ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಲೀಸರ ರಕ್ಷಣೆಯಲ್ಲಿ ಸುಂಕ ವಸೂಲಾತಿ ಹರಾಜು

ಕುಣಿಗಲ್‌ ಪುರಸಭೆ ಹರಾಜು ಪ್ರಕ್ರಿಯೆಗೆ ತೀವ್ರ ವಿರೋಧ
Published 30 ಜೂನ್ 2024, 6:06 IST
Last Updated 30 ಜೂನ್ 2024, 6:06 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆಯ ಸುಂಕ ಹರಾಜು ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಪೊಲೀಸರ ರಕ್ಷಣೆಯಲ್ಲಿ ಶನಿವಾರ ಹರಾಜು ನಡೆಯಿತು.

ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಸುಲಭ ಶೌಚಾಲಯ, ಸುಂಕ ವಸೂಲಾತಿ ಮತ್ತು ವಾರದ ಸಂತೆ, ದಿನವಹಿ ನೆಲವಳಿ ಸುಂಕದ ಹರಾಜು ಪ್ರಕ್ರಿಯೆಗಳು ಮುಖ್ಯಾಧಿಕಾರಿ ಮಂಜುಳಾ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಬೀದಿ ಬದಿ ವ್ಯಾಪಾರಿ ಮತ್ತು ಕಳೆದ ಬಾರಿ ಸುಂಕ ವಸೂಲಾತಿ ಹರಾಜು ಪಡೆದವರು ತೀವ್ರ ವಿರೋಧ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದರು. ನಂತರ ಪೊಲೀಸರು ಬಂದು ಸುಗಮ ಹರಾಜಿಗೆ ಕ್ರಮ ಕೈಗೊಂಡರು.

ಸಂತೆ ಮೈದಾನ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಿಗಳಿಂದ ಸುಂಕ ವಸೂಲಾತಿ ಹರಾಜು ಪ್ರಕ್ರಿಯೆ ನಡೆಯುವಾಗ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಧನಂಜಯ್ಯ, ಪಟ್ಟಣದಲ್ಲಿ 700 ಮಂದಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋವಿಡ್‌ನಿಂದಾಗಿ ಸುಂಕ ವಸೂಲಾತಿಗೆ ವಿನಾಯಿತಿ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸುಂಕ ವಸೂಲಾತಿ ಹರಾಜು ಮಾಡುತ್ತಿದ್ದಾರೆ. ಸುಂಕ ವಸೂಲಿ ಮಾಡುವವರು ಬಡ ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಮಾಡುತ್ತಾರೆ. ನೋಂದಾಯಿತ ಬೀದಿಬದಿ ವ್ಯಾಪಾರಿಗಳನ್ನು ಹೊರತುಪಡಿಸಿ ಇತರೆ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಕೆಲವು ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿ ತೊಂದರೆ ನೀಡುತ್ತಿದ್ದಾರೆ. ಎಲ್ಲರನ್ನೂ ತೆರ‌ವುಗೊಳಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಶೌಚಾಲಯಗಳ ಹರಾಜು ಪ್ರಕ್ರಿಯೆ ಸಮಯದಲ್ಲಿ ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಗಳು ನಿಯಮಾವಳಿ ಪ್ರಕಾರ ನಡೆದಿಲ್ಲ. ಶೌಚಾಲಯಗಳ ಸುಸ್ಥಿತಿ ಬಗ್ಗೆ ಗಮನ ಹರಿಸದ ಕಾರಣ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದರು.

ಬೀದಿಬದಿ ವ್ಯಾಪಾರಿಗಳ ಆಗ್ರಹಕ್ಕೆ ಮಣಿದ ಮುಖ್ಯಾಧಿಕಾರಿ ಮಂಜುಳಾ, ಸಾರ್ವಜನಿಕ ಶೌಚಾಲಯ ಮತ್ತು ಬಸ್ ನಿಲ್ದಾಣದ ಸುಂಕ ವಸೂಲಾತಿ ಹರಾಜು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉಳಿದಂತೆ ಸಂತೆ ಮೈದಾನ ಮತ್ತು ದಿನವಹಿ ನೆಲವಳಿ ಸುಂಕ ಹರಾಜು ಪ್ರಕ್ರಿಯೆಯನ್ನು ಮುಂದೂಡಿದರು.

ಖಾಸಗಿ ಬಸ್ ನಿಲ್ದಾಣ ಶೌಚಾಲಯ ಹರಾಜಿನಿಂದ ₹6.60 ಲಕ್ಷ ಮತ್ತು ಬಸ್ ನಿಲ್ದಾಣ ಸುಂಕ ಹರಾಜಿನಿಂದ ₹5.10 ಲಕ್ಷ ಪುರಸಭೆಗೆ ಆದಾಯ ಬಂತು.

ಕಂದಾಯ ಅಧಿಕಾರಿ ಮುನಿಯಪ್ಪ, ಪರಿಸರ ಎಂಜನಿಯರ್ ಚಂದ್ರಶೇಖರ್, ಪುರಸಭೆ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್, ದೇವರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT