಒಂದು ತೊಟ್ಟೂ ನೀರು ಬಿಟ್ಟಿಲ್ಲ ಶೀಘ್ರವೇ ನೀರು ಬಿಡಬೇಕು
-ಎಂ.ಟಿ.ಕೃಷ್ಣಪ್ಪ ಶಾಸಕ
- ಎನ್‌ಡಿಆರ್‌ಎಫ್‌ ಅಡಿ ತಾಲ್ಲೂಕಿಗೆ ₹ 25 ಲಕ್ಷ ಅನುದಾನ ಬಂದಿದ್ದು ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಹೊಸದಾಗಿ ಕೊರೆಯಿಸಿರುವ ಕೊಳವೆ ಬಾವಿಗಳಿಗೆ ಪೈಪ್ ಲೈನ್ ಅಳವಡಿಕೆಗೆ ಹಣ ಬಳಸಲಾಗುತ್ತಿದೆ
ವೈ.ಎಂ.ರೇಣುಕುಮಾರ್ ತಹಶೀಲ್ದಾರ್
ಸರ್ಕಾರ ಮಲ್ಲಾಘಟ್ಟ ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡಿಸಬೇಕು. ಇದರಿಂದ ಆ ಭಾಗದ ಲೋಕಮ್ಮನಹಳ್ಳಿ ಆನೇಕೆರೆ ಕೊಡಗೀಹಳ್ಳಿ ಮತ್ತು ಬಾಣಸಂದ್ರ ಪಂಚಾಯಿತಿ ವ್ಯಾಪ್ತಿಯ ಅಪಾರ ಗ್ರಾಮಗಳಿಗೆ ಶ್ವಾಶ್ವತ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಅನುಕೂಲವಾಗಲಿದೆ.
-ದೊಡ್ಡಾಘಟ್ಟ ಚಂದ್ರೇಶ್ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್
ಕೊಳವೆ ಬಾವಿ ಕೊರೆಯಿಸುವುದು ನೀರಿನ ಸಮಸ್ಯೆ ನೀಗಿಸುವ ಪರಿಹಾರ ಕ್ರಮವಲ್ಲ. ಸರ್ಕಾರ ಕೆರೆಕಟ್ಟೆಗಳ ಹೂಳೆತ್ತಿಸಿ ಪ್ರತಿಯೊಬ್ಬ ರೈತರಿಗೂ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವಂತೆ ಅನುದಾನ ನೀಡಿದಾಗ ಮಾತ್ರ ನೀರಿನ ಸಂರಕ್ಷಣೆ ಮಾಡಲು ಸಾದ್ಯವಾಗಲಿದೆ
- ಎನ್.ಆರ್.ಜಯರಾಮ್ ಅಧ್ಯಕ್ಷ ತಾಲ್ಲೂಕು ತೆಂಗು–ಅಡಿಕೆ ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT