ಮಂಗಳವಾರ, ಸೆಪ್ಟೆಂಬರ್ 21, 2021
21 °C
ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಸಹಕಾರಿ; ಸಮಯ ಸಿಕ್ಕಾಗಲೆಲ್ಲ ಅಭ್ಯಾಸ

ವರವಾದ ಸ್ಮಾರ್ಟ್ ಸಿಟಿ ಯೋಜನೆ: ಇ–ಗ್ರಂಥಾಲಯ ಸೇರಿದ ಸಾವಿರಾರು ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಗ್ರಂಥಾಲಯಗಳು ಮುಚ್ಚಿದ್ದವು. ಯುಪಿಎಸ್‌ಸಿ– ಕೆಪಿಎಸ್‌ಸಿ ಪರೀಕ್ಷೆಗೆ ಅಭ್ಯಾಸ ಮಾಡಲು, ಪುಸ್ತಕ ಪರಾಮರ್ಶೆ ಸಾಧ್ಯವಾಗದೆ ದಿಕ್ಕು ತೋಚದಂತಾಗಿತ್ತು. ಕೊನೆಗೆ ‘ಇ–ಗ್ರಂಥಾಲಯ’ ನನಗೆ ಮಾರ್ಗ ತೋರಿಸಿತು. ಈಗ ಅದರಲ್ಲೇ ಅಭ್ಯಾಸ ಮಾಡುತ್ತಿದ್ದೇನೆ’.

–ಹೀಗೆ ಸ್ಮರಿಸಿಕೊಂಡವರು ನಗರದ ನಾಗೇಶ್ವರ್. ‘ತುಮಕೂರು ಡಿಜಿಟಲ್ ಲೈಬ್ರರಿ’ ಇವರೊಬ್ಬರ ನೆರವಿಗೆ ಬಂದಿಲ್ಲ. ಇಂತಹ ಸಾವಿರಾರು ಜನರ ಓದಿಗೆ ನೆರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದವರು, ವಿದ್ಯಾರ್ಥಿಗಳು, ಉದ್ಯೋಗ ಮಾಹಿತಿ ಪಡೆದುಕೊಳ್ಳಲು ಪರದಾಡುತ್ತಿರುವವರಿಗೆ ಸಹಕಾರಿಯಾಗಿದೆ.

ತಮಗೆ ಬೇಕಾದ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆದುಕೊಳ್ಳಬಹುದಾಗಿದೆ. ಪರೀಕ್ಷೆಗೆ ಬೇಕಾದ ಪಠ್ಯವನ್ನೂ ಓದಬಹುದಾಗಿದ್ದು, ಗ್ರಂಥಾಲಯಕ್ಕೆ ಹೋಗದೆ ಮನೆಯಲ್ಲೇ ಕುಳಿತು ಅಭ್ಯಾಸ ಮಾಡುವ ಅವಕಾಶ ದೊರಕಿದೆ.

ಸ್ಮಾರ್ಟ್ ಫೋನ್, ಕಂಪ್ಯೂಟರ್, ಟ್ಯಾಬ್‌ ಜತೆಗೆ ಇಂಟರ್‌ನೆಟ್ ಸಂಪರ್ಕ ಹೊಂದಿದ್ದರೆ ಎಲ್ಲಾ ಮಾಹಿತಿಯೂ ಲಭ್ಯ. ರಾತ್ರಿ– ಹಗಲೆನ್ನದೆ ಬೇಕಾದ ಸಮಯದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದಾಗಿದೆ.

ಮೂಡಿದ ಬಗೆ: ಗ್ರಂಥಾಲಯದಲ್ಲಿ ಕೆಲವು ಪ್ರಮುಖ ಲೇಖಕರ ಸೀಮಿತ ಸಂಖ್ಯೆಯ ಕೃತಿಗಳು ಇರುತ್ತಿದ್ದವು. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವಾಗ ಸಾಕಷ್ಟು ಮಂದಿಗೆ ಇಂತಹ ಪುಸ್ತಕಗಳ ಅಗತ್ಯತೆ ಇತ್ತು. ಆದರೆ ಎಲ್ಲರಿಗೂ ಪುಸ್ತಕಗಳು ದೊರಕುತ್ತಿರಲಿಲ್ಲ. ಪುಸ್ತಕಗಳಿಗೆ ಪರದಾಡುವುದನ್ನು ಮನಗಂಡು ಇ–ಗ್ರಂಥಾಲಯ ರೂಪಿಸಲಾಯಿತು. ಇದರಿಂದ ಸಾವಿರಾರು ಜನರಿಗೆ ಉಪಯೋಗವಾಗುತ್ತಿದೆ ಎಂದು ಗ್ರಂಥಾಲಯ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಸಿಬ್ಬಂದಿ ಸ್ಮರಿಸಿಕೊಳ್ಳುತ್ತಾರೆ.

ಸ್ಮಾರ್ಟ್ ಸಿಟಿ ನೆರವು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿದ್ದು, ಅದರ ಭಾಗವಾಗಿ ಡಿಜಿಟಲ್ ಗ್ರಂಥಾಲಯ ರೂಪುಗೊಳ್ಳಲು ಆರ್ಥಿಕ ನೆರವು, ಮಾನವ ಸಂಪನ್ಮೂಲ ಒದಗಿಸಲಾಗಿದೆ. ಈ ಯೋಜನೆಯಲ್ಲಿ ರಸ್ತೆ, ಚರಂಡಿ, ಬಸ್ ನಿಲ್ದಾಣದಂತಹ ಕಾಮಗಾರಿಗಳಷ್ಟೆ ಅಲ್ಲದೆ ಜ್ಞಾನದ ಪ್ರಸರಣಕ್ಕೂ ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಯಲ್ಲಿ ಸಾಕಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪುಸ್ತಕಗಳನ್ನು ಅಪ್‌ಲೋಡ್ ಮಾಡಲು ಸಹಕಾರಿಯಾಗಿದೆ.

58 ಸಾವಿರ ಪುಸ್ತಕ: ಡಿಜಿಟಲ್ ಲೈಬ್ರರಿಗೆ ಈವರೆಗೆ ಸುಮಾರು 58 ಸಾವಿರ ಪುಸ್ತಕಗಳನ್ನು ಅಪ್‌ಲೋಡ್ ಮಾಡಲಾಗಿದೆ. ಆಂಗ್ಲ ಭಾಷೆಯ 47,950, ಹಿಂದಿ ಭಾಷೆಯ 9 ಸಾವಿರ, ಕನ್ನಡದ 178 ಪುಸ್ತಕಗಳು ಇದರಲ್ಲಿ ಲಭ್ಯ ಇವೆ. ಕಳೆದ ವರ್ಷ 5 ಸಾವಿರ ಅಪ್‌ಲೋಡ್ ಮಾಡಿದ್ದು, ಈ ವರ್ಷ 10 ಸಾವಿರ ಪುಸ್ತಕಗಳನ್ನು ಅಪ್‌ಲೋಡ್ ಮಾಡುವ ಗುರಿ ಹೊಂದಲಾಗಿದೆ. ಇಂಗ್ಲಿಷ್ ಪುಸ್ತಕಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಇ–ಗ್ರಂಥಾಲಯಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದ್ದು, ಅಂತಹ ಪುಸ್ತಕಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಗ್ರಂಥಾಲಯದ ಮೂಲಗಳು ತಿಳಿಸಿವೆ.

ಪುಸ್ತಕಗಳಷ್ಟೇ ಅಲ್ಲದೆ ಇತರ ಮಾಹಿತಿಗಳು ಸಿಗುವಂತೆ ಮಾಡಲಾಗಿದೆ. ಇ–ಜರ್ನಲ್ಸ್, ಇ–ಮ್ಯಾಗಜೀನ್, ಉದ್ಯೋಗ ಮಾಹಿತಿಗಳು ಸಿಗುತ್ತವೆ. ‘ಇಂಟೆಲಿಜೆಂಟ್ ಬಿಸಿನೆಸ್ ನ್ಯೂಸ್’ ಸಹ ಸಿಗುತ್ತದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ಜನರು ಓದಿದ, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿ, ಸುದ್ದಿ, ಲೇಖನವನ್ನು ‘ಇಂಟೆಲಿಜೆಂಟ್ ಬಿಸಿನೆಸ್ ನ್ಯೂಸ್’ ಅಡಿಯಲ್ಲಿ ನೀಡಲಾಗುತ್ತದೆ. ಅಂತಹ ಸುದ್ದಿ ಮಾಹಿತಿ ಹಾಗೂ ಹೆಚ್ಚಿನ ವಿವರಗಳಿಗೆ ಅದರ ಲಿಂಕ್‌ಅನ್ನು ಒದಗಿಸಲಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಹೆಚ್ಚು ಸಹಕಾರಿಯಾಗಿದೆ.

ಡಿಜಿಟಲ್ ಲೈಬ್ರರಿ ಲಿಂಕ್: Tumakurudigitallibrary.in

10 ಲಕ್ಷಕ್ಕೆ ಏರಿಕೆ
2019ರಲ್ಲಿ ಡಿಜಿಟಲ್ ಲೈಬ್ರರಿ ಆರಂಭವಾಗಿದ್ದು, ಈವರೆಗೆ 10 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 26,380 ಜನರು ನೋಂದಣಿ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಸಮಯದಲ್ಲಿ 22 ಸಾವಿರಕ್ಕೂ ಹೆಚ್ಚು ಜನರು ಅಭ್ಯಾಸ ಮಾಡಿದ್ದಾರೆ.

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿ ನಿತ್ಯ 150ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಪ್ರಸ್ತುತ ಪ್ರತಿ ದಿನವೂ ಸರಾಸರಿ 60ರಿಂದ 70 ಮಂದಿ ಓದು ಮುಂದುವರಿಸಿದ್ದಾರೆ.

ಸ್ಥಳೀಯ ಸಾಹಿತಿಗಳಿಗೆ ಅವಕಾಶ
ಜಿಲ್ಲೆಯ ಹಾಗೂ ಸ್ಥಳೀಯ ಸಾಹಿತಿಗಳ ಪುಸ್ತಕಗಳನ್ನೂ ಅಪ್‌ಲೋಡ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಲೇಖಕರು ಹಾಗೂ ಪ್ರಕಾಶಕರ ಒಪ್ಪಿಗೆ ಪಡೆದು ಈವರೆಗೆ ಜಿಲ್ಲೆಯ 25 ಸಾಹಿತಿಗಳ ಪುಸ್ತಕಗಳನ್ನು ಇ–ಗ್ರಂಥಾಲಕ್ಕೆ ಸೇರಿಸಲಾಗಿದೆ.

ಇದರಲ್ಲಿ ಮಕ್ಕಳಿಗೂ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಮಕ್ಕಳೇ ಬರೆದ ಲೇಖನ ಹಾಗೂ ಇತರ ಬರಹಗಳನ್ನು ಪ್ರಕಟ ಮಾಡಲಾಗಿದೆ. ಓದುಗರು, ಲೇಖಕರು, ಸಾಹಿತಿಗಳಿಗಷ್ಟೇ ಅನುಕೂಲಕರವಾಗಿಲ್ಲ. ಮಕ್ಕಳು ಹಾಗೂ ಯುವ ಪ್ರತಿಭಟನೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಯುವ ಬರಹಗಾರರಿಗೂ ಅವಕಾಶ ಮಾಡಿಕೊಡಲಾಗಿದೆ. ಡಿಜಿಟಲ್ ಲೈಬ್ರರಿ ಮೂಲಕ ಪುಸ್ತಕ ಬಿಡುಗಡೆಗೆ ವೇದಿಕೆ ಕಲ್ಪಿಸುವ ಪ್ರಯತ್ನಗಳೂ ಸಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.