ಗೊಡ್ರಹಳ್ಳಿ ಮತಗಟ್ಟೆ ಸಂಖ್ಯೆ 160: ಪಟ್ಟಿಯಲ್ಲಿ ಮತದಾರರ ಹೆಸರೇ ಇಲ್ಲ!

ಮಂಗಳವಾರ, ಏಪ್ರಿಲ್ 23, 2019
25 °C
54 ಮತದಾರರ ಹೆಸರು ನಾಪತ್ತೆ

ಗೊಡ್ರಹಳ್ಳಿ ಮತಗಟ್ಟೆ ಸಂಖ್ಯೆ 160: ಪಟ್ಟಿಯಲ್ಲಿ ಮತದಾರರ ಹೆಸರೇ ಇಲ್ಲ!

Published:
Updated:
Prajavani

ಕೊರಟಗೆರೆ: ತಾಲ್ಲೂಕಿನ ಗೊಡ್ರಹಳ್ಳಿ ಮತಗಟ್ಟೆ ಸಂಖ್ಯೆ 160ರಲ್ಲಿ ಮತದಾರರ ಪಟ್ಟಿಯಲ್ಲಿನ 54 ಮತದಾರರ ಹೆಸರನ್ನು ಕೈ ಬಿಟ್ಟಿದ್ದು, ಗ್ರಾಮದಲ್ಲಿ ಮತದಾನ ಚೀಟಿ ಹಂಚುವ ವೇಳೆ ಬೆಳಕಿಗೆ ಬಂದಿದೆ.

ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಮತ್ತು ತಹಶೀಲ್ದಾರ್‌ಗೆ ಮಾಹಿತಿಯೇ ಇಲ್ಲದೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿದ್ದು, ಮತದಾನದ ಹಕ್ಕು ನೀಡುವಂತೆ ಮತದಾರರು ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಮತದಾನದ ಹಕ್ಕು ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಗೊಡ್ರಹಳ್ಳಿ ಗ್ರಾಮದ ಮತಗಟ್ಟಿ ಸಂಖ್ಯೆ 160ರ ವ್ಯಾಪ್ತಿಯಲ್ಲಿ ಗೊಡ್ರಹಳ್ಳಿ, ಬಿಳೇಕಲ್ಲಹಳ್ಳಿ, ಭಕ್ತರಹಳ್ಳಿ ಗ್ರಾಮ ಸೇರಿ 2018-19ನೇ ಸಾಲಿನಲ್ಲಿ ಒಟ್ಟು 877 ಮತದಾರರು ಇದ್ದಾರೆ.

2019- 20ನೇ ಸಾಲಿನ ನೂತನ ಪರಿಷ್ಕರಣೆಯ ನಂತರ 823 ಜನ ಮತದಾರರ ಹೆಸರು ಮಾತ್ರ ಪಟ್ಟಿಯಲ್ಲಿ ಇದೆ. 54 ಮತದಾರರ ಹೆಸರನ್ನು ಏಕಾಏಕಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.

‘2018-19ನೇ ಸಾಲಿನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಇದ್ದ ಮತದಾರರ ಹೆಸರನ್ನು ಮತಗಟ್ಟಿಯ ಬಿಎಲ್ಒ ಸೌಭಾಗಮ್ಮ ನೋಡಿಲ್ಲವೇ. ಮತದಾರರ ಪಟ್ಟಿಯ ನೂತನ ಪರಿಷ್ಕರಣೆ ವೇಳೆ ಇವರ ಗಮನಕ್ಕೆ ಬರದೇ 54 ಮತದಾರರ ಹೆಸರು ಹೇಗೆ ಕೈಬಿಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವ ವೇಳೆ ಸ್ಥಳೀಯ ಬಿಎಲ್ಒ, ಸೆಕ್ಟರ್‌ ಅಧಿಕಾರಿ (ಎಸ್‌ಒ) ಮತ್ತು ತಹಶೀಲ್ದಾರ್‌ಗೆ ಮತದಾರರ ಪಟ್ಟಿ ಅಂಕಿ–ಅಂಶ ಇಲ್ಲದೇ ಪಟ್ಟಿಯ ಜೋಡಣೆ ಕೆಲಸ ಮಾಡಿದ್ದಾರೆಯೇ’ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

‘ಗೊಡ್ರಹಳ್ಳಿ ಗ್ರಾಮದ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ ನಂತರ ಮತಗಟ್ಟೆಯ ಬಿಎಲ್ಒ ಸೌಭಾಗಮ್ಮ 8 ಮತದಾರರ ಹೆಸರನ್ನು ತೆಗೆಯುವಂತೆ ಎಸ್ಒ ಮೂಲಕ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ತಹಶೀಲ್ದಾರ್ ಪರಿಶೀಲನೆ ನಡೆಸಿ 6 ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇನ್ನುಳಿದ 48 ಜನರ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವ ಅಂಶ ಸ್ವತಃ ತಹಶೀಲ್ದಾರ್‌ಗೆ ಮಾಹಿತಿ ಇಲ್ಲದಿರುವುದು ವಿಪರ್ಯಾಸದ ಸಂಗತಿ’ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !